ತಾಯಿಯಿಂದ ಹಲ್ಲೆ: ಸಹಾಯವಾಣಿಯಿಂದ ಮಗಳ ರಕ್ಷಣೆ

Update: 2016-10-21 18:40 GMT

ಬೆಳ್ತಂಗಡಿ, ಅ.21: ಮಗಳ ಮೇಲೆ ತಾಯಿಯೊಬ್ಬಳು ಮಾರ ಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಬೆಳ್ತಂಗಡಿ ನಗರ ವ್ಯಾಪ್ತಿಯ ರೆಂಕೆದಗುತ್ತು ಎಂಬಲ್ಲಿ ಶುಕ್ರವಾರ ನಡೆದಿದೆ. ಸಾರ್ವಜನಿಕರು ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದು, ಬಾಲಕಿಯನ್ನು ಮಕ್ಕಳ ಸಹಾಯವಾಣಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಿಸಿದ್ದಾರೆೆ. ಸುನಂದಾ ಎಂಬವಳು ಮಗಳ ಮೇಲೆ ಹಲ್ಲೆ ನಡೆಸಿದವಳು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಬಂದ ಮಕ್ಕಳ ಸಹಾಯವಾಣಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಶಿವಾನಂದ, ಪವಿತ್ರಾ, ಅಸುಂತ ಡಿಸೋಜ ಹಲ್ಲೆಗೊಳಗಾದ ಬಾಲಕಿಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ತಾನು ಈ ಮನೆಯಲ್ಲಿ ನಿಲ್ಲುವುದಿಲ್ಲ, ತನ್ನ ಮೇಲೆ ನಿರಂತರ ಹಲ್ಲೆಯಾಗುತ್ತಿದೆ ಎಂಬ ಮಾಹಿತಿಯನ್ನು ಬಾಲಕಿ ಹೇಳಿದ್ದಾಳೆ ಎನ್ನಲಾಗಿದೆ. ತಲೆ, ಮುಖ, ಕಾಲು ಹಾಗೂ ಕೈಯ ಮೇಲೆ ಇದ್ದಂತಹ ಗಾಯಗಳನ್ನು ಕಂಡು ಬಾಲಕಿಯನ್ನು ಮಂಗಳೂರಿನ ಲೇಡಿಗೋಷನ್ ಮಹಿಳಾ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದರು.

ಅಲ್ಲಿ ಕೌನ್ಸೆಲಿಂಗ್ ನಡೆಸಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಬಾಲಕಿಗೆ ವಸತಿ ನಿಲಯದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಬಾಲಕಿಗೆ ಹಲ್ಲೆ ನಡೆಸಿರುವ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಲಾಗುವುದು ಹಾಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರ ಆಕ್ರೋಶ: ಕಳೆದ 6 ತಿಂಗಳಿನಿಂದ ಈ ಬಾಲಕಿಗೆ ಸುನಂದಾ ನಿತ್ಯ ಚಿತ್ರಹಿಂಸೆ ನೀಡುತ್ತಿದ್ದಳೆಂದು ತಿಳಿದು ಬಂದಿದೆ. ಅಲ್ಲದೆ ಸ್ಥಳೀಯ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ಮಾಹಿತಿ ನೀಡಿದ್ದು ಯಾವುದೆ ಕ್ರಮ ಕೈಗೊಂಡಿಲ್ಲ. ಸ್ಥಳಕ್ಕೆ ಬಂದ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಾಧ್ಯಮದವರಲ್ಲಿ ನೂರಾರು ಜನ ಬಾಲಕಿಯನ್ನು ಈ ಮನೆಯಲ್ಲಿ ಇರಿಸಬೇಡಿ ಯಾರಾದರೂ ಸಂಬಂಧಿಕರಿದ್ದರೆ ಅವರ ಮನೆಯಲ್ಲಿರಿಸಲು ವ್ಯವಸ್ಥೆ ಮಾಡಿ ಎಂದು ವಿನಂತಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News