ಪ್ರತಿಭಟನಾನಿರತರ ಮೇಲೆಯೇ ನುಗ್ಗಿದ ಪೊಲೀಸ್ ವ್ಯಾನ್
ಮನಿಲಾ (ಫಿಲಿಪ್ಪೀನ್ಸ್), ಅ. 19: ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿರುವ ಅಮೆರಿಕನ್ ರಾಯಭಾರ ಕಚೇರಿಯ ಎದುರು ಬುಧವಾರ ಪ್ರತಿಭಟನೆ ಮಾಡುತ್ತಿದ್ದ ಜನರ ಮೇಲೆಯೇ ಪೊಲೀಸ್ ವ್ಯಾನೊಂದು ನುಗ್ಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ಚಲಾಯಿಸುತ್ತಿದ್ದ ವ್ಯಾನೊಂದು ಜನರ ಮೇಲೆ ನುಗ್ಗಿದ ಬಳಿಕ, ಕನಿಷ್ಠ ಮೂವರು ವಿದ್ಯಾರ್ಥಿ ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತಿಭಟನಾ ನಾಯಕ ರೆನಾಟೊ ರೆಯೆಸ್ ತಿಳಿಸಿದರು.
ಪೊಲೀಸರ ಲಾಠಿಗಳನ್ನು ಕಸಿದುಕೊಂಡ ಪ್ರತಿಭಟನಕಾರರು ವ್ಯಾನ್‌ಗೆ ಬಡಿಯಲು ಆರಂಭಿಸಿದಾಗ ವ್ಯಾನ್ ಹಲವಾರು ಬಾರಿ ಜನರ ಮೇಲೆಯೇ ಹಿಂದೆ ಮುಂದೆ ಚಲಿಸಿರುವುದು ಎಪಿ ಸುದ್ದಿಸಂಸ್ಥೆಯ ವೀಡಿಯೊದಲ್ಲಿ ದಾಖಲಾಗಿದೆ.
ಪೊಲೀಸರು ಹಾಕಿರುವ ಗಡಿಯವನ್ನು ಉಲ್ಲಂಘಿಸಿದ ಹಾಗೂ ಪೊಲೀಸರು ಮತ್ತು ರಾಯಭಾರ ಕಚೇರಿಯಲ್ಲಿರುವ ಅಮೆರಿಕ ಸರಕಾರದ ಲಾಂಛನದ ಮೇಲೆ ಕೆಂಪು ಶಾಯಿ ಚೆಲ್ಲಿದ ಆರೋಪದ ಮೇಲೆ ಪೊಲೀಸರು ಬಳಿಕ 23 ಪ್ರತಿಭಟನಕಾರರನ್ನು ಬಂಧಿಸಿದ್ದಾರೆ.