ಮುಹಮ್ಮದ್ ಮುರ್ಸಿಗೆ ವಿಧಿಸಿದ ಶಿಕ್ಷೆ ಸರಿ: ಈಜಿಪ್ಟ್ ಕೋರ್ಟು

Update: 2016-10-23 07:55 GMT

ಕೈರೋ, ಅಕ್ಟೋಬರ್ 23: ಈಜಿಪ್ಟ್‌ನ ಮಾಜಿ ಅಧ್ಯಕ್ಷರೂ ಪ್ರೀಡಂ ಆ್ಯಂಡ್ ಜಸ್ಟಿಸ್ ಪಾರ್ಟಿಯ ನಾಯಕರೂ ಆದ ಮುಹಮ್ಮದ್ ಮುರ್ಸಿಗೆ ನೀಡಲಾಗಿರುವ ಇಪ್ಪತ್ತು ವರ್ಷಗಳ ಜೈಲುಶಿಕ್ಷೆಯನ್ನು ಈಜಿಪ್ಟ್ ಕ್ರಿಮಿನಲ್ ಕೋರ್ಟು ಅನುಮೋದಿಸಿದೆ ಎಂದು ವರದಿಯಾಗಿದೆ. 2012ರಲ್ಲಿ ಮುಹಮ್ಮದ್ ಮುರ್ಸಿ ಅಧಿಕಾರದಲ್ಲಿರುವಾಗ, ಅಧ್ಯಕ್ಷರ ಅರಮನೆಯ ಹೊರಗೆ ನಡೆದ ಪ್ರತಿಪಕ್ಷ ರ್ಯಾಲಿಯಲ್ಲಿ ಘರ್ಷಣೆಗೆ ಪ್ರೇರೇಪಿಸಿದ್ದಾರೆಂದು ಆರೋಪಿಸಿ ಅವರಿಗೆ ಇಪ್ಪತ್ತು ವರ್ಷ ಜೈಲುವಾಸ ಶಿಕ್ಷೆಯನ್ನು ವಿಧಿಸಲಾಗಿದೆ. ತೀರ್ಪಿನ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ಕ್ರಿಮಿನಲ್ ಕೋರ್ಟು ತಳ್ಳಿಹಾಕಿದೆ. ಅಧ್ಯಕ್ಷ ಪದವಿ ಕೋರ್ಟಿನ ಅಧಿಕಾರ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬ ಮುರ್ಸಿಯವರ ಆದೇಶವನ್ನು ಪ್ರತಿಭಟಿಸಿ ಪ್ರತಿಪಕ್ಷಗಳು ರ್ಯಾಲಿ ನಡೆಸಿದ್ದವು.  ಈ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಹತ್ತು ಮಂದಿ ಹತ್ಯೆಯಾಗಿದ್ದರು. 2015ರ ಎಪ್ರಿಲ್‌ನಲ್ಲಿ ಕೈರೊದ ಕೋರ್ಟು ಮುರ್ಸಿಗೆ 20ವರ್ಷ ಜೈಲುವಾಸ ಶಿಕ್ಷೆ ವಿಧಿಸಿತ್ತು. ಮುರ್ಸಿ ವಿರುದ್ಧ ಈಗಾಗಲೇ ದೇಶದ್ರೋಹ ಸಹಿತ ವಿವಿಧ ಆರೋಪಗಳನ್ನು ಹೊರಿಸಲಾಗಿದ್ದು, ಅವರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. 2012ರಲ್ಲಿ ಮುರ್ಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಒಂದುವರ್ಷದ ನಂತರ ಸೇನಾಬುಡಮೇಲು ಕೃತ್ಯದ ಮೂಲಕ ಮುರ್ಸಿಯವರನ್ನು ಅಧಿಕಾರದಿಂದ ಕಿತ್ತು ಹಾಕಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾದ ಬ್ರದರ್‌ಹುಡ್ ನಾಯಕಮುಹಮ್ಮದ್ ಬದೀಈಯವರ ಅರ್ಜಿಯನ್ನು ಕ್ರಿಮಿನಲ್ ಕೋರ್ಟು ಸ್ವೀಕರಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News