ಭಾರತೀಯ ಯೋಧರ ಬಗ್ಗೆ ಬ್ರಿಟಿಷ್ ಕಮಾಂಡರ್ ನ ಅಭಿಪ್ರಾಯ ಕೇಳಿದರೆ ನಮಗೆ ಹೆಮ್ಮೆಯಾಗುವುದು ಖಚಿತ
ಅಮೃತಸರ್, ಅ.24: ‘‘ಭಾರತೀಯ ಯೋಧರು ಶೂರರಲ್ಲಿ ಶೂರರು. ಅವರ ನೇತೃತ್ವ ವಹಿಸುವುದು ಒಂದು ಗೌರವದ ಕಾರ್ಯ.’’ ಹೀಗೆಂದು ಹೇಳಿದವರು ನಿವೃತ್ತ ಮೇಜರ್ ಟಾಮ್ ಕಾನ್‌ವೇ (98). ಭಾರತೀಯ ಯೋಧರ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದ್ದ ಹಾಗೂ ಈಗ ಬದುಕುಳಿದಿರುವ ಏಕೈಕ ಬ್ರಿಟಿಷ್ ಕಮಾಂಡರ್ ಅವರಾಗಿದ್ದಾರೆ.
ರವಿವಾರ ಅಮೃತಸರದಲ್ಲಿ ಯುದ್ಧ ಸ್ಮಾರಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಮೇಜರ್ ಕಾನ್ ವೇ ಸುಮಾರು 80 ವರ್ಷಗಳ ನಂತರ ಉತ್ತರ ಭಾರತಕ್ಕೆ ಭೇಟಿ ನೀಡಿದ್ದರು.
ಎರಡನೆ ಮಹಾಯುದ್ಧದಲ್ಲೂ ಭಾಗಿಯಾಗಿದ್ದ ಮೇಜರ್ ಟಾಮ್ ಕಾನ್ ವೇ ಅಲಮೇನ್ ಯುದ್ಧದ ಹೀರೋಗಳಲ್ಲೊಬ್ಬರಾಗಿದ್ದರಲ್ಲದೆ ಡೋಗ್ರಾ, ಸಿಕ್ಖರು ಹಾಗೂ ಪಠಾಣರನ್ನೊಳಗೊಂಡ ಸೇನೆಗೆ ಕಮಾಂಡರ್ ಆಗಿದ್ದವರು.
1940ರ ಎಪ್ರಿಲ್ ನಲ್ಲಿ ಬ್ರಿಟಿಷ್ ಸೇನೆಗೆ ಸೇರಿದ್ದ ಅವರು ತಾನು ಅದಾಗಲೇ ಭಾರತೀಯ ಯೋಧರ ಶೌರ್ಯಗಾಥೆಗಳನ್ನು ಕೇಳಿದ್ದಾಗಿ ಹೇಳಿಕೊಂಡಿದ್ದಾರೆ.
ಅವರು ಗೈಡ್ಸ್ ಕ್ಯಾವಲ್ರಿ ಸೇರಿದ್ದರು. ಮಧ್ಯರಾತ್ರಿಯಾಗಿ ಹತ್ತು ನಿಮಿಷದ ನಂತರ ಸಂಚರಿಸುತ್ತಿದ್ದ ಪಠಾಣ್ ಕೋಟ್ ನಿಂದ ಕುಲು ಕಣಿವೆಯ ತನಕದ ರೈಲಿನಲ್ಲಿ ತಾನು ಯಾವಾಗಲೂ ಪ್ರಯಾಣಿಸುತ್ತಿದ್ದೆ, ಎಂದು ಅವರು ನೆನಪಿಸಿಕೊಳ್ಳುತ್ತಾರಲ್ಲದೆ, ತಾವು ಡೋಗ್ರಾ ಸೈನಿಕರನ್ನು ಚೆನ್ನಾಗಿ ಅರಿಯಲು ಅವರ ಕುಟುಂಬ ಸದಸ್ಯರನ್ನೂ ಭೇಟಿಯಾಗುತ್ತಿದ್ದೆ ಎಂದರು.
ಅವರು ನಂತರ ಸುಡಾನ್ ನಲ್ಲೂ ಕಾರ್ಯನಿರ್ವಹಿಸಿದ್ದರಲ್ಲದೆ 1942 ರಲ್ಲಿ ನಡೆದ ಅಲಮೇನ್ ಯುದ್ಧದಲ್ಲಿ ಸಾಹಸ ಪ್ರದರ್ಶಿಸಿ ಪದಕ ವಿಜೇತರೂ ಆಗಿದ್ದರು.1944 ರಲ್ಲಿ ಸ್ವದೇಶಕ್ಕೆ ಮರಳಿದ ಅವರು ನಂತರ ಲಂಡನ್ನಿನಲ್ಲಿದ್ದ ಭಾರತೀಯ ಸೇನಾ ಪಡೆಯ ಕಮಾಂಡರ್ ಆಗಿದ್ದರಲ್ಲದೆ 1946 ರಲ್ಲಿ ನಡೆದ ವಿಕ್ಟರಿ ಪೆರೇಡ್ ನಂತರ ನಿವೃತ್ತಿ ಹೊಂದಿದ್ದರು.
ಕುಲು ಕಣಿವೆಗೆ ಮತ್ತೊಮ್ಮೆ ಹೋಗಲು ತನಗೆ ಆಸೆಯಾಗಿದೆ ಎಂದು ಅವರು ಹೇಳುತ್ತಾರಾದರೂ ಅದು ಈ ವಯಸ್ಸಿನಲ್ಲಿ ತಮಗೆ ಸಾಧ್ಯವೇ ಎಂಬುದು ಅವರಿಗೆ ತಿಳಿದಿಲ್ಲ.