ಅಧ್ಯಕ್ಷನಾಗಲು ಅನರ್ಹ ಎನ್ನುವುದು ಟ್ರಂಪ್‌ರಿಂದ ಪ್ರತಿ ದಿನ ಸಾಬೀತು

Update: 2016-10-24 14:54 GMT


ಲಾಸ್ ವೇಗಸ್, ಅ. 24: ತಾನು ಅಧ್ಯಕ್ಷನಾಗಲು ಅಸಮರ್ಥ ಎನ್ನುವುದನ್ನು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪ್ರತಿದಿನವೂ ಸಾಬೀತುಪಡಿಸುತ್ತಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಅದೇ ವೇಳೆ, ತಮ್ಮ ಪಕ್ಷದ ಅಭ್ಯರ್ಥಿಯ ವಿವೇಚನಾರಹಿತ ಭಾವಾತಿರೇಕದ ಮಾತುಗಳನ್ನು ಅನುಮೋದಿಸುತ್ತಿರುವುದಕ್ಕಾಗಿ ರಿಪಬ್ಲಿಕನ್ ಪಕ್ಷದ ನಾಯಕರನ್ನೂ ಅವರು ಟೀಕಿಸಿದರು.


‘‘ಮುಂದಿನ 16 ತಿಂಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಷ್ಟಪಡದಿದ್ದರೆ, ನಾವು ಇಲ್ಲಿವರೆಗೆ ಸಾಧಿಸಿರುವ ಇಷ್ಟೆಲ್ಲಾ ಪ್ರಗತಿಯು ಕಿಟಿಕಿಯ ಮೂಲಕ ಹೊರಗೆ ಹೋಗಬಹುದು. ಯಾಕೆಂದರೆ, ಈಗ ನಾನು ಹೊಂದಿರುವ ಹುದ್ದೆಯನ್ನು ವಹಿಸಿಕೊಳ್ಳಲು ಸ್ಪರ್ಧಿಸುತ್ತಿರುವ ಓರ್ವ ವ್ಯಕ್ತಿಯು, ತಾನು ಈ ಸ್ಥಾನಕ್ಕೆ ಅನರ್ಹ ಎಂಬುದನ್ನು ಪ್ರತಿ ದಿನ ಪ್ರತಿಯೊಂದು ವಿಧಾನದ ಮೂಲಕ ತೋರ್ಪಡಿಸುತ್ತಿದ್ದಾರೆ’’ ಎಂದು ಲಾಸ್ ವೇಗಸ್‌ನಲ್ಲಿ ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ ಒಬಾಮ ನುಡಿದರು.


‘‘ನಿಮ್ಮ ಎದುರು ಇನ್ನೊಂದು ಆಯ್ಕೆ ಇದೆ. ಹಿಲರಿ ರೋದಮ್ ಕ್ಲಿಂಟನ್. ಅವರು ಈವರೆಗೆ ಈ ಸ್ಥಾನಕ್ಕೆ ಏರಿದವರಿಗೆ ಸಮನಾದ ಅರ್ಹತೆಯನ್ನು ಹೊಂದಿದ್ದಾರೆ’’ ಎಂದು ಸಭಿಕರ ಚಪ್ಪಾಳೆಯ ನಡುವೆ ಹೇಳಿದರು.


 ರಿಪಬ್ಲಿಕನ್ ರಾಜಕಾರಣಿಗಳು ಮತ್ತು ತೀರಾ ಬಲಪಂಥೀಯ ಮಾಧ್ಯಮಗಳು ವರ್ಷಗಳ ಕಾಲ ತನ್ನ ಮತ್ತು ಹಿಲರಿ ಬಗೆಗೆ ಕ್ಷುಲ್ಲಕ ವಿಚಾರಗಳನ್ನು ಹೇಳುತ್ತಾ ಬಂದರು. ನಾನು ಇಲ್ಲಿ ಹುಟ್ಟಿಲ್ಲ ಎಂದು ಅವರು ಹೇಳಿದರು. ಹವಾಮಾನ ಬದಲಾವಣೆ ಎನ್ನುವುದು ಕಟ್ಟುಕತೆ ಎಂದರು. ನಾನು ಪ್ರತಿಯೊಬ್ಬರ ಬಂದೂಕುಗಳನ್ನು ತೆಗೆದುಕೊಳ್ಳುತ್ತೇನೆ ಎಂದರು. ನಾವು ಎಂದಿನಂತೆ ಸೇನಾ ಅಭ್ಯಾಸಗಳನ್ನು ನಡೆಸುತ್ತಿದ್ದಾಗ ಸೇನಾಡಳಿತ ಹೇರುವುದಕ್ಕಾಗಿ ಸಂಚು ಮಾಡಲಾಗುತ್ತಿದೆ ಎಂದರು. ವರ್ಷಗಳ ಕಾಲ ಅವರು ಹೇಳುತ್ತಾ ಬಂದಿರುವುದು ಇದನ್ನು. ಅದನ್ನು ಜನರು ಕೇಳುತ್ತಿದ್ದಾರೆ ಹಾಗೂ ‘ಹೌದು, ಇದು ಸರಿ ಇರಬಹುದು’ ಎಂಬುದಾಗಿ ಯೋಚಿಸಲೂ ಆರಂಭಿಸಿದ್ದಾರೆ’’ ಎಂದರು.


 ‘‘ಪ್ರಾಂಪ್ಟರ್ ಇಲ್ಲದೆ ನನಗೆ ಮಾತನಾಡಲೂ ಸಾಧ್ಯವಿಲ್ಲ. ಹೀಗಿರುವಾಗ, ನಾನು ಚಂಡಮಾರುತವನ್ನು ಸೃಷ್ಟಿಸಬಲ್ಲೆ, ಪ್ರತಿಯೊಬ್ಬರ ಬಂದೂಕುಗಳನ್ನು ಮಧ್ಯರಾತ್ರಿ ಕಸಿದುಕೊಳ್ಳಬಲ್ಲೆ ಹಾಗೂ ಸೇನಾಡಳಿತವನ್ನು ಹೇರಬಲ್ಲೆ ಎಂಬುದಾಗಿ ಅವರು ನಂಬುವುದಾದರೆ, ಡೊನಾಲ್ಡ್ ಟ್ರಂಪ್‌ರಂಥವರನ್ನು ಅವರು ತಮ್ಮ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿಸಿದರೆ ಅದರಲ್ಲಿ ಯಾವುದೇ ಅಚ್ಚರಿ ನನಗೆ ಕಾಣುವುದಿಲ್ಲ’’ ಎಂದು ಒಬಾಮ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News