ಹಸಿದವರ ಆರ್ತನಾದಕ್ಕೆ ಭಾರತ ಇನ್ನೂ ಕಿವುಡು

Update: 2016-10-21 17:20 GMT

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಆಶಾವಾದಕ್ಕೆ ಮತ್ತೊಂದು ಹೆಸರು. ಇಂಡಿಯಾ-2020 ಎಂಬ ತಮ್ಮ ಕೃತಿಯಲ್ಲಿ ಕಲಾಂ ಅವರು, 2020ರ ವೇಳೆಗೆ ಭಾರತ ಯಾವ ರೀತಿ ಸೂಪರ್ ಪವರ್ ಆಗಬಹುದು ಎನ್ನುವುದನ್ನು ಅತ್ಯಂತ ಆಶಾದಾಯಕವಾಗಿ ಬಣ್ಣಿಸಿದ್ದರು. ಕಲಾಂ ಅವರ ಗಡುವು ತಲುಪಲು ಕೇವಲ ನಾಲ್ಕು ವರ್ಷಗಳಷ್ಟೇ ಬಾಕಿ ಇರುವಾಗ, ಹಸಿವನ್ನು ತಡೆಗಟ್ಟುವ ಯೋಜನೆಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ, ಭಾರತಕ್ಕೆ ಆಘಾತಕಾರಿ ಎಂಬಂತೆ 97ನೆ ರ್ಯಾಂಕಿಂಗ್ ನೀಡಿದೆ.

ಜಾಗತಿಕ ಹಸಿವಿನ ಸೂಚ್ಯಂಕ ವರದಿಯಲ್ಲಿ, ಇಂಡಿಯಾ-2020ಗಿಂತ ಸಂಪೂರ್ಣ ಭಿನ್ನವಾದ ವಾಸ್ತವ ಚಿತ್ರಣ ನೀಡಲಾಗಿದೆ. ಸೂಪರ್ ಪವರ್ ಆಗುವುದು ದೂರದ ಮಾತು; ಭಾರತ ತನ್ನ ಜನರಿಗೆ ಮೂಲಭೂತ ಹಕ್ಕು ಎನಿಸಿದ ಹಸಿವಿನಿಂದ ಮುಕ್ತವಾಗುವ ಸ್ವಾತಂತ್ರ್ಯವನ್ನು ನೀಡುವಲ್ಲೂ ವಿಫಲವಾಗಿದೆ ಎಂದು ಬಣ್ಣಿಸಲಾಗಿದೆ.
ಭಾರತದಲ್ಲಿ ಐದು ವರ್ಷಗಳಿಗಿಂತ ಕೆಳಗಿನ ಶೇ. 39ರಷ್ಟು ಮಕ್ಕಳು ಕುಬ್ಜರಾಗಿದ್ದರೆ, ಶೇಕಡ 15ರಷ್ಟು ಮಕ್ಕಳು ಸಣಕಲು ಶರೀರದವರು. ಅಂದರೆ ತೀರಾ ಕಡಿಮೆ ಪ್ರಮಾಣದ ಆಹಾರವನ್ನು ಅವರು ಪಡೆಯುತ್ತಿದ್ದಾರೆ. ಅವರು ಈ ಅವಧಿಯಲ್ಲಿ ಸಾವಿಗೀಡಾಗುವ ಅಪಾಯ ಅತ್ಯಧಿಕ. ಭಾರತದ ಮಕ್ಕಳಿಗೆ ಆಹಾರ ಸಮರ್ಪಕವಾಗಿ ದೊರಕದಿರುವುದೂ ಸೇರಿದಂತೆ ಹಲವು ಕಾರಣಗಳಿಂದಾಗಿ ಪ್ರತಿ 20 ಮಕ್ಕಳ ಪೈಕಿ ಒಬ್ಬರು ಐದನೆ ಹುಟ್ಟುಹಬ್ಬಕ್ಕೆ ಮುನ್ನವೇ ಕೊನೆಯುಸಿರು ಎಳೆಯುತ್ತಾರೆ.
ಕೀನ್ಯಾ, ಮಾಳವಿ ಹಾಗೂ ಯುದ್ಧಪೀಡಿತ ಇರಾಕ್‌ನಂಥ ದೇಶಗಳು ಕೂಡಾ ಭಾರತಕ್ಕಿಂತ ಉತ್ತಮವಾಗಿ ತಮ್ಮ ಜನತೆಗೆ ಆಹಾರ ಸುರಕ್ಷೆ ಒದಗಿಸಿವೆ. ಪಾಕಿಸ್ತಾನವನ್ನು ಹೊರತುಪಡಿಸಿ, ಭಾರತದ ನೆರೆಯ ದೇಶಗಳಾದ ನೇಪಾಳ, ಬಾಂಗ್ಲಾದೇಶ, ಚೀನಾ, ಶ್ರೀಲಂಕಾ ಹಾಗೂ ಮ್ಯಾನ್ಮಾರ್ ಕೂಡಾ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿವೆ. ವಾಸ್ತವ ಅಂಶಗಳ ಆಧಾರದಲ್ಲಿ ಇದನ್ನು ಅರ್ಥ ಮಾಡಿಕೊಳ್ಳುವುದಾದರೆ, ಭಾರತವು ಶಿಶು ಸಾವಿನ ಪ್ರಮಾಣವನ್ನು ತಡೆಯುವಲ್ಲಿ ಶ್ರೀಲಂಕಾದ ಮಟ್ಟವನ್ನು ತಲುಪಿದೆ. ಆದರೆ 2016ರಲ್ಲಿ ಹುಟ್ಟಿದ ಇನ್ನೂ ಒಂಬತ್ತು ಲಕ್ಷ ಮಕ್ಕಳನ್ನು 2021ರೊಳಗಾಗಿ ಸಾಯುವುದನ್ನು ಭಾರತ ತಡೆಯಬಹುದಿತ್ತು. ಮೃತಮಕ್ಕಳ ಪಟ್ಟಣದ ಗಾತ್ರ ಅಂಥದ್ದು.

