ಮಾತೃ ಹೃದಯದ ಪ್ರಾಮಾಣಿಕ ಐಎಎಸ್ ಅಧಿಕಾರಿ ಅನಿತಾಕೌಲ್
ಈಗಿನ ವಿಕಾಸಸೌಧವಿರುವ ಜಾಗದಲ್ಲಿ ಅಂದು ಡಿ.ಪಿ.ಇ.ಪಿ(ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ) ಕಚೇರಿಯಿತ್ತು. ರಾತ್ರಿ 9:30ರ ಸಮಯ. ಕಚೇರಿಯ ದೀಪಗಳಿನ್ನೂ ಉರಿಯುತ್ತಿವೆ. ಮಹಡಿ ಹತ್ತಿರ ಹೋಗಿ ನೋಡಿದರೆ ರಾಜ್ಯ ಯೋಜನಾ ನಿರ್ದೇಶಕರಾದ ಅನಿತಾಕೌಲ್ ಇಬ್ಬರು ಅಧಿಕಾರಿಗಳೊಂದಿಗೆ ಯೋಜನೆಯ ಕೆಲಸದಲ್ಲಿ ನಿರತರಾಗಿದ್ದಾರೆ. ಇದು ಕೇವಲ ಒಂದು ದಿನದ ಕಾಯಕವಲ್ಲ, ಒಂದು ಇಲಾಖೆಗೆ ಸಂಬಂಧಿಸಿದ್ದಲ್ಲ. ತಮ್ಮ ಅಧಿಕಾರದ ಅವಧಿಯಲ್ಲಿ ಅನಿತಾಕೌಲ್ ತಮಗೆ ಸಿಕ್ಕ ಜವಾಬ್ದಾರಿಯನ್ನು ಅತ್ಯಂತ ದಕ್ಷತೆ, ಪ್ರಾಮಾಣಿಕತೆ ಮತ್ತು ಕಾಳಜಿಯಿಂದ ನಿರ್ವಹಿಸಿ ತಮ್ಮದೇ ಆದ ಛಾಪನ್ನು ಒತ್ತಿದವರು. ತಾವು ನಿರ್ವಹಿಸುವ ಯೋಜನೆ ಸಕಾಲದಲ್ಲಿ ಕೆಳಹಂತಕ್ಕೆ ತಲಪುವಂತೆ, ಅದರಲ್ಲಿಯೂ ಸಾಮಾನ್ಯ ಜನರು, ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡು ಅವರು ಕಾರ್ಯನಿರ್ವಹಿಸಿದರು. ಯಾವುದೇ ಇಲಾಖೆಯಾಗಲೀ ಅದನ್ನು ಮೊದಲು ಸಂಪೂರ್ಣವಾಗಿ ಅರ್ಥೈಸಿಕೊಂಡು ತಮ್ಮದೇ ಯೋಜನೆ ರೂಪಿಸಿಕೊಂಡು ಕಾರ್ಯಕ್ಕಿಳಿದರೆ ರಾಜಿಯಿಲ್ಲದೆ ಯಾರಿಗೂ ಜಗ್ಗದಂತೆ ಕಾರ್ಯನಿರ್ವಹಿಸುತ್ತಿದ್ದರು. ಪ್ರಾಮಾಣಿಕತೆ ಇದ್ದ ಕಡೆ ದಕ್ಷತೆಯ ಕೊರತೆ ಇರುತ್ತದೆ ಎಂಬ ಮಾತಿದೆ. ಆದರೆ ಅನಿತಾ ಅದಕ್ಕೆ ಹೊರತಾಗಿದ್ದರು. ತಾವು ಮಾಡಿದ ಕೆಲಸ ಅನೇಕ ಕಾಲ ಉಳಿಯಲಿ, ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ಸ್ವಯಂ ಸೇವಾ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಒಳಗೊಳ್ಳುತ್ತಿದ್ದುದು ಅನಿತಾ ಅವರ ವಿಶೇಷವಾಗಿತ್ತು. ಕರ್ನಾಟಕ ಹಾಗೂ ಹೊರ ರಾಜ್ಯಗಳ ಅನೇಕ ಬರಹಗಾರರು, ಕಿರು