ತ್ರಿವಳಿ ತಲಾಕ್ ನಿಂದ ಮುಸ್ಲಿಮ್ ಮಹಿಳೆಯರ ಬಾಳು ಹಾಳಾಗಲು ಬಿಡುವುದಿಲ್ಲ:ಪ್ರಧಾನಿ ಮೋದಿ
ಮಹೋಬಾ(ಉ.ಪ್ರ.),ಅ.24: ತ್ರಿವಳಿ ತಲಾಕ್ ಕುರಿತಂತೆ ನಡೆಯುತ್ತಿರುವ ಚರ್ಚೆಯಲ್ಲಿಂದು ಸೇರಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಮುಸ್ಲಿಮರಲ್ಲಿಯ ಈ ಪದ್ಧತಿಯನ್ನು ವಿರೋಧಿಸಿದರು. ಇದೇ ವೇಳೆ ಹಿಂದು ಸಮಾಜದಲ್ಲಿ ಹೆಣ್ಣು ಭ್ರೂಣಹತ್ಯೆ ಪ್ರಚಲಿತದಲ್ಲಿರುವುದನ್ನು ಅವರು ಬಲವಾಗಿ ಖಂಡಿಸಿದರು.
ಹೆಣ್ಣು ಭ್ರೂಣಹತ್ಯೆ ಪಾಪದ ಕಾರ್ಯವಾಗಿದೆ. ಇದನ್ನು ನಿಲ್ಲಿಸಲು ಸರಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ.ಪುತ್ರಿಯರು,ತಾಯಂದಿರು ಮತ್ತು ಸೋದರಿ ಯರನ್ನು ರಕ್ಷಿಸುವುದು ಅಗತ್ಯವಾಗಿದೆ ಎಂದ ಅವರು, ಯಾರೂ ಧರ್ಮವನ್ನು ಪರಿಗಣಿಸಬಾರದು. ತಾಯಂದಿರು ಮತ್ತು ಸೋದರಿಯರನ್ನು ಗೌರವಿಸಬೇಕು.ನಾವು ಈ ವಿಷಯವನ್ನು ಬಲವಾಗಿ ಪ್ರತಿಪಾದಿಸಿದ್ದೇವೆ ಎಂದರು.
ಈಗ ತಲಾಕ್‌ನ ವಿಷಯ ಎದುರಾಗಿದೆ.ಯಾವುದೇ ಹಿಂದು ವ್ಯಕ್ತಿ ಭ್ರೂಣ ಹತ್ಯೆ ಮಾಡಿದರೆ ಜೈಲಿಗೆ ಹೋಗುತ್ತಾನೆ.ಇದೇ ರೀತಿ ಯಾರೋ ದೂರವಾಣಿಯಲ್ಲಿ ತಲಾಕ್ ಹೇಳುತ್ತಾರೆ ಮತ್ತು ಅವಳ ಜೀವನ ಹಾಳಾಗಿಹೋಗುತ್ತದೆ. ಇಂತಹ ನನ್ನ ಮುಸ್ಲಿಮ್ ಸೋದರಿಯರ ಅಪರಾಧವಾದರೂ ಏನು ಎಂದು ಅವರು ಪ್ರಶ್ನಿಸಿದರು.