ಇಂತಹ ಭಯಾನಕ ಅಂಕಿ ಅಂಶಗಳ ಹಿನ್ನೆಲೆಯಲ್ಲಿ, ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸಾಧನೆಯನ್ನು ಗಮನಿಸಿದರೆ, ಭಾರತ ಸೂಪರ್ ಪವರ್ ಆಗುವುದಕ್ಕಿಂತ ದೂರವೇ ಉಳಿದಿದ್ದು, ಸರಾಸರಿ ಅಭಿವೃದ್ಧಿಶೀಲ ದೇಶವಾಗುವ ಮಟ್ಟವನ್ನೂ ತಲುಪಿಲ್ಲ ಎನ್ನುವುದು ಸ್ಪಷ್ಟ.
ಕಲಾಂ ಅವರು ಸಂಪೂರ್ಣ ತಪ್ಪುಚಿತ್ರಣವನ್ನು ಪಡೆದಿದ್ದಾರೆ ಎಂದಾದರೆ, ಅವರು ಎಲ್ಲಿಂದ ಬಂದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಕಷ್ಟವಲ್ಲ. ಜಾತಿಯ ಮಸೂರದಿಂದ ನಿಯಂತ್ರಿಸಲ್ಪಡುವ ಭಾರತದಲ್ಲಿ ಸಾರ್ವಜನಿಕ ಸಂವಾದಗಳು ಮಾನವ ಅಭಿವೃದ್ಧಿಯಂಥ ಅಂಶಗಳತ್ತ ಗಮನ ಹರಿಸುವುದು ತೀರಾ ವಿರಳ. ಹಸಿವು ಹಾಗೂ ಸಾರ್ವಜನಿಕ ಆರೋಗ್ಯದಂಥ ಪ್ರಮುಖ ವಿಚಾರಗಳು, ಪಾಕಿಸ್ತಾನ ಅಥವಾ ಪ್ರಧಾನಿಯ ವಿದೇಶಿ ಪ್ರವಾಸದಂಥ ಭಾರತದ ಮೇಲ್ವರ್ಗದ ಹಿತಾಸಕ್ತಿಯ ವಿಚಾರಗಳ ಎದುರು ಮೂಲೆಗುಂಪಾಗುತ್ತವೆ.

