×
Ad

32 ಲಕ್ಷ ಡೆಬಿಟ್ ಕಾರ್ಡ್ ರದ್ದು

Update: 2016-10-20 23:32 IST

   

   ಹೊಸದಿಲ್ಲಿ, ಅ.20: ವಿವಿಧ ಬ್ಯಾಂಕ್‌ಗಳಿಗೆ ಸೇರಿದ 32 ಲಕ್ಷ ಡೆಬಿಟ್ ಕಾರ್ಡ್‌ಗಳಲ್ಲಿರುವ ಮಾಹಿತಿಯ ಸುರಕ್ಷತೆಯ ಉಲ್ಲಂಘನೆಯ ವಿಷಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿತ್ತ ಸಚಿವಾಲಯ, ಈ ಬಗ್ಗೆ ಮತ್ತು ಈ ರೀತಿಯ ಪ್ರಸಂಗಗಳು ನಡೆಯುವುದನ್ನು ತಪ್ಪಿಸಲು ಕೈಗೊಳ್ಳಬೇಕಾದ ಹೆಚ್ಚುವರಿ ಕ್ರಮಗಳ ಬಗ್ಗೆ ಸಂಬಂಧಿತ ಸಂಸ್ಥೆಗಳಿಂದ ವಿವರಣೆ ಕೇಳಿದೆ. ಕೆಲವು ಬ್ಯಾಂಕ್‌ಗಳ ಡೆಬಿಟ್ ಕಾರ್ಡ್‌ಗಳ ಪಿನ್ (ಪರ್ಸನಲ್ ಇನ್‌ಫಾರ್ಮೇಶನ್ ನಂಬರ್) ನಂಬರ್‌ಗಳು ಸೋರಿಕೆಯಾಗಿವೆ. ಬ್ಯಾಂಕ್‌ಗಳು ಇನ್ನಷ್ಟು ಭದ್ರತಾ ವ್ಯವಸ್ಥೆಯುಳ್ಳ ಹೊಸ ಕಾರ್ಡ್ ಗಳನ್ನು ಒದಗಿಸುವ ಪ್ರಕ್ರಿಯೆ ಆರಂಭಿಸಿದೆ ಎಂದು ಎಸ್‌ಬಿಐ ಮಾಹಿತಿ ನೀಡಿದೆ. ಕಾರ್ಡ್‌ಗಳಲ್ಲಿರುವ ದತ್ತಾಂಶ(ಮಾಹಿತಿ)ಗಳ ಸುರಕ್ಷತೆಗಾಗಿ ಈ ಬ್ಯಾಂಕ್‌ಗಳು ಕ್ರಮ ಕೈಗೊಂಡಿವೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
 

  ಒಂದು ಕಾರ್ಡ್‌ನ ದತ್ತಾಂಶದ ಉಲ್ಲಂಘನೆಯ ಕಾರಣ ಕೆಲವು ಡೆಬಿಟ್ ಕಾರ್ಡ್‌ಗಳು ತೊಂದರೆ ಎದುರಿಸುವ ಸಂಭವವಿದೆ ಎಂದು ಎನ್‌ಪಿಸಿಐ, ಮಾಸ್ಟರ್‌ಕಾರ್ಡ್ ಮತ್ತು ವಿಸಾ ಮುಂತಾದ ಕಾರ್ಡ್ ನೆಟ್‌ವರ್ಕ್ ಕಂಪೆನಿಗಳು ಕೆಲವು ಬ್ಯಾಂಕ್‌ಗಳಿಗೆ ತಿಳಿಸಿದ ಹಿನ್ನೆಲೆಯಲ್ಲಿ, ಮುಂಜಾಗರೂಕತಾ ಕ್ರಮ ವಾಗಿ ಈ ಕಂಪೆನಿಗಳು ಸೂಚಿಸಿರುವ ಕೆಲವು ಗ್ರಾಹಕರ ಡೆಬಿಟ್ ಕಾರ್ಡ್‌ಗಳನ್ನು ತಡೆಹಿಡಿಯ ಲಾಗಿದೆ ಎಂದು ಬ್ಯಾಂಕ್‌ಗಳು ಮಾಹಿತಿ ನೀಡಿವೆ ಎಂದು ಎಸ್‌ಬಿಐ ತಿಳಿಸಿದೆ. ಖಾಸಗಿ ಕ್ಷೇತ್ರದ ಬ್ಯಾಂಕ್ ಒಂದರ ಎಟಿಎಂ ನೆಟ್‌ವರ್ಕ್ ನಿರ್ವಹಿಸುವ ಸಂಸ್ಥೆಯೊಂದು ಎಸಗಿದ ಗಂಭೀರವಾದ ಸುರಕ್ಷತಾ ವ್ಯವಸ್ಥೆಯ ಉಲ್ಲಂಘನೆಯಿಂದಾಗಿ ಇತರ ಬ್ಯಾಂಕ್‌ಗಳೂ ತೊಂದರೆಗೆ ಸಿಲುಕಿಕೊಳ್ಳುವಂತಾಯಿತು. ಎಸ್‌ಬಿಐ 6 ಲಕ್ಷ ಕಾರ್ಡ್‌ಗಳನ್ನು ಹಿಂಪಡೆದರೆ, ಬ್ಯಾಂಕ್ ಆಫ್ ಬರೋಡಾ , ಐಡಿಬಿಐ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್‌ಗಳು ಈಗಾಗಲೇ ತಮ್ಮ ಡೆಬಿಟ್ ಕಾರ್ಡ್‌ಗಳನ್ನು ಬದಲಿಸಿವೆ. ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಸ್ ಬ್ಯಾಂಕ್‌ಗಳು ತಮ್ಮ ಗ್ರಾಹಕರ ಎಟಿಎಂ ಪಿನ್ ನಂಬರ್ ಬದಲಿಸಿವೆ. ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ವ್ಯವಹಾರ ನಡೆಸುವಾಗ ತನ್ನ (ಬ್ಯಾಂಕಿನ) ಎಟಿಎಂ ಕಾರ್ಡ್ ಮಾತ್ರ ಬಳಸುವಂತೆ ಎಚ್‌ಡಿಎಫ್‌ಸಿ ಗ್ರಾಹಕರಿಗೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News