ಚುನಾವಣೆ ಸನ್ನಿಹಿತವಾಗಿರುವ ಉತ್ತರ ಪ್ರದೇಶದ ಬುಂದೇಲಖಂಡ್ ಪ್ರದೇಶದಲ್ಲಿಯ ಮಹೋಬಾದಲ್ಲಿ ‘ಮಹಾಪರಿವರ್ತನ್ ರ್ಯಾಲಿ’ಯನ್ನುದ್ದೇಶಿಸಿ ಮಾತ ನಾಡುತ್ತಿದ್ದ ಅವರು, ತ್ರಿವಳಿ ತಲಾಕ್‌ನ್ನು ಹಿಂದು ವಿರುದ್ಧ ಮುಸ್ಲಿಮ್ ಅಥವಾ ಬಿಜೆಪಿ ವಿರುದ್ಧ ಇತರ ಪಕ್ಷಗಳ ವಿವಾದವನ್ನಾಗಿ ಮಾಡದಂತೆ ಟಿವಿ ವಾಹಿನಿಗಳನ್ನು ಆಗ್ರಹಿಸಿದರು. ಕೇಂದ್ರವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ಹೇಳಿಕೆಯಲ್ಲಿ ಮಹಿಳೆಯರ ಮೇಲೆ ಯಾವುದೇ ದೌರ್ಜನ್ಯ ನಡೆಯಬಾರದು ಮತ್ತು ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯವಿರಕೂಡದು ಎಂದು ಸ್ಪಷ್ಟವಾಗಿ ತಿಳಿಸಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಚರ್ಚೆಗಳು ನಡಯಬೇಕು. ಸರಕಾರವು ತನ್ನ ನಿಲುವನ್ನು ಮಂಡಿಸಿದೆ. ತ್ರಿವಳಿ ತಲಾಕ್‌ನಿಂದ ವಿಷಯಾಂತರಿಸುವರು ಜನರನ್ನು ಪ್ರಚೋದಿಸು ತ್ತಿದ್ದಾರೆ. ತ್ರಿವಳಿ ತಲಾಕ್‌ನಿಂದ ಈ ದೇಶದ ಮುಸ್ಲಿಮ್ ಮಹಿಳೆಯರ ಬಾಳು ಹಾಳಾಗಲು ಬಿಡುವಂತಿಲ್ಲ ಎಂದು ಅವರು ಹೇಳಿದರು.
ಮುಸ್ಲಿಮ್ ಮಹಿಳೆಯರ ಹಕ್ಕುಗಳನ್ನು ರಕ್ಷಿಸಬೇಕೋ ಬೇಡವೇ ಅಥವಾ ಅವರು ಸಮಾನ ಹಕ್ಕುಗಳನ್ನು ಪಡೆಯಬೇಕೋ ಬೇಡವೇ ಎಂದು ಪ್ರಧಾನಿ ತನ್ನ ಭಾಷಣದಲ್ಲಿ ಸಭಿಕರನ್ನು ಪ್ರಶ್ನಿಸಿದರು.
ವೋಟ್ ಬ್ಯಾಂಕಿನ ತಮ್ಮ ದುರಾಸೆಯಿಂದ ಕೆಲವು ರಾಜಕೀಯ ಪಕ್ಷಗಳು ಈ 21ನೇ ಶತಮಾನದಲ್ಲಿ ಮಹಿಳೆಯರಿಗೆ ಅನ್ಯಾಯವೆಸಗಲು ಕಟಿಬದ್ಧವಾಗಿರುವುದು ಆಶ್ಚರ್ಯ ಮೂಡಿಸುತ್ತಿದೆ. ಇದು ಯಾವ ಬಗೆಯ ನ್ಯಾಯ ಎಂದು ಅವರು ಕೇಳಿದರು.
ರಾಜಕೀಯ ಮತ್ತು ಚುನಾವಣೆಗಳು ತಮ್ಮದೇ ಆದ ಸ್ಥಾನಗಳನ್ನು ಹೊಂದಿವೆ. ಆದರೆ ಮುಸ್ಲಿಮ್ ಮಹಿಳೆಯರಿಗೆ ಸಂವಿಧಾನದಂತೆ ಅವರ ಹಕ್ಕುಗಳು ದೊರೆಯುವಂತೆ ಮಾಡುವುದು ಸರಕಾರದ ಮತ್ತು ಈ ದೇಶದ ಜನತೆಯ ಹೊಣೆಗಾರಿಕೆಯಾಗಿದೆ ಎಂದು ಮೋದಿ ನುಡಿದರು.