ಕುರುಡು ನೋಟ
ಭಾರತದಲ್ಲಿ ಹಸಿವಿಗಿಂತ ಹೆಚ್ಚು ಭಾವನಾತ್ಮಕ ಅಂಶಗಳನ್ನು ಹುಟ್ಟುಹಾಕುವ ಹಲವು ವಿಷಯಗಳಿವೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ದೇಶದ ಚಿಂತಾಜನಕ ಹಸಿವಿನ ಸಮಸ್ಯೆ ಪ್ರಮುಖ ವಿಚಾರವಾಗಿರಬೇಕಿತ್ತು. ಆದರೆ ಅಚ್ಚರಿ ಎಂದರೆ, ಅದು ಭಾರತದಲ್ಲಿ ಚರ್ಚೆಯ ವಿಚಾರವೇ ಅಲ್ಲ. ಭಾರತದ ರಾಜಕೀಯದಲ್ಲಿ ಹಸಿವು ಹಾಗೂ ಅಪೌಷ್ಟಿಕತೆ ಎಂದೂ ಪ್ರಾಧಾನ್ಯ ಗಳಿಸಲೇ ಇಲ್ಲ. ನರೇಂದ್ರ ಮೋದಿ 2014ರ ಸಾರ್ವತ್ರಿಕ ಚುನಾವಣೆ ವೇಳೆ ಪ್ರಸ್ತಾವಿಸಿದ ವಿಚಾರಗಳಲ್ಲಿ ಪ್ರಮುಖವಾದವುಗಳೆಂದರೆ ಗುಜರಾತ್, ಭದ್ರತೆ, ಕಾಂಗ್ರೆಸ್, ಅಭಿವೃದ್ಧಿ, ಉದ್ಯೋಗ ಹಾಗೂ ಬದಲಾವಣೆ ಎನ್ನುವುದನ್ನು ಬಿಬಿಸಿ ವಿಶ್ಲೇಷಿಸಿದೆ. ಆಹಾರ, ಹಸಿವು, ಅಪೌಷ್ಟಿಕತೆ ಹಾಗೂ ಸಂಬಂಧಿತ ಪರಿಕಲ್ಪನೆಗಳು ಸಂಭಾವ್ಯ ಪ್ರಧಾನಿಯ ಭಾಷಣಗಳಲ್ಲಿ ಹತ್ತಿರವೂ ಸುಳಿಯಲಿಲ್ಲ.
ಮೋದಿ ಅಧಿಕಾರಕ್ಕೆ ಬಂದ ಬಳಿಕವೂ ಪರಿಸ್ಥಿತಿಯಲ್ಲಿ ದೊಡ್ಡ ಬದಲಾವಣೆಗಳೇನೂ ಆಗಿಲ್ಲ. ಪ್ರಧಾನಿ ಚಾಣಾಕ್ಷ ವಾಗ್ಮಿಯಾಗಿರುವುದರಿಂದ, ಭಾರತದ ಸ್ವಚ್ಛತೆ, ಬಲೂಚಿಸ್ತಾನ ಹಾಗೂ ಮೇಕ್ ಇನ್ ಇಂಡಿಯಾದಂಥ ಸವಾಲುಗಳನ್ನು ಕೌಶಲಯುಕ್ತವಾಗಿ ನಿಭಾಯಿಸಿದರು. ಆದಾಗ್ಯೂ, ಹಸಿವು ಹಾಗೂ ಅಪೌಷ್ಟಿಕತೆ ಅವರ ಸಂದೇಶಗಳಿಂದ ಹೊರಗೆಯೇ ಉಳಿದಿವೆ. ಇದು ಕೇವಲ ಮೋದಿ ಅಥವಾ ಬಿಜೆಪಿಯ ವಿಚಾರ ಮಾತ್ರ ಅಲ್ಲ. ಒಂದು ಅಧ್ಯಯನದ ಪ್ರಕಾರ, ಸಂಸತ್ತಿನಲ್ಲಿ ಎತ್ತಿದ ಪ್ರಶ್ನೆಗಳ ಪೈಕಿ ಶೇ.3ರಷ್ಟು ಮಾತ್ರ ಮಕ್ಕಳಿಗೆ ಸಂಬಂಧಿಸಿದವು ಹಾಗೂ ಶೇ. 5ರಷ್ಟು ಪ್ರಶ್ನೆಗಳು ಮಾತ್ರ ಬಾಲ್ಯದ ಆರೈಕೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದವು. ವಿಶ್ವದಲ್ಲೇ ಅತ್ಯಧಿಕ ಮಕ್ಕಳ ಸಾವಿನ ಪ್ರಮಾಣ ಇರುವ ದೇಶದ ಸ್ಥಿತಿ ಇದು.