ಚಿತ್ರ ತಯಾರಕರು, ಕಲಾವಿದರು, ಕಾರ್ಯಕರ್ತರು, ನಿರ್ದೇಶಕರಿಗೆ ಅವಕಾಶಗಳನ್ನು ನೀಡಿ ಬೆಳೆಸಿದ ಅನಿತಾ ತಾವು ಮಾತ್ರ ಹಿಂದೆ ನಿಲ್ಲುತ್ತಿದ್ದರು. ತಮ್ಮ ಕಾರ್ಯಶೈಲಿ ಹಾಗೂ ನಡವಳಿಕೆಯ ಮೂಲಕವೇ ಅವರು ಅನೇಕರಿಗೆ ಮಾದರಿಯಾಗಿದ್ದರು. ಐಎಎಸ್ ಅಧಿಕಾರಿ ಎಂದ ಕೂಡಲೇ ಅಧಿಕಾರದ ಪರಮಾವಧಿ ಎಂದು ನಡೆದುಕೊಳ್ಳುವವರಿದ್ದಾರೆ. ಆದರೆ ಅನಿತಾ ಅವರಿಗೆ ಅಧಿಕಾರದ ಅಮಲು ಎಳ್ಳಷ್ಟೂ ಸೋಂಕಲಿಲ್ಲ. ಅವರು ಹೋದಲೆಲ್ಲ ತಾವೊಬ್ಬ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಂಡರು. ಈ ಕಾರಣಕ್ಕಾಗಿಯೇ ಅವರನ್ನು ಒಬ್ಬ ‘ಡಿ’ಗ್ರೂಪ್ ನೌಕರ/ನೌಕರಳಿಂದ ಹಿಡಿದು ಉನ್ನತ ಮಟ್ಟದ ಎಲ್ಲ ಅಧಿಕಾರಿಗಳೂ ಇಷ್ಟಪಡುತ್ತಿದ್ದರು. ಅವರು ಡಿಪಿಇಪಿಯಲ್ಲಿ ಕೆಲಸ ಮಾಡುವಾಗ ಅಲ್ಲಿ ‘ಡಿ’ ದರ್ಜೆ ನೌಕರಳಾಗಿ ಕೆಲಸ ಮಾಡುತ್ತಿದ್ದ ರೇವಮ್ಮ ಅನಿತಾ ಅವರನ್ನು ಅಪ್ಪಿಮಾತನಾಡಿಸುವಂಥ ಆಪ್ತತೆಯನ್ನು ಅನಿತಾ ಹೊಂದಿದ್ದರು. ಸರಳತೆ ಎಂದರೆ ಅನಿತಾ ಅವರನ್ನು ನೋಡಿಯೇ ಕಲಿಯಬೇಕು ಎನ್ನುವಂತ್ತಿತ್ತು ಅವರ ನಡವಳಿಕೆ. ಸರಳತೆ ಕೇವಲ ನಡತೆಯಲ್ಲಲ್ಲ, ಅವರ ಉಡುಪು, ಆಹಾರವೂ ಸರಳವೇ. ತಾವು ಕಚೇರಿಯಲ್ಲಿದ್ದಾಗ ಯಾವಾಗಲೂ ಬಾಗಿಲನ್ನು ತೆರೆದಿರುತ್ತಿದ್ದ ಅವರನ್ನು ಯಾರಾದರೂ ನೇರವಾಗಿ ಭೇಟಿ ಮಾಡಬಹುದಿತ್ತು. ಕತ್ತು ಬಗ್ಗಿಸಿ ಕೆಲಸ ಮಾಡುತ್ತ ಕುಳಿತಿರುತ್ತಿದ್ದ ಅವರು ಯಾರಾದರೂ ಕಚೇರಿ ಪ್ರವೇಶಿಸಿದ ಕೂಡಲೇ ಕಮಿನ್ ಎಂದು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದರು. ಅವರಿಗೆ ಕೆಲಸ ಮೊದಲು, ನಂತರ ಉಳಿದೆಲ್ಲವೂ. ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆಯ ಜವಾಬ್ದಾರಿ ವಹಿಸಿಕೊಂಡ ಅವರು ಶಿಕ್ಷಕರ ತರಬೇತಿ, ಮೈಕ್ರೋ ಪ್ಲಾನ್, ತರಬೇತಿ ಕೈಪಿಡಿಗಳು, ಓದುವ ಸಾಮಗ್ರಿ, ಅರಿವಿನ ಕಾರ್ಯಕ್ರಮ ಎಲ್ಲವನ್ನೂ ಅಭಿವೃದ್ಧಿಪಡಿಸುವಾಗ ಪರಿಣಿತರೊಂದಿಗೆ ಕುಳಿತು ಕೆಲಸ ಮಾಡುತ್ತ್ತಿದ್ದರು. ಇದಕ್ಕಾಗಿ ರಾಜ್ಯದ ಉದ್ದಗಲಕ್ಕೂ ಪ್ರಯಾಣಿಸಿ, ಅಲ್ಲಿಯೇ ವಸತಿ ಮಾಡುತ್ತಿದ್ದರು. ಕಡೆಗೆ ಸಾಮಗ್ರಿ ಮುದ್ರಣವಾಗುವಾಗ ತಮ್ಮ ಹೆಸರು ಕಡೆಯಲ್ಲಿ ಬರುವಂತೆ ಅಥವಾ ಬಾರದಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಪ್ರಚಾರದ ಗೀಳೆಂಬುದೇ ಇರಲಿಲ್ಲ. ಯಾವಾಗಲೂ ಅವರದು ಒಂದೇ ಮಂತ್ರ. ಕೆಲಸ ಕೆಲಸ ಕೆಲಸ. ಈ ಕೆಲಸದ ಗೀಳನ್ನು ತಾವೊಬ್ಬರೇ ಹಚ್ಚಿಕೊಂಡಿರಲಿಲ್ಲ. ತಮ್ಮಿಂದಿಗೆ ಕೆಲಸ ಮಾಡುವ ಇತರ ಅಧಿಕಾರಿ/ನೌಕರರಲ್ಲೂ ಬೆಳೆಸಿದ್ದಾರೆ. ಡಿ.ಪಿ.ಇ.ಪಿ ಯೋಜನೆಯಲ್ಲಿ ಇವರೊಂದಿಗೆ ಕೆಲಸ ಮಾಡಿದ ಅಧಿಕಾರಿಗಳು ಈಗಲೂ ಆ ದಿನಗಳನ್ನು ನೆನೆಯುತ್ತಾರೆ. ನಾವು ಯಾರನ್ನಾದರೂ ಕೆಲಸದಲ್ಲಿ ತೊಡಗಿಸಭೇಕೆಂದರೆ ಮೊದಲು ಅವರಲ್ಲಿ ವಿಶ್ವಾಸ ಇರಿಸೇಕು. ಅವರನ್ನು ಹುರಿದುಂಬಿಸಬೆೇಕೆಂಬುದನ್ನು ಅನಿತಾ ನಂಬಿದ್ದರು. ಹಾಗಾಗಿ ಡಿಪಿಇಪಿ ಯಲ್ಲಿದ್ದಾಗ ಸಾವಿರಾರು ಶಿಕ್ಷಕರನ್ನು ಅವರು ಪ್ರೋತ್ಸಾಹಿಸಿ ಬೆಳೆಸಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೊದಲು ಶಿಕ್ಷಣ ತಜ್ಞರಾಗಬೇಕೆಂಬುದು ಅವರ ಆಶಯವಾಗಿತ್ತು. ನಲಿ-ಕಲಿ ಕಲಿಕಾ ಪದ್ಧತಿಯನ್ನು ಅಪಾರವಾಗಿ ಒಪ್ಪಿಕೊಂಡಿದ್ದ ಅವರು ಅದರಲ್ಲಿ ಸಂಪೂರ್ಣ ಮುಳುಗಿದ್ದರು. ಅದನ್ನು ಇತರರಿಗೆ ವಿವರಿಸುವಾಗ ಇದು ತನ್ನ ಮಗು ಎಂಬಂತೆ ಹೊಳಪಿನ ಕಣ್ಣುಗಳೊಂದಿಗೆ ವಿವರಿಸುತ್ತಿದ್ದರು. 