ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರ ಪ್ರವೇಶಕ್ಕೆ ಅಸ್ತು
Update: 2016-10-24 14:57 IST
ಹೊಸದಿಲ್ಲಿ,ಅ.24: ಮುಂಬೈನ ಹಾಜಿ ಅಲಿ ದರ್ಗಾದ ಕೇಂದ್ರಸ್ಥಾನಕ್ಕೆ ಪುರುಷರಂತೆ ಮಹಿಳೆಯರಿಗೂ ಪ್ರವೇಶಾವಕಾಶವನ್ನು ಕಲ್ಪಿಸುವುದಾಗಿ ದರ್ಗಾದ ಟ್ರಸ್ಟ್ ಇಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು. ಇದಕ್ಕಾಗಿ ಅಗತ್ಯ ಮೂಲಸೌಕರ್ಯ ಬದಲಾವಣೆ ಗಳನ್ನು ಮಾಡಲು ನಾಲ್ಕು ವಾರಗಳ ಕಾಲಾವಕಾಶವನ್ನು ಅದು ಕೋರಿತು.
ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ್ ಹಾಗೂ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಎಲ್.ನಾಗೇಶ್ವರ ರಾವ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಟ್ರಸ್ಟ್‌ಗೆ ಕಾಲಾವಕಾಶವನ್ನು ನೀಡಿ, ಬಾಂಬೆ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಅದು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಲೇವಾರಿಗೊಳಿಸಿತು.
ದರ್ಗಾ ಪ್ರವೇಶಕ್ಕೆ ಮಹಿಳೆಯರಿಗೂ ಸಮಾನ ಅವಕಾಶವನ್ನು ನೀಡುವಂತೆ ಉಚ್ಚ ನ್ಯಾಯಾಲಯವು ಟ್ರಸ್ಟ್‌ಗೆ ಆದೇಶಿಸಿತ್ತು.