“ಅಧಿಕಾರಕ್ಕಾಗಿ ಕ್ಷಮಿಸಲು ಸಾಧ್ಯವಿಲ್ಲದ ತಪ್ಪು ಮಾಡಬೇಡಿ”
ಸನ್ಮಾನ್ಯ ಜನಾಬ್ ಸಿ ಎಂ ಇಬ್ರಾಹೀಂ ಸಾಹೇಬರಿಗೆ ನಮಸ್ಕಾರಗಳು , ನಿನ್ನೆ ಮಾಧ್ಯಮಗಳಿಗೆ ನೀಡಿದ ತಮ್ಮ ಹೇಳಿಕೆ ಕೇಳಿ ತುಂಬ ಆಘಾತವಾಯಿತೆಂದು ತಿಳಿಸಲು ವಿಷಾದವಾಗುತ್ತಿದೆ. ಸರ್ , ನಾನು ನಿಮಗೆ ಸಲಹೆ ನೀಡುವಷ್ಟು ದೊಡ್ಡವನಲ್ಲದಿದ್ದರೂ ನನ್ನ ಇತಿಮಿತಿಯಲ್ಲಿ ನನ್ನ ಪ್ರಾಮಾಣಿಕ ಅನಿಸಿಕೆ ಹೇಳಬಯಸುತ್ತೇನೆ. ತಾವು ಮತ್ತು ಸಿದ್ದರಾಮಯ್ಯನವರು, ಡಾ.ಎಚ್.ಸಿ.ಮಹದೇವಪ್ಪನವರು ಹಾಗೂ ಸತೀಶ ಜಾರಕಿಹೊಳಿಯವರು ಪ್ರತಿಪಾದಿಸುತ್ತಿದ್ದ ಸಾಮಾಜಿಕ ನ್ಯಾಯದ ತತ್ವ ಸಿದ್ಧಾಂತದಿಂದ ಪ್ರೇರಿತನಾಗಿ ತಮ್ಮೆಲ್ಲರ ನಾಯಕತ್ವದಲ್ಲಿ 1999 ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದೇನೆಂದು ನೆನಪಿಸಿಕೊಳ್ಳಲು ಹೆಮ್ಮೆ ಎನಿಸುತ್ತಿದೆ. ನಾನು ಯಾವತ್ತೂ ನಾಲ್ಕೂ ಜನ ನಾಯಕರನ್ನು ಬೇರೆ ಬೇರೆ ಎಂದು ಭಾವಿಸಿಲ್ಲ. ಇಂದು ಪ್ರಜಾಸತ್ತಾತ್ಮಕವಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರೂ ನನ್ನ ಪಾಲಿಗೆ ಮಾತ್ರ ನಾಲ್ಕು ಜನ ನಾಯಕರೂ ಮುಖ್ಯಮಂತ್ರಿಗಳೆಂದೇ ಭಾವಿಸಿದ್ದೇನೆ. ಸನ್ಮಾನ್ಯ ಇಬ್ರಾಹೀಂ ಸಾಹೇಬರೇ , ನಿಮ್ಮ ಸ್ನೇಹಕ್ಕೆ ಅಧಿಕಾರ ಅಡ್ಡ ಬಾರದಿರಲೆಂಬುದೇ ನನ್ನ ಆಸೆಯಾಗಿದೆ.
ಅಧಿಕಾರ ಅದೆಷ್ಟೋ ಸಲ ಬಂದಿದೆ ಹಾಗೆಯೇ ಅದೆಷ್ಟೋ ಸಲ ಹೋಗಿದೆ. ಆದರೆ ''ಸ್ನೇಹಕ್ಕಿಂತ ಅಧಿಕಾರ ದೊಡ್ಡದಲ್ಲ''. ಅಧಿಕಾರಕ್ಕಾಗಿಯೇ ಇಷ್ಟೂ ವರ್ಷಗಳ ಕಾಲ ಉಳಿಸಿಕೊಂಡು ಬಂದಿರುವ ಸ್ನೇಹ ಮುರಿದು ಬೀಳದಿರಲಿ. ಅಧಿಕಾರ ನಿಮ್ಮ ಪರಸ್ಪರ ಗೆಳೆತನಕ್ಕೆ ಮುಳ್ಳಾಗದಿರಲಿ. ನಿಮ್ಮ ಮೇಲಿನ ನನ್ನ ಅಭಿಮಾನಕ್ಕೂ ಅಪಮಾನವಾಗದಿರಲಿ. ಅಧಿಕಾರಕ್ಕಾಗಿ ಪರಸ್ಪರ ಕಚ್ಚಾಡಿ ತಮ್ಮ ಸ್ನೇಹ ಸಂಬಂಧವನ್ನೇ ಕಡಿದುಕೊಂಡರೆಂಬ ಅಪವಾದ ಯಾರ ಮೇಲೂ ಬಾರದಿರಲಿ. ನಿಮ್ಮನ್ನು ಹಾಗೂ ನಿಮ್ಮ ಅನುಯಾಯಿಯಾದ ನನ್ನನ್ನೂ ಸೇರಿದಂತೆ ಅನೇಕ ಅಭಿಮಾನಿಗಳನ್ನು ಕಂಡು ನಮ್ಮ ವಿರೋಧಿಗಳು ಗೇಲಿ ಮಾಡಿ ನಗುವಂತಾಗದಿರಲಿ.
