ಹಿಂದೂಗಳು ಜನಸಂಖ್ಯೆ ಹೆಚ್ಚಿಸಬೇಕು: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಹರಣ್‌ಪುರ್
(ಯು.ಪಿ) ಅಕ್ಟೋಬರ್ 24: ದೇಶದಲ್ಲಿರುವ ಹಿಂದೂಗಳು ಜನಸಂಖ್ಯೆಯನ್ನು ಹೆಚ್ಚಿಸಬೇಕೆಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. ಧರ್ಮವನ್ನು ನಾವು ಸಂರಕ್ಷಿಸಿದರೆ ಮಾತ್ರವೇ ಅದು ನಮ್ಮನ್ನು ಸಂರಕ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ. ಸಹರಣ್‌ಪುರ್ ಜಿಲ್ಲೆಯ ದೇವ್‌ಬದಿನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಾ ಹೀಗೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ.
ದೇಶದ ಜನರು ರಾಮಮಂದಿರವನ್ನು ಆಗ್ರಹಿಸುತ್ತಿದ್ದಾರೆ. ಆದರೆ ರಾಮಭಕ್ತರಿಲ್ಲದಾದರೆ ಹೇಗೆ ರಾಮಮಂದಿರ ನಿರ್ಮಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. ಹಿಂದೂಗಳ ಜನಸಂಖ್ಯೆಯನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಎಂಟು ರಾಜ್ಯಗಳಲ್ಲಿ ನಿರಂತರ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಗಿರಿರಾಜ್ ಈ ಸಂದರ್ಭದಲ್ಲಿ ಬೆಟ್ಟು ಮಾಡಿದ್ದಾರೆ.
ಭಾರತ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಶೇ.22ರಷ್ಟು ಹಿಂದೂಗಳಿದ್ದರು. ಆದರೆ ಈಗ ಕೇವಲ ಒಂದು ಶೇಕಡಾ ಹಿಂದೂಗಳಿದ್ದಾರೆ. ಭಾರತದಲ್ಲಿ ಶೇ.90ರಷ್ಟು ಹಿಂದೂಗಳು ಮತ್ತು ಶೇ.10ರಷ್ಟು ಮುಸ್ಲಿಮರು ಇದ್ದರು. ಆದರೆ ಈಗ ಮುಸ್ಲಿಮರ ಜನಸಂಖ್ಯೆ ಶೇ.24ಕ್ಕೆ ತಲುಪಿದೆ ಮತ್ತು ಹಿಂದೂಗಳ ಜನಸಂಖ್ಯೆ ಶೇ. 76ಕ್ಕೆ ಕುಸಿದಿದೆ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆಂದುವರದಿ ತಿಳಿಸಿದೆ.