ಉಡುಪಿ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಮಾವೇಶ

Update: 2016-10-21 18:36 GMT

ಉಡುಪಿ, ಅ.21: ಸಿಐಟಿಯು ವತಿಯಿಂದ ಉಡುಪಿ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಮಾವೇಶವು ಉಡುಪಿ ಬೈಲೂರಿನ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಶುಕ್ರವಾರ ಜರಗಿತು.
 ಸಮಾವೇಶವನ್ನು ಉದ್ಘಾಟಿಸಿದ ರಾಜ್ಯ ಬೀದಿ ಬದಿ ವ್ಯಾಪಾರಸ್ಥರ ಫೆಡರೇಶನ್‌ನ ರಾಜ್ಯ ಕಾರ್ಯ ದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರ ಉತ್ತಮ ಬದುಕಿಗಾಗಿ ಮಸೂದೆಯೊಂದು ದೇಶದ ಸಂಸತ್ತಿನಲ್ಲಿ ಅಂಗೀಕಾರ ಗೊಂಡರೂ ಅದನ್ನು ಯಥಾವತ್ತಾಗಿ ಜಾರಿಗೊಳಿಸಲು ಸರಕಾರಗಳು ಹಿಂದೇಟು ಹಾಕುತ್ತಿವೆ. ಮಸೂದೆಯ ಆಧಾರದಲ್ಲಿ ವಿಶೇಷ ನಿಯಮಾವಳಿಗಳನ್ನು ರೂಪಿಸ ಬೇಕಾದ ರಾಜ್ಯ ಸರಕಾರ ಈ ಬಗ್ಗೆ ಇನ್ನೂ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.
   ಉಡುಪಿ ನಗರಸಭೆ ವ್ಯಾಪ್ತಿಯ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತು ಚೀಟಿ ಕೊಟ್ಟಿರುವುದಿಲ್ಲ. ಕೆಲವೇ ಮಂದಿ ಬೀದಿ ಬದಿ ವ್ಯಾಪಾರಸ್ಥ ರಿಗೆ ಕೊಟ್ಟಿರುವ ಗುರುತು ಚೀಟಿಯನ್ನು ಈವರೆಗೆ ನವೀಕರಣ ಮಾಡದೆ ಅನ್ಯಾಯ ಎಸಗಲಾಗಿದೆ. ಇದೀಗ ನಗರಸಭೆ ಅಧಿಕಾರಿಗಳು ವಿನಾಕಾರಣ ಬೀದಿಬದಿ ವ್ಯಾಪಾರಸ್ಥರ ಮೇಲೆ ದಾಳಿ ನಡೆಸುತ್ತಿದೆ. ಉಡುಪಿ ನಗರಸಭೆಯ ಇಂತಹ ಬಡ ಜನ, ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಹೋರಾಟ ಮಾಡಲು ಸಂಘಟನೆ ಅಗತ್ಯ ಎಂದು ಅವರು ಹೇಳಿದರು.
ಉಡುಪಿ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ(ಸಿಐಟಿಯು)ದ ಗೌರವಾಧ್ಯಕ್ಷರಾಗಿ ಕವಿರಾಜ್ ಎಸ್. ಉಡುಪಿ, ಅಧ್ಯಕ್ಷರಾಗಿ ವೀರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ, ಉಪಾಧ್ಯಕ್ಷರಾಗಿ ಮಂಜುನಾಥ, ಸುಧಾಕರ, ಕಾರ್ಯದರ್ಶಿಗಳಾಗಿ ಬಸವನ ಗೌಡ, ಕಲಂದರ್, ಕೋಶಾಧಿಕಾರಿಯಾಗಿ ಸಂಗಮೇಶ, ಕಾನೂನು ಸಲಹೆಗಾರರಾಗಿ ಪಿ. ವಿಶ್ವನಾಥ ರೈಯವರನ್ನು ಒಳಗೊಂಡಂತೆ 15 ಮಂದಿ ಕಾರ್ಯಕಾರಿ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಿಐಟಿಯು ಮುಖಂಡರಾದ ಉಮೇಶ್ ಕುಂದರ್, ವೆಂಕಟೇಶ ಕೋಣಿ, ನಳಿನಿ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಬಸವರಾಜ್ ವಂದಿಸಿದರು.

ನ.2ರಂದು ನಗರಸಭೆ ವಿರುದ್ಧ ಮುಷ್ಕರ
ಸಮಾವೇಶದಲ್ಲಿ ಇತ್ತೀಚೆಗೆ ಉಡುಪಿ ನಗರಸಭೆ ಅಧಿಕಾರಿಗಳು ನಡೆಸಿದ ದೌರ್ಜನ್ಯದ ಕುರಿತು ಬೀದಿಬದಿ ವ್ಯಾಪಾರಸ್ಥರು ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡರು. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಸ್ಥರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಉಡುಪಿ ನಗರಸಭೆಯ ವಿರುದ್ಧ ನ.2ರಂದು ಪೂರ್ವಾಹ್ನ 11ಗಂಟೆಗೆ ನಗರಸಭೆ ಕಚೇರಿ ಎದುರು ಪ್ರತಿಭಟನಾ ಮುಷ್ಕರ ನಡೆಸಲು ಸಮಾ ವೇಶದಲ್ಲಿ ತೀರ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News