ರಾಜ್ಯ ಸರಕಾರ ನೇತ್ರಾವತಿ ನದಿಯನ್ನು ಕೊಲ್ಲಲು ಹೊರಟಿದೆ: ಪೂಜಾರಿ

Update: 2016-10-22 14:07 GMT

ಮಂಗಳೂರು, ಅ.22: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರು ದೊಡ್ಡ ಒಳ ಸಂಚು ರೂಪಿಸುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇವೇಗೌಡ ಮತ್ತು ಅವರ ಆಡಳಿತ ದೇಶಕ್ಕೆ ಮಾದರಿ. ಅವರ ಆಡಳಿತ ಕರ್ನಾಟಕದಲ್ಲಿ ಇದ್ದರೆ ನಿರೀಕ್ಷಿತ ಮಟ್ಟದ ಆಡಳಿತ ನೀಡಲು ಸಾಧ್ಯ’ ಎಂಬ ಹೇಳಿಕೆ ನೀಡುವ ಮೂಲಕ ಸಿ.ಎಂ. ಇಬ್ರಾಹೀಂ ಅವರು ಜೆಡಿಎಸ್ ಪರವಾಗಿ ಮಾತನಾಡಿದ್ದಾರೆ. ಸಿ.ಎಂ. ಇಬ್ರಾಹೀಂ, ಸಿದ್ದರಾಮಯ್ಯ ಮತ್ತು ಇನ್ನಿತರ ಕೆಲವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರಿದ್ದು, ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿತ್ತು.ಆದರೆ ಇವರೆಲ್ಲರೂ ಕಾಂಗ್ರೆಸ್‌ನ್ನು ವ್ಯವಸ್ಥಿತವಾಗಿ ಮುಗಿಸುವ ಸಂಚು ರೂಪಿಸುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಮೇಲೆ ಗೌರವವಿದ್ದರೆ ಮತ್ತು ತಾಕತ್ತಿದ್ದರೆ ತಕ್ಷಣ ಕಾಂಗ್ರೆಸ್‌ಗೆ ಮುಜುಗರ ತರುವ ರೀತಿ ಮಾತನಾಡಿರುವ ಸಿ.ಎಂ. ಇಬ್ರಾಹೀಂ ಅವರನ್ನು ಸ್ಟೇಟ್ ಪ್ಲಾನಿಂಗ್ ಬೋರ್ಡ್‌ನ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಬೇಕು. ಕಾಂಗ್ರೆಸ್ ಹೈಕಮಾಂಡ್ ಸಿ.ಎಂ. ಇಬ್ರಾಹೀಂ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಳೆದ ಏಳೆಂಟು ವರ್ಷಗಳಿಂದ ಕಾಂಗ್ರೆಸ್‌ಗಾಗಿ ಸಿದ್ದರಾಮಯ್ಯವರನ್ನು ತಯಾರು ಮಾಡಿದ್ದೇವೆ. ಅವರು ಸಿಎಂ. ಆದ ಮೇಲೆ ಬಹಳಷ್ಟು ನಿರೀಕ್ಷೆಗಳು ಇದ್ದವು. ಆದರೆ ನಿರೀಕ್ಷೆಯ ಮಟ್ಟವನ್ನು ಅವರು ತಲುಪಿಲ್ಲ ಎಂದು ಪೂಜಾರಿ ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಿಂದ ನೇತ್ರಾವತಿಯ ಕೊಲೆ

ರಾಜ್ಯದ ಕಾಂಗ್ರೆಸ್ ಸರಕಾರ ಎತ್ತಿನ ಹೊಳೆ ಯೋಜನೆಯ ಮೂಲಕ ನೇತ್ರಾವತಿ ನದಿಯನ್ನು ಕೊಲೆ ಮಾಡಲು ಹೊರಟಿದೆ. ನದಿಯ ಕೈಯಂತಿರುವ ಉಪ ನದಿಗಳನ್ನು ಇನ್ನಿಲ್ಲವಾಗಿಸುವ ಪ್ರಯತ್ನ ಸಾಗಿದೆ. ಕರಾವಳಿಯನ್ನು ಸಂಪೂರ್ಣ ಬಂಜರು ಭೂಮಿಯನ್ನಾಗಿಸುವ ಪ್ರಯತ್ನಕ್ಕೆ ತಡೆಯಾಗಬೇಕು. ಕರಾವಳಿಯ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರಿಗೆ ಇಲ್ಲ ಸಲ್ಲದ ಸಲಹೆ ನೀಡಿ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಯೋಜನೆಗಾಗಿ ಸುಮಾರು 13 ಸಾವಿರ ಕೋಟಿ ಸಾರ್ವಜನಿಕರ ತೆರಿಗೆಯ ಹಣವನ್ನು ಸುಮ್ಮನೆ ವ್ಯಯಿಸಲಾಗುತ್ತಿದೆ. ಈ ಯೋಜನೆ ಸಲಗೊಳ್ಳಲು ಸಾಧ್ಯವಿಲ್ಲ. ಇನ್ನಾದರೂ ಮುಖ್ಯಮಂತ್ರಿಗಳು ಎಚ್ಚೆತ್ತು ಯೋಜನೆ ನಿಲ್ಲಿಸಬೇಕು ಎಂದು ಪೂಜಾರಿ ಒತ್ತಾಯಿದರು.

ಕೆಲವರ ಪಿತೂರಿಯಿಂದ ಯೋಜನಾ ವರದಿಯೂ ಬದಲಾಗಿದ್ದು, ಖರ್ಚು ದುಪ್ಪಟ್ಟಾಗುತ್ತಿದೆ. ಸಲವಾಗದ ಈ ಯೋಜನೆಯನ್ನು ಮುಖ್ಯಮಂತ್ರಿಗಳು ಬಿಟ್ಟುಬಿಡಬೇಕು. ಕೋಲಾರ, ಬೆಂಗಳೂರು ನಗರ ಮುಂತಾದೆಡೆ ನೀರು ಒದಗಿಸಲು ಬೇರೆ ಹಲವು ದಾರಿಗಳಿವೆ. ಇದರತ್ತ ಗಮನಹರಿಸಲಿ ಎಂದು ಪೂಜಾರಿ ಸಲಹೆ ನೀಡಿದರು. ತ್ರಿವಳಿ ತಲಾಖ್ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪೂಜಾರಿ ತ್ರಿವಳಿ ತಲಾಖ್ ಬೇಡವೆಂದಾದರೆ ಮುಸ್ಲಿಂ ಮಹಿಳೆಯರೇ ಧ್ವನಿಯೆತ್ತಬೇಕು. ಅವರು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮುಖಂಡರಾದ ಪುರುಷೋತ್ತಮ ಚಿತ್ರಾಪುರ, ಅರುಣ್ ಕುವೆಲ್ಲೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News