1979ರಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದ ಅನಿತಾ ಅವರು ತೀರ್ಥಹಳ್ಳಿಯಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ತಮ್ಮ ಕೆಲಸ ಪ್ರಾರಂಭಿಸಿದರು. ಆಗ ತೀರ್ಥಹಳ್ಳಿಯಲ್ಲಿ ಉಂಟಾದ ಮಹಾಪ್ರವಾಹದ ಪರಿಸ್ಥಿತಿಯನ್ನು ಬದ್ಧತೆಯಿಂದ ನಿರ್ವಹಿಸಿದುದನ್ನು ಇಂದಿಗೂ ಜನ ನೆನೆಯುತ್ತಾರೆ. ಮುಂದೆ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ, ಮಲೆನಾಡು ಮತ್ತು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿ ಮಂಡಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹೀಗೆ ವಿವಿಧ ಇಲಾಖೆಗಳಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಕೆಲಸ ಮಾಡಿದ್ದಾರೆ. ವಿಶೇಷವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಮೈಸೂರಿನ ಆಡಳಿತ ತರಬೇತಿ ಕೇಂದ್ರದ ಮಹಾನಿರ್ದೇಶಕರಾಗಿ, ದಿಲ್ಲಿಯ ಎನ್.ಸಿ.ಇ.ಆರ್.ಟಿ ಕಾರ್ಯದರ್ಶಿಯಾಗಿ ಅವರು ಮಾಡಿದ ಕೆಲಸ ಅವಿಸ್ಮರಣೀಯ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿದ್ದಾಗ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಹಿಳೆ ಮತ್ತು ಕಾನೂನು ಕಾರ್ಯಾಗಾರದ ಬಗ್ಗೆ ಚರ್ಚಿಸಲು ಒಂದು ಸಭೆಗೆ ಆಗಮಿಸಿದ ಅವರು ಇದ್ದ ಇಕ್ಕಟ್ಟಾದ ಪುಟಾಣಿ ಕೋಣೆಯ ಬಾಗಿಲಲ್ಲೇ ಕುಳಿತರು. ಸಂಘಟಕರು ಮುಜುಗರಪಟ್ಟುಕೊಂಡರೂ ಇಟ್ಸ್ ಓಕೆ ಎಂದು ಆಗಬೇಕಾದ ಕಾರ್ಯದ ಬಗ್ಗೆ ಚರ್ಚೆ ಪ್ರಾರಂಭಿಸಿದ್ದು ಅವರ ಸರಳತೆಗೆ ಒಂದು ಉದಾಹರಣೆ. ಅನಿತಾ ಅವರಿಗೆ ಇಷ್ಟವಾದ ಕ್ಷೇತ್ರ ಶಿಕ್ಷಣ. ತಮ್ಮ ಅಧಿಕಾರದ ಪ್ರಾರಂಭದ ದಿನಗಳಲ್ಲಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ಪ್ರಾಧಿಕಾರದಲ್ಲಿ ತೊಡಗಿಸಿಕೊಂಡು ಅಹರ್ನಿಶಿ ದುಡಿದರು. ಇದರಿಂದಾಗಿ ದೇಶದೆಲ್ಲೆಡೆಯ ಸಾಕ್ಷರತಾ ಕಾರ್ಯಕರ್ತರು ಅವರನ್ನು ಇಂದಿಗೂ ನೆನೆಯುತ್ತಾರೆ. ಸಾಕ್ಷರತಾ ಆಂದೋಲನವನ್ನು ಜನಾಂದೋಲನವನ್ನಾಗಿಸಲು ಅವರು ನೀಡಿದ ಕೊಡುಗೆ ಅಪಾರ. ಈ ಸಂದಭರ್ದಲ್ಲಿ ಜನ ವಿಜ್ಞಾನ ಚಳವಳಿಯ ಎಂ.