ಎರಡನೆ ಏಕದಿನ ಪಂದ್ಯ: ಭಾರತಕ್ಕೆ ನ್ಯೂಝಿಲೆಂಡ್ ವಿರುದ್ಧ 6 ರನ್‌ಗಳ ಸೋಲು
ಹೊಸದಿಲ್ಲಿ, ಅ.20: ಇಲ್ಲಿ ನಡೆದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ 6 ರನ್‌ಗಳ ರೋಚಕ ಜಯ ಗಳಿಸಿದೆ.
ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಗೆಲುವಿಗೆ 243 ರನ್‌ಗಳ ಸವಾಲು ಪಡೆದ ಭಾರತ 49.3 ಓವರ್‌ಗಳಲ್ಲಿ 236 ರನ್ ಗಳಿಸುವಷ್ಟರಲ್ಲಿ ಆಲೌಟಾಯಿತು.
ನ್ಯೂಝಿಲೆಂಡ್‌ತಂಡದ ಸೌಥಿ(52ಕ್ಕೆ3), ಮಾರ್ಟಿನ್ ಗಪ್ಟಿಲ್(6ಕ್ಕೆ 2), ಬೌಲ್ಟ್ (25ಕ್ಕೆ 2), ಹೆನ್ರಿ(51ಕ್ಕೆ 1), ಸ್ಯಾಂಟ್ನೆರ್(49ಕ್ಕೆ 1) ದಾಳಿಗೆ ತತ್ತರಿಸಿದ ಭಾರತಕ್ಕೆ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ ಮತ್ತು ನ್ಯೂಝಿಲೆಂಡ್ 1-1 ಗೆಲುವಿನೊಂದಿಗೆ ಸಮಬಲ ಸಾಧಿಸಿದೆ.
ಭಾರತದ ಪರ ಯಾರಿಗೂ ಅರ್ಧಶತಕ ದಾಖಲಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ಕೇದಾರ್ ಜಾಧವ್ 41 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ. ನಾಯಕ ಮಹೇಂದ್ರ ಸಿಂಗ್ ಧೋನಿ 39 ರನ್, ಹಾರ್ದಿಕ್ ಪಾಂಡ್ಯ 36 ರನ್, ಅಜಿಂಕ್ಯ ರಹಾನೆ 28 ರನ್, ರೋಹಿತ್ ಶರ್ಮ 15ರನ್, ವಿರಾಟ್ ಕೊಹ್ಲಿ 9 ರನ್, ಮನೀಷ್ ಪಾಂಡೆ 19ರನ್, ಅಕ್ಷರ್ ಪಟೇಲ್ 17 ರನ್, ಉಮೇಶ್ ಯಾದವ್ ಔಟಾಗದೆ 18 ರನ್ ಗಳಿಸಿದರು.
ನ್ಯೂಝಿಲೆಂಡ್ 242/9:ನಾಯಕ ಕೇನ್ ವಿಲಿಯಮ್ಸ್ ಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 242 ರನ್ ಗಳಿಸಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ನ್ಯೂಝಿಲೆಂಡ್ ಮೊದಲ ಓವರ್‌ನಲ್ಲಿ ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್ (0) ವಿಕೆಟ್ ಕಳೆದುಕೊಂಡರೂ, ಲಥಾಮ್ ಮತ್ತು ವಿಲಿಯಮ್ಸನ್ ಎರಡನೆ ವಿಕೆಟ್‌ಗೆ ದಾಖಲಿಸಿದ 120 ರನ್‌ಗಳ ಜೊತೆಯಾಟದ ನೆರವಿನಲ್ಲಿ ಸ್ಪರ್ಧಾತ್ಮಕ ರನ್ ದಾಖಲಿಸಿತು.
ಭಾರತದ ಪರ ದಾಳಿ ಆರಂಭಿಸಿದ ಉಮೇಶ್ ಯಾದವ್ ಎರಡನೆ ಎಸೆತದಲ್ಲಿ ಗಪ್ಟಿಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.ಗಪ್ಟಿಲ್ ಔಟಾದಾಗ ನ್ಯೂಝಿಲೆಂಡ್ ಖಾತೆ ತೆರೆದಿರಲಿಲ್ಲ. ಲಥಾಮ್‌ಗೆ ಜೊತೆಯಾದ ವಿಲಿಯಮ್ಸನ್ ಅವರು ಧೋನಿ ಪಡೆಯ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.
ವಿಲಿಯಮ್ಸನ್ ಶತಕದೊಂದಿಗೆ ನ್ಯೂಝಿಲೆಂಡ್ ಪರ ಭಾರತ ಪ್ರವಾಸದಲ್ಲಿ ಮೊದಲ ಶತಕ ದಾಖಲಾಗಿದೆ. ವಿಲಿಯಮ್ಸನ್ 95ನೆ ಪಂದ್ಯದಲ್ಲಿ 8ನೆ ಶತಕ ದಾಖಲಿಸಿದ್ದಾರೆ. 109 ಎಸೆತಗಳಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಅವರು ಶತಕ ಪೂರ್ಣಗೊಳಿಸಿದರು. ಲಥಾಮ್‌ಗೆ ಅರ್ಧಶತಕ ಗಳಿಸುವ ಹಾದಿಯಲ್ಲಿದ್ದಾಗ ಅವರನ್ನು ಕೇದಾರ್ ಜಾಧವ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಬಳಿಕ ವಿಲಿಯಮ್ಸನ್ ಕ್ರೀಸ್‌ಗೆ ಆಗಮಿಸಿದರು. ಮೊದಲ ಓವರ್‌ನಲ್ಲಿ ಕ್ರೀಸ್‌ಗೆ ಬಂದಿದ್ದ ವಿಲಿಯಮ್ಸನ್ 42.4ನೆ ಓವರ್‌ನಲ್ಲಿ ಕ್ರೀಸ್‌ನಿಂದ ನಿರ್ಗಮಿಸಿದರು. ಅವರು ನಿರ್ಗಮಿಸುವಾಗ ತಂಡದ ಸ್ಕೋರ್ 213ಕ್ಕೆ ತಲುಪಿತ್ತು. ಲಥಾಮ್ 46 ರನ್ , ವಿಲಿಯಮ್ಸನ್ 118 ರನ್(128ಎ, 14ಬೌ,1ಸಿ), ರಾಸ್ ಟೇಲರ್ 21ರನ್ ಮತ್ತು ಕೋರಿ ಆ್ಯಂಡರ್ಸನ್ 21 ರನ್ ಗಳಿಸಿದರು.
ಭಾರತದ ಪರ ಅಮಿತ್ ಮಿಶ್ರಾ 60ಕ್ಕೆ 3, ಜಸ್‌ಪ್ರೀತ್ ಬುಮ್ರಾ 35ಕ್ಕೆ 3 ವಿಕೆಟ್, ಉಮೇಶ್ ಯಾದವ್, ಅಕ್ಷರ್ ಪಟೇಲ್ ಮತ್ತು ಕೇದಾರ್ ಜಾಧವ್ ತಲಾ 1 ವಿಕೆಟ್ ಪಡೆದರು.