ಮಗಳನ್ನು ಅತ್ಯಾಚಾರಗೈದಾತನಿಗೆ ನ್ಯಾಯಾಲಯ ನೀಡಿದ ಶಿಕ್ಷೆಯೇನು ಗೊತ್ತೇ ?
ಫ್ರೆಸ್ನೊ (ಕ್ಯಾಲಿಫೋರ್ನಿಯ), ಅ. 23: ನಾಲ್ಕು ವರ್ಷಗಳ ಕಾಲ ತನ್ನ ಹದಿಹರೆಯದ ಮಗಳ ಮೇಲೆ ಅತ್ಯಾಚಾರ ನಡೆಸಿದ ಇಲ್ಲಿನ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯವೊಂದು 1,503 ವರ್ಷಗಳ ಜೈಲು ವಾಸ ವಿಧಿಸಿದೆ.
41 ವರ್ಷದ ವ್ಯಕ್ತಿಗೆ ಫ್ರೆಸ್ನೊ ಸುಪೀರಿಯರ್ ಕೋರ್ಟ್‌ನ ಇತಿಹಾಸದಲ್ಲೇ ಅತ್ಯಂತ ದೀರ್ಘ ಜೈಲು ಶಿಕ್ಷೆಯನ್ನು ಶುಕ್ರವಾರ ನೀಡಲಾಗಿದೆ ಎಂದು ‘ಫ್ರೆಸ್ನೊ ಬೀ’ ವರದಿ ಮಾಡಿದೆ.
ತೀರ್ಪು ಘೋಷಿಸಿದ ನ್ಯಾಯಾಧೀಶ ಎಡ್ವರ್ಡ್ ಸರ್ಕಿಸಿಯನ್ ಜೂನಿಯರ್, ‘‘ನೀನು ಸಮಾಜಕ್ಕೆ ಗಂಭೀರ ಅಪಾಯವಾಗಿರುವೆ’’ ಎಂದು ಹೇಳಿದರು. ಅಪರಾಧಿಯು ತನ್ನ ಕೃತ್ಯಕ್ಕೆ ಪಶ್ಚಾತ್ತಾಪವನ್ನೇ ವ್ಯಕ್ತಪಡಿಸಿಲ್ಲ, ಬದಲಿಗೆ ತನ್ನ ಪರಿಸ್ಥಿತಿಗೆ ಮಗಳೇ ಕಾರಣ ಎಂದು ದೂರುತ್ತಿದ್ದಾನೆ ಎಂದು ಹೇಳಿದರು.
ಅಪರಾಧಿಯು 2009 ಮೇ ಮತ್ತು 2013 ಮೇ ತಿಂಗಳ ನಡುವೆ ತನ್ನ ಮಗಳ ಮೇಲೆ ವಾರಕ್ಕೆ ಎರಡು ಅಥವಾ ಮೂರು ಬಾರಿ ಅತ್ಯಾಚಾರ ನಡೆಸುತ್ತಿದ್ದನು. ಅಂತಿಮವಾಗಿ ಧೈರ್ಯ ತೆಗದುಕೊಂಡ ಬಾಲಕಿ 2013 ಮೇ ತಿಂಗಳಲ್ಲಿ ಮನೆ ಬಿಟ್ಟು ತೆರಳಿದ್ದಳು.