ಅಧಿಕಾರವಂತೂ ಶಾಶ್ವತವಲ್ಲ ಆದರೆ ಸ್ನೇಹ ಸಂಬಂಧ ಮಾತ್ರ 'ಕನ್ನಡಿ' ಇದ್ದಂತೆ. ಒಂದು ಸಲ ಒಡೆದು ಚೂರಾದರೆ ಮತ್ತೊಮ್ಮೆ ಯಾರಿಂದಲೂ ಮರು ಜೋಡಿಸಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಸ್ನೇಹ ಸಂಬಂಧ ಒಡೆದು ಚೂರಾಗದಿರಲೆಂಬುದೇ ನಿಮ್ಮ ಅಭಿಮಾನಿಯಾದ ನನ್ನ ಬಯಕೆ. ನೀವೆಲ್ಲರೂ ಉನ್ನತ ಅಧಿಕಾರದಲ್ಲಿದ್ದು ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ರಾಜ್ಯದ ಬಡವರ ಮತ್ತು ರೈತರ ಪರ ಆಡಳಿತ ನಡೆಸುವಂತಾಗಲಿ ಎಂಬುದೇ ನಮ್ಮ ಬಲವಾದ ಆಸೆಯಾಗಿದೆ. ನಾವಂತೂ ಇಲ್ಲಿಯವರೆಗೆ ನಿಮ್ಮ ಮೇಲಿನ ಕುರುಡು ಅಭಿಮಾನದ ನಶೆಯಲ್ಲಿಯೇ ತೇಲಾಡಿದ್ದೇವೆ ವಿನಃ ಸ್ವಹಿತಕ್ಕಾಗಿ ಏನನ್ನೂ ಬಯಸಿದವರಲ್ಲ. ನಮ್ಮ ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ಸಿಕ್ಕರೆ, ಅದುವೇ ನಮ್ಮ ರಾಜಕೀಯದ ಬಹು ದೊಡ್ಡ ಗೆಲುವೆಂದು ನಂಬಿದವನು ನಾನು. ಆದ್ದರಿಂದ ಕೇವಲ ಅಧಿಕಾರಕ್ಕಾಗಿಯೇ ಸ್ನೇಹ ಸಂಬಂಧ ಹಾಳಾಗದಿರಲಿ. ನಾಲ್ಕೂ ದೇಹಗಳಾದರೂ ನಿಮ್ಮ ಸ್ನೇಹದ ಮೂಲಕ ಒಂದೇ ಮನಸ್ಸು ಮತ್ತು ಒಂದೇ ಹೃದಯವೆಂದು ಭಾವಿಸಿದ್ದೇನೆ.
ನಿಮ್ಮ ಗೆಳೆತನದ ಸಂಬಂಧ ಶಾಶ್ವತವಾಗಿರಲೆಂದು ಬಯಸುತ್ತೇನೆ. ನಿಮ್ಮ ಕಚ್ಚಾಟದಿಂದ ಕೋಮುವಾದಿಗಳ ಕೈಗೆ ರಾಜ್ಯದ ಅಧಿಕಾರ ಹೋಗದಿರಲಿ. ಒಂದು ವೇಳೆ ಹಾಗೇನಾದರೂ ಆದರೆ ಖಂಡಿತ ನಿಮ್ಮ ಮೇಲೆ ಅಭಿಮಾನ ಹೊಂದಿರುವ ನನ್ನಂಥ ಲಕ್ಷಾಂತರ ಅನುಯಾಯಿಗಳು ಇತಿಹಾಸದಲ್ಲಿ ನಿಮ್ಮೆಲ್ಲರನ್ನು ಕ್ಷಮಿಸಲು ಸಾಧ್ಯವೇ ಇಲ್ಲ ಎಂಬ ಸತ್ಯ ಅರಿತುಕೊಂಡರೆ ಒಳ್ಳೆಯದು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೆ ನೀವೆಲ್ಲರೂ ಬೇರೆ ಬೇರೆಯಾಗಿ ಇಬ್ಬರ ಜಗಳ ಮೂರನೆಯವನಿಗೆ ಲಾಭ ಮಾಡಿಕೊಡಬಾರದೆಂದು ನನ್ನ ಪ್ರಾಮಾಣಿಕವಾದ ಮನವಿಯಾಗಿದೆ. ಕೊನೆಯದಾಗಿ ನಿಮ್ಮೆಲ್ಲರ ಮೇಲಿನ ನನ್ನ ಹಾಗೂ ಇತರ ಲಕ್ಷಾಂತರ ಅಹಿಂದ ಅಭಿಮಾನಿಗಳ ಪ್ರೀತಿಯ ಅಭಿಮಾನಕ್ಕೆ ಅಪಮಾನವಾಗದಿರಲೆಂದೂ ಬಯಸುತ್ತಾ , ''ಸ್ನೇಹಕ್ಕಿಂತ ಅಧಿಕಾರ ದೊಡ್ಡದಲ್ಲ'' ಎಂದು ಮತ್ತೊಮ್ಮೆ ಮನವರಿಕೆ ಮಾಡಿಕೊಡುವ ಮೂಲಕ ನನ್ನ ಪ್ರಾಮಾಣಿಕವಾದ ಅನಿಸಿಕೆಗೆ ಪೂರ್ಣ ವಿರಾಮ ಹಾಕುತ್ತೇನೆ.
ಜೈ ಭೀಮ್ , ಇಂತಿ ನಿಮ್ಮವ (ಟಿ.ಶಶಿಧರ್).