ಪಿ.ಪರಮೇಶ್ವರನ್, ವಿನೋದ್ ರೈನಾ, ಡಾ.ಸುಂದರ ರಾಮನ್ ಅವರಂಥವರ ಸಂಪರ್ಕಕ್ಕೆ ಬಂದ ಅವರು ಒಬ್ಬ ಕಾರ್ಯಕರ್ತೆಯಂತೆ ತೊಡಗಿಸಿಕೊಂಡಿದ್ದರು. ಜತೆಗೆ ಅಂದಿನ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತೊಬ್ಬ ಸರಳ ಹಾಗೂ ಕನಸುಗಾರ ಐಎಎಸ್ ಅಧಿಕಾರಿ ಅನಿಲ್ ಬೋರ್ಡಿಯಾ ಅವರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದರು. ಬೋರ್ಡಿಯಾರವರನ್ನು ತಮ್ಮ ಗುರುಗಳೆಂದೇ ಅನಿತಾ ಪರಿಗಣಿಸಿದ್ದರು.
ಮಹಿಳೆಯರು ಮತ್ತು ಮಕ್ಕಳೆಂದರೆ ಅವರಿಗೆ ವಿಶೇಷ ಕಾಳಜಿ. ಅವರೊಬ್ಬ ಮಹಿಳಾಪರ ಚಿಂತಕಿಯಾಗಿದ್ದರು. ಅವರ ಶಿಕ್ಷಣ, ಅಭಿವೃದ್ಧಿಯ ಕಡೆಗೆ ಸದಾ ಕನಸು ಕಾಣುತ್ತಾ ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ಸಾಕಾರಗೊಳಿಸಲು ಶ್ರಮಿಸಿದರು. ಮೈಸೂರಿನ ಎ.ಟಿ.ಐ ಮಹಾನಿರ್ದೇಶಕರಾಗಿದ್ದಾಗ ಪಂಚಾಯತ್ ರಾಜ್ ಇಲಾಖೆಯಲ್ಲಿ ಸಂಚಲನ ಮೂಡಿಸಿದರು. ಜನಾಧಿಕಾರ ಜಾಥಾ ರೂಪಿಸಿ ನಾಡಿನುದ್ದಗಲಕ್ಕೂ ಕಲಾವಿದರನ್ನು ಜೋಡಿಸಿ ಅದರ ಮೂಲಕ ಗ್ರಾಮ ಮಟ್ಟದಲ್ಲಿ ಅಧಿಕಾರವನ್ನು ಹೇಗೆ ಬಳಕೆ ಮಾಡಬೇಕೆಂಬ ಬಗ್ಗೆ ಅರಿವು ಮೂಡಿಸುವುದರತ್ತ ಶ್ರಮಿಸಿದರು. ಮಾನವೀಯ ವೌಲ್ಯಗಳು, ಸಮಾನತೆಯ ಆಶಯ ಹಾಗೂ ಪ್ರಗತಿಪರ ಚಿಂತನೆಗಳನ್ನು ಸದಾ ಮೈಗೂಡಿಸಿಕೊಂಡಿದ್ದ ಅನಿತಾ ಅವರು ತಮ್ಮ ಆರೋಗ್ಯದ ಕಡೆಗೆ ದಿವ್ಯ ನಿರ್ಲಕ್ಷ್ಯ ತೋರಿದ್ದರು. ಅರ್ಧ ದೋಸೆ, ಒಂದು ಟೀ ಆದರೆ ಅವರ ಊಟ ಮುಗಿಯುತ್ತಿತ್ತು. ಆ ಸಮಯದಲ್ಲಿ ಯಾರಾದರೂ ಆತ್ಮೀಯರು ಅಲ್ಲಿಗೆ ಹೋದರೆ ಅದರಲ್ಲೇ ಅವರಿಗೂ ಪಾಲು ಸಿಗುತ್ತಿತ್ತು. ಅಧಿಕಾರ ಎನ್ನುವುದು ದೂರದಿಂದ ನೋಡುವವರಿಗೆ ಹೂವಿನ ಹಾಸಿಗೆಯಂತೆ ಕಂಡರೆ ಅನಿತಾ ಅವರಿಗೆ ಅದೊಂದು ಕರ್ಮಭೂಮಿ ಮತ್ತು ಸೇವಾಕ್ಷೇತ್ರವಾಗಿತ್ತು. ಅವರ ಕೆಲಸ ಒಂದು ಕಡೆ, ಅವರ ಪತಿ ಐಎಎಸ್ ಅಧಿಕಾರಿ ಸಂಜಯ್‌ಕೌಲ್ ಒಂದು ಕಡೆ ಅವರ ಮಗ ರೋಹನ್ ವಿದೇಶದಲ್ಲಿ, ಹೀಗೆ ಅವರು ಕುಟುಂಬದ ಸುಖ ಅನುಭವಿಸಿದ್ದು ಅಷ್ಟಕ್ಕಷ್ಟೆ ಎನ್ನಬಹುದು. ಇತ್ತೀಚೆಗಷ್ಟೇ ಕೇಂದ್ರ ಸೇವೆಯಿಂದ ನಿವೃತ್ತರಾಗಿದ್ದ ಅವರ ಆರೋಗ್ಯ ಇದ್ದಕ್ಕಿದ್ದಂತೆ ಕ್ಷೀಣಿಸಿ, ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. 35 ವರ್ಷಗಳ ಕಾಲ ಅವಿರತ ದುಡಿದು ದಣಿದ ದೇಹ ವಿಶ್ರಾಂತಿ ಪಡೆಯುವ ಹೊತ್ತಿನಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ್ದು ವಿಪರ್ಯಾಸವೆಂದೇ ಹೇಳಬಹುದು. ಅನಿತಾ ಅವರದು ಸಾಯುವ ವಯಸ್ಸಲ್ಲ. ಅವರಿಂದ ಇನ್ನೂ ಸಾಕಷ್ಟು ಕೆಲಸಗಳಾಗಬೇಕಿತ್ತು. ಅವರಿಗೂ ಕಾಳಜಿಯಿತ್ತು. ದೇಶದ ಎಲ್ಲೆಡೆ ಅವರೊಂದಿಗೆ ದುಡಿದ, ಅವರ ಕೆಲಸವನ್ನು ಮೆಚ್ಚಿದ, ಅವರಿಂದ ಸ್ಫೂರ್ತಿ ಪಡೆದ ಸಾವಿರಾರು ಅನುಯಾಯಿಗಳನ್ನು ಅಗಲಿ ಕಣ್ಮರೆಯಾಗಿದ್ದಾರೆ.
ಐಎಎಸ್ ಅಧಿಕಾರಿ ಎಂದ ಕೂಡಲೇ ಅಧಿಕಾರದ ಪರಮಾವಧಿ ಎಂದು ನಡೆದುಕೊಳ್ಳುವವರಿದ್ದಾರೆ. ಆದರೆ ಅನಿತಾ ಅವರಿಗೆ ಅಧಿಕಾರದ ಅಮಲುಎಳ್ಳಷ್ಟೂ ಸೋಂಕಲಿಲ್ಲ. ಅವರು ಹೋದಲೆಲ್ಲ ತಾವೊಬ್ಬ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಂಡರು. ಈ ಕಾರಣಕ್ಕಾಗಿಯೇ ಅವರನ್ನು ಒಬ್ಬ ‘ಡಿ’ಗ್ರೂಪ್ ನೌಕರ/ನೌಕರಳಿಂದ ಹಿಡಿದು ಉನ್ನತ ಮಟ್ಟದ ಎಲ್ಲ ಅಧಿಕಾರಿಗಳೂ ಇಷ್ಟಪಡುತ್ತಿದ್ದರು. ಅವರು ಡಿಪಿಇಪಿಯಲ್ಲಿ ಕೆಲಸ ಮಾಡುವಾಗ ಅಲ್ಲಿ ‘ಡಿ’ ದರ್ಜೆ ನೌಕರಳಾಗಿ ಕೆಲಸ ಮಾಡುತ್ತಿದ್ದ ರೇವಮ್ಮ ಅನಿತಾ ಅವರನ್ನು ಅಪ್ಪಿಮಾತನಾಡಿಸುವಂಥ ಆಪ್ತತೆಯನ್ನು ಅನಿತಾಹೊಂದಿದ್ದರು.