ಅಮೆಝಾನ್ ವಿರುದ್ಧ ಗಂಭೀರ ಆರೋಪ ಮಾಡಿದ ಆಪಲ್

Update: 2016-10-21 09:38 GMT

ಮೂಲ ಆಪಲ್ ಪರಿಕರಗಳೆಂದು ಚಾರ್ಜರ್, ಯುಎಸ್‌ಬಿ ಕೇಬಲ್ ಮತ್ತು ಯುಎಸ್‌ಬಿ ಪವರ್ ಅಡಾಪ್ಟರ್‌ಗಳನ್ನು ಅಮೆಜಾನ್ ಮತ್ತು ಗ್ರೂಪಾನ್‌ನಲ್ಲಿ ಮಾರಲಾಗುತ್ತದೆ. ಆದರೆ ಇವುಗಳಲ್ಲಿ ಶೇ.90ರಷ್ಟು ನಕಲಿ ಎನ್ನಲಾಗಿದೆ. ಕ್ಯುಪರ್ಟಿನೋ ಮೂಲದ ಟೆಕ್ ದೈತ್ಯ ಆಪಲ್ ಈಗ ಅಮೆರಿಕ ಮೂಲದ ಮೊಬೈಲ್ ಸ್ಟಾರ್ ಎಲ್‌ಎಲ್‌ಸಿ ವಿರುದ್ಧ ಆನ್‌ಲೈನ್‌ನಲ್ಲಿ ತನ್ನ ಉತ್ಪನ್ನಗಳ ನಕಲಿಗಳನ್ನು ಮಾರುತ್ತಿರುವ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ. “ಅಮೆಝಾನ್‌ನಲ್ಲಿ ಐಫೋನ್ ತಯಾರಕರದ್ದೆಂದು ಮಾರಲಾಗುತ್ತಿರುವ 10 ಆಪಲ್ ಬ್ರಾಂಡ್ ಉತ್ಪನ್ನಗಳಲ್ಲಿ ಒಂಭತ್ತರಷ್ಟು ನಕಲಿಗಳು” ಎಂದು ಈ ಟ್ರೇಡ್‌ಮಾರ್ಕ್ ದುರುಪಯೋಗ ಪ್ರಕರಣ ಹೇಳಿದೆ.

ಆಪಲ್ ಈ ಪ್ರಕರಣದಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ 1,50,000 ಡಾಲರ್ ಮತ್ತು ಟ್ರೇಡ್‌ಮಾರ್ಕ್ ದುರುಪಯೋಗಕ್ಕಾಗಿ 2 ಮಿಲಿಯ ಡಾಲರ್ ಪರಿಹಾರ ಕೇಳಿದೆ. ಈ ನಕಲಿ ಉತ್ಪನ್ನಗಳಿಂದ ಬೆಂಕಿಯೂ ಸಿಡಿದು ಸಾರ್ವಜನಿಕ ಹಾನಿಯಾಗಬಹುದು ಎಂದೂ ಮೊಕದ್ದಮೆಯಲ್ಲಿ ಸಂಸ್ಥೆ ಎಚ್ಚರಿಸಿದೆ.

