ಕೇರಳ ವಿಪಕ್ಷ ನಾಯಕ ರಮೇಶ ಚೆನ್ನಿತಲ ಮತ್ತು ಕುಟುಂಬಕ್ಕೆ ಜೀವ ಬೆದರಿಕೆ

Update: 2016-10-24 09:52 GMT

ತಿರುವನಂತಪುರ,ಅ.24: ಸೆಕ್ಯೂರಿಟಿ ಗಾರ್ಡ್‌ವೋರ್ವನನ್ನು ಕೊಂದು ಜೈಲಿನಲ್ಲಿರುವ ಬೀಡಿ ಉದ್ಯಮಿ ಮುಹಮ್ಮದ್ ನಿಶಾಮ್ ವಿರುದ್ಧ ಮಾತನಾಡುವುದನ್ನು ನಿಲ್ಲಿಸುವಂತೆ ಸೂಚಿಸಿ ತನಗೆ ಮತ್ತು ತನ್ನ ಕುಟುಂಬಕ್ಕೆ ಅ.22ರ ರಾತ್ರಿಯಿಂದ ವಿದೇಶದಿಂದ ಜೀವ ಬೆದರಿಕೆಗಳು ಬರತೊಡಗಿವೆ ಎಂದು ಕೇರಳ ಪ್ರತಿಪಕ್ಷ ನಾಯಕ ರಮೇಶ ಚೆನ್ನಿತಲ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.

ಅ.23ರ ರಾತ್ರಿ 11.22ಕ್ಕೆ ತನ್ನ ಮೊಬೈಲ್‌ಗೆ ಬೆದರಿಕೆ ಸಂದೇಶವೊಂದು ಸಹ ಬಂದಿದೆ ಎಂದರು.

ಸರಕಾರವು ಈ ಸಂಬಂಧ ತನಿಖೆ ನಡೆಸಬೇಕು ಮತ್ತು ಕಠಿಣ ಕ್ರಮವನ್ನು ಕೈಗೊಳ್ಳ ಬೇಕು ಎಂದು ಕೋರಿ ಚೆನ್ನಿತಲ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಡಿಜಿಪಿಯವರಿಗೆ ಪತ್ರಗಳನ್ನು ಸಲ್ಲಿಸಿದರು.

ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿದೆ ಮತ್ತು ಶೀಘ್ರವೇ ವಿಚಾರಣೆ ಕೈಗೊಳ್ಳಲಿದೆ ಎಂದು ಪಿಣರಾಯಿ ತಿಳಿಸಿದರು.

2015,ಜ.29ರಂದು ಬೆಳಗಿನ ಜಾವ ಪಾನಮತ್ತನಾಗಿದ್ದ ನಿಶಾಮ್ ತಾನು ವಾಸವಾಗಿದ್ದ ತ್ರಿಶೂರಿನ ವಸತಿ ಸಮುಚ್ಚಯದ ಪ್ರವೇಶ ದ್ವಾರವನ್ನು ತೆರೆಯಲು ವಿಳಂಬ ಮಾಡಿದ್ದ ಕ್ಷುಲ್ಲಕ ಕಾರಣಕ್ಕಾಗಿ ಸೆಕ್ಯೂರಿಟಿ ಗಾರ್ಡ್ ಮೈಮೇಲೆ ತನ್ನ ಐಷಾರಾಮಿ ವಾಹನವನ್ನು ಚಲಾಯಿಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ಆತ 2015,ಫೆ.16ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ವರ್ಷದ ಜನವರಿಯಲ್ಲಿ ತ್ರಿಶೂರಿನ ನ್ಯಾಯಾಲಯವು ನಿಶಾಮ್‌ಗೆ ಜೀವಾವಧಿ ಶಿಕ್ಷೆಯ ಜೊತೆಗೆ ಹೆಚ್ಚುವರಿಯಾಗಿ 24 ವರ್ಷಗಳ ಜೈಲು ಶಿಕ್ಷೆ ಮತ್ತು 80.30 ಲಕ್ಷ ರೂ.ದಂಡವನ್ನು ವಿಧಿಸಿತ್ತು.

ನಿಶಾಮ್ ಜೈಲಿನಿಂದಲೇ ತನ್ನ ವ್ಯವಹಾರವನ್ನು ನಡೆಸುತ್ತಿದ್ದಾನೆ. ಆತ ಎರಡು ಸೆಲ್‌ಫೋನ್‌ಗಳನ್ನು ಹೊಂದಿದ್ದು ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ ಎಂದು ಮಾಧ್ಯಮಗಳು ಇತ್ತೀಚಿಗೆ ವರದಿ ಮಾಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News