ಬಿ.ಸಿ.ರೋಡ್ -ಕೈಕಂಬದ ಉಚಿತ ಟ್ರಾಫಿಕ್ ಸೇವಕ ಇನ್ನು ಟ್ರಾಫಿಕ್ ವಾರ್ಡನ್!

Update: 2016-10-21 10:18 GMT

ಬಂಟ್ವಾಳ, ಅ. 21: ಬಿ.ಸಿ.ರೋಡ್ -ಕೈಕಂಬದಲ್ಲಿ ಉಚಿತ ಟ್ರಾಫಿಕ್ ಸೇವೆ ನೀಡುವ ಡಿ.ಎ.ರಹ್ಮಾನ್ ಪಟೇಲ್‌ರವರನ್ನು ಜಿಲ್ಲಾ ಪೊಲೀಸ್ ಇಲಾಖೆ ‘ಮಂಗಳೂರು ಸಿಟಿ ಟ್ರಾಫಿಕ್ ವಾರ್ಡನ್’ ಆಗಿ ನೇಮಕಗೊಳಿಸಿದೆ.

ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದಲ್ಲಿ ವಾಸ್ತವ್ಯ ಇರುವ 58 ವರ್ಷ ಪ್ರಾಯದ ರಹ್ಮಾನ್ ಪಟೇಲ್ ಬಿಳಿ ಅಂಗಿ, ಖಾಕಿ ಪ್ಯಾಂಟ್ ಧರಿಸಿ ತಲೆ ಮೇಲೊಂದು ಟೋಪಿ, ಕೈಯಲ್ಲೊಂದು ಸೀಟಿ ಹಿಡಿದು ರಸ್ತೆ ಮಧ್ಯೆ ನಿಂತರೆ ಟ್ರಾಫಿಕ್ ಜಾಮ್ ಸಮಸ್ಯೆಯೇ ಇಲ್ಲ. ಬಿ.ಸಿ.ರೋಡ್ ಖಾಸಗಿ ಡ್ರೈವಿಂಗ್ ಶಾಲೆಯೊಂದರ ತರಬೇತುದಾರರಾಗಿರುವ ಇವರು ತರಬೇತಿ ಸಮಯದಲ್ಲಿ ಬಿಡುವು ಸಿಕ್ಕಿದರೆ ಬಿ.ಸಿ.ರೋಡ್ ಮೇಲ್ಸೇತುವೆಯ ಅಡಿಭಾಗದಲ್ಲಿ ನಿಂತು ಟ್ರಾಫಿಕ್ ಸೇವೆ ನೀಡುತ್ತಾರೆ. ತರಬೇತಿ ಮುಗಿದು ಸಂಜೆ 5ರಿಂದ 7ರವರೆಗೆ ಬಿ.ಸಿ.ರೋಡ್ ಕೈಕಂಬ ವೃತ್ತದಲ್ಲಿ ಉಚಿತ ಟ್ರಾಫಿಕ್ ಸೇವೆ ಇವರ ಹವ್ಯಾಸ. ಪೊಳಲಿ ರಸ್ತೆ ಸಂಪರ್ಕ ಪಡೆಯುವ ಬಿ.ಸಿ.ರೋಡ್-ಕೈಕಂಬ ಸದಾ ಟ್ರಾಫಿಕ್ ಸಮಸ್ಯೆಯಿಂದ ಕೂಡಿರುತ್ತದೆ. ಸಂಜೆಯಾಗುತ್ತಿದ್ದಂತೆ ಟ್ರಾಫಿಕ್ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಬಿ.ಸಿ.ರೋಡ್ ಕೂಡಾ ಇದಕ್ಕೆ ಹೊರತಲ್ಲ. ಕೆಲವು ವರ್ಷಗಳ ಹಿಂದೆ ಬಂಟ್ವಾಳ ಟ್ರಾಫಿಕ್ ಠಾಣೆ ಅಸ್ತಿತ್ವಕ್ಕೆ ಬಂದಿತ್ತಾದರೂ ಸಿಬ್ಬಂದಿಯ ಕೊರತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ರಹ್ಮಾನ್ ಪಟೇಲ್‌ರ ಉಚಿತ ಟ್ರಾಫಿಕ್ ಸೇವೆ ಪೊಲೀಸ್ ಇಲಾಖೆಗೂ ಸಾಕಷ್ಟು ಅನುಕೂಲಕರವಾಗಿದೆ.

ರಹ್ಮಾನ್ ಪಟೇಲ್‌ರ ಈ ಆರೋಗ್ಯಕರ ಹವಾಸ್ಯವನ್ನು ಕಂಡು ಬಂಟ್ವಾಳ ಪೊಲೀಸ್ ಇಲಾಖೆ ಈ ಹಿಂದೆ ಅವರಿಗೆ ಟ್ರಾಫಿಕ್ ಸೇವೆ ನೀಡಲು ಲಿಖಿತ ಅನುಮತಿ ನೀಡಿತ್ತು. ಇದೀಗ ರಹ್ಮಾನ್ ಪಟೇಲ್‌ರನ್ನು ಜಿಲ್ಲಾ ಪೊಲೀಸ್ ಇಲಾಖೆ ‘ಮಂಗಳೂರು ಸಿಟಿ ಟ್ರಾಫಿಕ್ ವಾರ್ಡನ್’ ಆಗಿ ನೇಮಿಸಿದೆ.

ಪೊಲೀಸ್ ಇಲಾಖೆಯಿಂದಲೇ ದೊರೆತ ಮಿಲಿಟರಿ ಪ್ಯಾಂಟ್, ಬಿಳಿ ಅಂಗಿ, ನೀಲಿ ಟೋಫಿಯನ್ನು ಹಾಕಿ ಟ್ರಾಫಿಕ್ ಸೇವೆ ನೀಡುತ್ತಿದ್ದಾರೆ. ಟ್ರಾಫಿಕ್ ವಾರ್ಡನ್ ಆಗಿ ನೇಮಕಗೊಂಡಿರುವ ಐಡಿ ಕಾರ್ಡ್ ಕೂಡ ಇವರಿಗೆ ಲಭಿಸಿದೆ. ಇದು ಅವರ ಹಿತೈಷಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಸಂತಸ ಉಂಟುಮಾಡಿದೆ.

ವಾಹನದಟ್ಟನೆ ನಿಯಂತ್ರಿಸುವುದು, ನಾಲ್ಕು ದಿಕ್ಕಿನಿಂದ ನುಗ್ಗಿ ಬರುವ ವಾಹನಗಳ ಸುಲಭ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು, ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನವನ್ನು ಸ್ಥಳದಲ್ಲೇ ನಿಲ್ಲಿಸಿ ಚಾಲಕರಿಗೆ ಟ್ರಾಫಿಕ್ ನಿಯಮಗಳ ಮಹತ್ವವನ್ನು ತಿಳಿ ಹೇಳುವುದು ರಹ್ಮಾನ್ ಪಟೇಲ್‌ರ ನಿತ್ಯ ಕಾಯಕ. ರಸ್ತೆ ದಾಟಲು ಪರದಾಡುವ ಮಕ್ಕಳು, ಮಹಿಳೆಯರು, ವೃದ್ಧರಿಗೆ ನೆರವಾಗುತ್ತಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುವ ಹೊಂಡ ಗುಂಡಿಗಳು ಕಂಡರೆ ಅದಕ್ಕೆ ಕಲ್ಲು ಮಣ್ಣು ತುಂಬಿ ಮುಚ್ಚುವ ಕೆಲಸವನ್ನೂ ಮಾಡುತ್ತಾರೆ.

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News