ಇದು ಭಾರತದ ರಾಜಕೀಯ ಸಮಸ್ಯೆಯಷ್ಟೇ ಅಲ್ಲ. ಮಾಧ್ಯಮ ಕೂಡಾ ಇದಕ್ಕೆ ಅಷ್ಟೇ ಹೊಣೆ. ಪ್ರಧಾನಿ ಪಾಶ್ಚಿಮಾತ್ಯ ದೇಶಗಳಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವುದು ಪ್ರಮುಖವಾದಷ್ಟು, ಭಾರತೀಯ ಮಾಧ್ಯಮಗಳಿಗೆ ಹಸಿವು ಹಾಗೂ ವಿಸ್ತತವಾಗಿ ಆರೋಗ್ಯ, ಭಾರತೀಯ ಮಾಧ್ಯಮಗಳಿಗೆ ಸುದ್ದಿಯಲ್ಲ.
ಅರ್ಥಶಾಸ್ತ್ರಜ್ಞ ಜೇನ್ ಡ್ರೇಜ್ ಹಾಗೂ ಅಮರ್ತ್ಯಸೇನ್ ವಾಸ್ತವವಾಗಿ, 2012ರಲ್ಲಿ ಆರು ತಿಂಗಳ ಕಾಲ ನಿರಂತರವಾಗಿ ಪ್ರಮುಖ ಭಾರತೀಯ ಪತ್ರಿಕೆಗಳ ಸಂಪಾದಕೀಯಗಳನ್ನು ಗಮನಿಸಿದರು. ಅವರು ಕಂಡುಕೊಂಡಂತೆ ಶೇ. 1ರಷ್ಟು ಮಾತ್ರ ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ಸಂಪಾದಕೀಯಗಳು ಪ್ರಕಟವಾಗಿದ್ದವು. ‘ಆನ್ ಅನ್‌ಸರ್ಟೈನ್ ಗ್ಲೋರಿ: ಇಂಡಿಯಾ ಆ್ಯಂಡ್ ಇಟ್ಸ್ ಕಾಂಟ್ರಡಿಕ್ಷನ್ಸ್’ ಕೃತಿಯಲ್ಲಿ ಡ್ರೇಜ್ ಹಾಗೂ ಅಮರ್ತ್ಯಸೇನ್ ಪ್ರತಿಪಾದಿಸಿದಂತೆ, ಆಫ್ರಿಕದ ಸಹಾರ ಉಪಖಂಡವನ್ನು ಹೊರತುಪಡಿಸಿದರೆ, ಭಾರತಕ್ಕಿಂತ ಕಡಿಮೆ ಪ್ರಮಾಣದ ಲಸಿಕೆ ಹಾಕಿಸುವುದು ಸಂಘರ್ಷಪೀಡಿತ ಅಫ್ಘಾನಿಸ್ತಾನ, ಹೈಟಿ, ಇರಾಕ್ ಅಥವಾ ಪಪೂವಾ ನ್ಯೂ ಗುನಿಯಾದಲ್ಲಿ ಮಾತ್ರ ಕಾಣಸಿಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಷ್ಟಾಗಿಯೂ ಈ ಕಳವಳಕಾರಿ ಆಡಳಿತ ವೈಫಲ್ಯದ ಬಗ್ಗೆ ಆಕ್ರೋಶ ಭಾರತದ ಪತ್ರಿಕೆ, ಟಿವಿ ಚಾನಲ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿಲ್ಲ.