“ಅಮೆಝಾನ್ ಡಾಟ್‌ಕಾಮ್‌ನ ಘನತೆಗಾಗಿ ಗ್ರಾಹಕರು ಅದನ್ನು ನಂಬಿದ್ದಾರೆ. ಹೀಗಾಗಿ ಅಮೆಝಾನ್‌ನಲ್ಲಿ ಖರೀದಿಸುವ ವಿದ್ಯುತ್ ಪರಿಕರಗಳು ನಕಲಿಯಾಗಿರಬಹುದು ಎಂದು ಅವರು ಯೋಚಿಸುವುದೇ ಇಲ್ಲ. ಗ್ರಾಹಕರಿಗೆ ಆಪಲ್ ಉತ್ಪನ್ನಗಳ ನಕಲಿ ಮಾರಾಟವಾಗುತ್ತಿರುವ ಅರಿವೇ ಇಲ್ಲ. ಆದರೆ ಮೊಬೈಲ್ ಸ್ಟಾರ್ ಉತ್ಪನ್ನಗಳು ಸುರಕ್ಷಿತವಲ್ಲ. ಪ್ರಾಮಾಣೀಕರಿಸಿಲ್ಲ ಮತ್ತು ಸರಿಯಾಗಿ ತಯಾರಾಗಿಲ್ಲ. ಹೀಗಾಗಿ ಇವು ಅತೀ ಅಪಾಯಕಾರಿಯಾಗಿದ್ದು ವಿದ್ಯುತ್ ಆಘಾತ, ಬೆಂಕಿ ತಗಲುವಂತಹ ಸಂಭವವೂ ಇದೆ” ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.

ಈ ಮೊಕದ್ದಮೆಯಲ್ಲಿ 5 ವಾಟ್ ಯುಎಸ್‌ಬಿ ಪವರ್ ಅಡಾಪ್ಟರ್‌ಗಳು ಮತ್ತು ಲೈಟ್ನಿಂಗ್ ನಿಂದ ಯುಎಸ್‌ಬಿ ಕೇಬಲ್‌ಗಳನ್ನು ಮೊಬೈಲ್ ಸ್ಟಾರ್‌ನಲ್ಲಿ ಮಾರುವ ಬಗ್ಗೆ ಹೇಳಲಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯದ ಉತ್ತರ ಜಿಲ್ಲಾ ನ್ಯಾಯಾಲಯದಲ್ಲಿರುವ ಈ ಕುರಿತ ದಾಖಲೆಗಳು ಆಪಲ್ ಪೇಟೆಂಟ್ ದುರುಪಯೋಗವಾಗಿರುವ ಬಗ್ಗೆ ಮುಖ್ಯವಾಗಿ ಗಮನಹರಿಸಿದೆ.

“ಆಪಲ್ ಈ ವಿದ್ಯುತ್ ಪರಿಕರಗಳನ್ನು ಅಮೆಝಾನ್‌ನಿಂದ ಖರೀದಿಸಿದ ಮೇಲೆ ಅದು ನಕಲಿ ಎಂದು ತಿಳಿದಿದೆ. ಈಗಾಗಲೇ ಅಮೆಝಾನ್ ಡಾಟ್‌ಕಾಮ್‌ಗೆ ಆಪಲ್ ಮಾಹಿತಿ ನೀಡಿದೆ ಮತ್ತು ಅದರಿಂದಾಗಿ ಈ ಉತ್ಪನ್ನಗಳು ಮೊಬೈಲ್ ಸ್ಟಾರ್ ಸಂಸ್ಥೆಯದೆಂದು ತಿಳಿದಿದೆ” ಎಂದು ಆಪಲ್ ನ್ಯಾಯಾಲಯಕ್ಕೆ ಹೇಳಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಮೆಝಾನ್ ಕೂಡ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. “ಅಮೆಝಾನ್ ನಕಲಿ ವಸ್ತುಗಳಿಗೆ ನಮ್ಮ ವೆಬ್‌ತಾಣದಲ್ಲಿ ಅವಕಾಶ ನೀಡುವುದಿಲ್ಲ. ನಾವು ತಯಾರಕರು, ಬ್ರಾಂಡ್‌ಗಳ ಜೊತೆಗೆ ಆಪ್ತವಾಗಿ ಕೆಲಸ ಮಾಡುತ್ತೇವೆ. ತಪ್ಪು ಮಾಡಿದವರನ್ನು ತಕ್ಷಣವೇ ಕಂಡುಹಿಡಿಯುತ್ತೇವೆ” ಎಂದು ಅಮೆಝಾನ್ ಹೇಳಿದೆ.

ಕೃಪೆ: http://www.gadgetsnow.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News