ಕಾಸರಗೋಡು: ಸಬ್ಸಿಡಿ ಸೀಮೆಎಣ್ಣೆ ಅಕ್ರಮವನ್ನು ಪತ್ತೆಹಚ್ಚಿದ ಮೀನುಗಾರರು

Update: 2016-10-25 04:09 GMT

ಕಾಸರಗೋಡು, ಅ.25: ಮೀನುಗಾರರಿಗೆ ಒದಗಿಸಿರುವ ಸಬ್ಸಿಡಿ ಸೀಮೆ ಎಣ್ಣೆಯನ್ನು ಅಕ್ರಮವಾಗಿ ಸಾಗಾಟ ಮಾಡಲೆತ್ನಿಸಿದ ಪ್ರಕರಣವನ್ನು ಮೀನುಗಾರರು ಪತ್ತೆಹಚ್ಚಿದ ಘಟನೆ ಸೋಮವಾರ ರಾತ್ರಿ  ಕಾಸರಗೋಡು ಕಸಬಾ ತೀರದಲ್ಲಿ ನಡೆದಿದೆ.

ಕಸಬಾ ತೀರದ ಮತ್ಸ್ಯಫೆಡ್  ಬಂಕ್  ನಿಂದ  ಸೀಮೆಎಣ್ಣೆ ಸಾಗಾಟಕ್ಕೆ ಯತ್ನಿಸುತ್ತಿದ್ದಾಗ ಘಟನೆ ನಡೆದಿದೆ.  ಬಂಕ್ ನ  ಓರ್ವ  ನೌಕರ ಮತ್ತು ಸೀಮೆ ಎಣ್ಣೆ  ಕೊಂಡೊಯ್ಯಲು ಬಂದಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಕ್ ನ್ನು ಪೊಲೀಸರು ಮುಚ್ಚಿದ್ದಾರೆ.

ಕಳೆದ ಮೂರು ದಿನಗಳಿಂದ ಮೀನುಗಾರರಿಗೆ ಸೀಮೆಎಣ್ಣೆ ಲಭಿಸುತ್ತಿರಲಿಲ್ಲ. ಎರಡು ದಿನಗಳ ಹಿಂದೆ 11 ಸಾವಿರ ಲೀಟರ್ ಸೀಮೆ ಎಣ್ಣೆ  ಬಂದಿತ್ತು. ಮೀನುಗಾರರು ಸೀಮೆಎಣ್ಣೆಗಾಗಿ  ಟೋಕನ್ ಪಡೆದು ಕಾದರೂ ಸೀಮೆಎಣ್ಣೆ  ಖಾಲಿಯಾಗಿದೆ ಎಂಬ ಉತ್ತರ ಲಭಿಸುತ್ತಿತ್ತು. ಆದರೆ  ಮೀನುಗಾರರಿಗೆ ಸೀಮೆ ಎಣ್ಣೆ  ನೀಡದೆ  ಕಾಳಸಂತೆಯಲ್ಲಿ ದುಬಾರಿ ದರಕ್ಕೆ ಸೀಮೆ ಎಣ್ಣೆ  ಮಾರಾಟ ಮಾಡಲಾಗುತ್ತಿತ್ತು. ಸೋಮವಾರ ರಾತ್ರಿ 470 ಲೀಟರ್ ನಷ್ಟು ಸೀಮೆ ಎಣ್ಣೆ  ಸಾಗಾಟಕ್ಕೆ ಯತ್ನಿಸಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ   

ಮತ್ಸಫೆಡ್ ನ  ಬಂಕ್ ನಲ್ಲಿ 932  ಪರ್ಮಿಟ್ ಗಳಿವೆ. ಇದರಲ್ಲಿ 600ರಷ್ಟು ಪರ್ಮಿಟ್ ಗಳನ್ನು ಖಾಯಂ ಆಗಿ  ಬಳಸಲಾಗುತ್ತಿದೆ.  25 ರೂ. ಸಬ್ಸಿಡಿ ಕಳೆದು 60.25 ರೂ ಗೆ ಲಭಿಸುತ್ತಿತ್ತು.  ಆದರೆ ಕಾಳ ಸಂತೆಯಲ್ಲಿ  80ರಿಂದ 90 ರೂ. ದರದಲ್ಲಿ  ವಿತರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News