ಜಾತಿ ಲೆಕ್ಕಾಚಾರ
ಭಾರತದಲ್ಲಿ ಹಸಿವು ಅಥವಾ ಮಕ್ಕಳ ಸಾವಿನ ವಿಷಯದಷ್ಟೇ ಭಾವನಾತ್ಮಕವಾದ ಇತರ ಕೆಲ ವಿಷಯಗಳೂ ಇವೆ. ಇಷ್ಟಾಗಿಯೂ ಭಾರತದ ರಾಜಕೀಯ ಹಾಗೂ ಮಾಧ್ಯಮ ಇವನ್ನು ನಿರ್ಲಕ್ಷಿಸಿವೆ. ಇದಕ್ಕೆ ಹಲವು ಕಾರಣಗಳು ಇರಬಹುದಾದರೂ, ಅವುಗಳಲ್ಲಿ ಪ್ರಮುಖವೆಂದರೆ, ಭಾರತದ ಮೇಲ್ವರ್ಗವೇ ರಾಷ್ಟ್ರದ ಪ್ರಮುಖ ಆಗುಹೋಗುಗಳನ್ನು ನಿಯಂತ್ರಿಸುತ್ತಿರುವುದು. ಭಾರತ ತೀರಾ ಕಳವಳಕಾರಿ ಆರೋಗ್ಯ ಸ್ಥಿತಿಯನ್ನು ಹೊಂದಿದ್ದರೂ, ದೇಶದ ವಿಶಿಷ್ಟ ಜಾತಿ ವ್ಯವಸ್ಥೆಯಿಂದಾಗಿ, ಮೇಲ್ವರ್ಗದವರು ಈ ಸಮಸ್ಯೆಯಿಂದ ಸುರಕ್ಷೆ ಪಡೆದಿರುತ್ತಾರೆ.
ಭಾರತದಲ್ಲಿ ಸಾಯುವ ಮಕ್ಕಳು ಹಾಗೂ ಅಶಕ್ತ ಮಕ್ಕಳು ಬಹುತೇಕ ಆದಿವಾಸಿಗಳು, ದಲಿತರು ಹಾಗೂ ಶೂದ್ರರು. ಉದಾಹರಣೆಗೆ ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ, 2011ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಭಾರತದಲ್ಲಿ ಮೇಲ್ವರ್ಗದ ಹಿಂದೂ ಸಮುದಾಯಕ್ಕೆ ಹೋಲಿಸಿದರೆ, ಕಡಿಮೆ ತೂಕದ ದಲಿತ ಮಕ್ಕಳ ಪ್ರಮಾಣ, ಶೇ. 53ರಷ್ಟು ಅಧಿಕ. ಆದಿವಾಸಿಗಳಲ್ಲಿ ಈ ಪ್ರಮಾಣ ಇನ್ನೂ ಅಧಿಕವಾಗಿದ್ದು, ಶೇ. 69ರಷ್ಟಿದೆ. ಮೇಲ್ವರ್ಗದ ಮಕ್ಕಳಿಗೆ ಹೋಲಿಸಿದರೆ ಕಡಿಮೆ ತೂಕದ ಶೂದ್ರ ಮಕ್ಕಳ ಪ್ರಮಾಣ ಶೇ. 35ರಷ್ಟು ಅಧಿಕ. ಶೂದ್ರರಲ್ಲಿ ಈ ಅಪೌಷ್ಟಿಕತೆ ಪ್ರಮಾಣ, ಆದಿವಾಸಿ ಹಾಗೂ ದಲಿತರಿಗೆ ಹೋಲಿಸಿದರೆ ಕಡಿಮೆಯಾದರೂ, ಮೇಲ್ವರ್ಗಕ್ಕೆ ಹೋಲಿಸಿದರೆ ಅಧಿಕವಾಗಿರುವುದು ಈ ಅಧ್ಯಯನದಿಂದ ದೃಢಪಟ್ಟಿದೆ.
ಅಚ್ಚರಿಯ ವಿಷಯವೆಂದರೆ, ಭಾರತದ ಹಸಿವಿನ ಸಮಸ್ಯೆ ಬಹುತೇಕ ಬೆಳಕಿಗೆ ಬರುವುದೇ ಇಲ್ಲ. ಏಕೆಂದರೆ ಭಾರತದ ದಲಿತ, ಆದಿವಾಸಿ ಹಾಗೂ ಶೂದ್ರರು ಭಾರತೀಯ ಮಾಧ್ಯಮಗಳಲ್ಲಿ ಧ್ವನಿಯನ್ನೇ ಹೊಂದಿಲ್ಲ. ಭಾರತದ ರಾಜಕೀಯದಲ್ಲಿ ಕೂಡಾ ಇಂಥ ಪ್ರಾಬಲ್ಯ ಹೊಂದಿರುವವರ ಸಂಖ್ಯೆ ವಿರಳ. 2006ರಲ್ಲಿ ನಡೆದ ಒಂದು ಸಮೀಕ್ಷೆಯ ಪ್ರಕಾರ, ಭಾರತದ 300 ಮಾಧ್ಯಮಗಳ ನೀತಿ ನಿರೂಪಕರ ಪೈಕಿ ಒಬ್ಬರೂ ದಲಿತ ಅಥವಾ ಆದಿವಾಸಿ ಸಮುದಾಯದವರು ಇರಲಿಲ್ಲ.
ಮಾಧ್ಯಮಕ್ಕೆ ಹೋಲಿಸಿದರೆ ರಾಜಕೀಯ ಸ್ವಲ್ಪಮಟ್ಟಿಗೆ ವಾಸಿ. ಅದಾಗ್ಯೂ ನಗರದ ಮೇಲ್ವರ್ಗದವರ ವಿಷಯಗಳಿಗೆ ಹೋಲಿಸಿದರೆ, ದಲಿತ ಹಾಗೂ ಶೂದ್ರರಿಗೆ ಸಂಬಂಧಿಸಿದ ವಿಷಯಗಳು ಆದ್ಯತೆ ಪಡೆಯುವುದು ತೀರಾ ಅಪರೂಪ. ಉದಾಹರಣೆಗೆ ನರೇಂದ್ರ ಮೋದಿಯವರ ಸಂಪುಟವನ್ನೇ ತೆಗೆದು ಕೊಂಡರೆ, ಮೇಲ್ವರ್ಗದವರ ಪ್ರಾಬಲ್ಯವೇ ಹೆಚ್ಚು. ಒಟ್ಟು ಜನಸಂಖ್ಯೆಯಲ್ಲಿ ಅವರ ಪಾಲಿಗೆ ಹೋಲಿಸಿದರೆ, ಅಧಿಕ ಸ್ಥಾನಗಳನ್ನು ಅವರು ಪಡೆದಿದ್ದಾರೆ.
ಭಾರತದಲ್ಲಿ ಈ ಸ್ತರ ವ್ಯವಸ್ಥೆ, ಬಡತನದಲ್ಲಿ ಸಿಲುಕಿದ ಜನರಿಗೆ ತೀರಾ ತೊಂದರೆ ತರುತ್ತಿದೆ. ಭಾರತದ ಅಭಿವೃದ್ಧಿ ಎಷ್ಟು ನಿಧಾನ ಎನ್ನುವುದಕ್ಕೆ ಒಂದು ನಿದರ್ಶನವನ್ನು ನೀಡುವುದಾದರೆ, ಪಕ್ಕದ ಬಾಂಗ್ಲಾದೇಶ ಹಾಗೂ ನೇಪಾಳದ ಜತೆಗೆ ಹೋಲಿಸಬೇಕು. 2000ನೆ ಇಸ್ವಿಯಲ್ಲಿ ಬಾಂಗ್ಲಾದೇಶ, ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕಿಂತ ಒಂದು ಸ್ಥಾನ ಕೆಳಗಿತ್ತು. ಕೇವಲ 15 ವರ್ಷಗಳಲ್ಲಿ, ಭಾರತವನ್ನು ಹಿಂದಿಕ್ಕಿ, ಭಾರತಕ್ಕಿಂತ ಏಳು ಸ್ಥಾನದಷ್ಟು ಮುಂದೆ ಹೋಗಿದೆ. 2000ದಲ್ಲಿ ಭಾರತಕ್ಕಿಂತ ಆರು ಸ್ಥಾನ ಮುಂದಿದ್ದ ನೇಪಾಳ, 2016ರಲ್ಲಿ 25 ಸ್ಥಾನದಷ್ಟು ಮೇಲಕ್ಕೆ ಹೋಗಿದೆ. ಬಾಂಗ್ಲಾದೇಶೀಯರು ಅಥವಾ ನೇಪಾಳಿಗಳಿಗೆ ಸಿಕ್ಕಿದಷ್ಟು ಅಭಿವೃದ್ಧಿ ಅವಕಾಶಗಳನ್ನು ನಮ್ಮ ಜನತೆಗೆ ಸೃಷ್ಟಿಸುವಲ್ಲಿ ಭಾರತ ವಿಫಲವಾಗಿದೆ ಎಂದೇ ಹೇಳಬೇಕು. ಇಷ್ಟಾಗಿಯೂ ಭಾರತದ ಬುದ್ಧಿವಂತ ವರ್ಗಕ್ಕೆ ಇನ್ನೂ ಭಾರತ ಹಿಂದುಳಿಯುತ್ತಿರುವ ಮತ್ತು ಇದು ಸದ್ಯೋಭವಿಷ್ಯದಲ್ಲಿ ಬದಲಾಗುವ ಸಾಧ್ಯತೆ ಇಲ್ಲ ಎಂಬ ಚಿತ್ರಣ ಮನದಟ್ಟಾಗುತ್ತಿಲ್ಲ.

Writer - ಶುಐಬ್ ದಾನಿಯಾಲ್

contributor

Editor - ಶುಐಬ್ ದಾನಿಯಾಲ್

contributor

Similar News