×
Ad

ತಲಾಕ್ ಬಗ್ಗೆ ಮಾತನಾಡುವ ಮೊದಲು ಪ್ರಧಾನಿ ಮೋದಿ ಗಮನಿಸಲೇಬೇಕಾದ 4 ಪ್ರಕರಣಗಳು

Update: 2016-10-25 12:10 IST

ಹೊಸದಿಲ್ಲಿ, ಅ.25: ಮುಸ್ಲಿಂ ಮಹಿಳೆಯರ ಕಲ್ಯಾಣದ ಬಗ್ಗೆ ಮಾತನಾಡುವವರಲ್ಲಿ ಪ್ರಧಾನಿ ನರೇಂದ್ರ ಮೋದಿ ಕಟ್ಟ ಕಡೆಯವರಾಗಿರಬೇಕು. ಅವರು ತಮ್ಮಪತ್ನಿ ಜಶೋದಾ ಬೆನ್ ಅವರನ್ನು ನಡೆಸಿಕೊಂಡ ರೀತಿ ಸರ್ವವಿಧಿತ. ಆದರೆ ಇದೀಗ ಪ್ರಧಾನಿ ಮೋದಿ ತ್ರಿವಳಿ ತಲಾಕ್ ವಿಚಾರವನ್ನು ಎತ್ತಿಕೊಂಡು ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವ ಉದ್ದೇಶ ಹೊಂದಿದ್ದಾರೆ.ಸೋಮವಾರ ಉತ್ತರ ಪ್ರದೇಶದ ಮಹೋಬಾದಲ್ಲಿ ರ್ಯಾಲಿಯೊಂದನ್ನುದ್ದೇಶಿಸಿದ ಮೋದಿ ತ್ರಿವಳಿ ತಲಾಕ್ ವಿಚಾರ ಮಾತನಾಡುತ್ತಾ, ‘‘ಯಾರಾದರೂ ಫೋನಿನಲ್ಲೂ ಮೂರು ಬಾರಿ ತಲಾಕ್ ಹೇಳಿದರೆ ಮುಸ್ಲಿಂ ಪುತ್ರಿಯರ ಬಾಳುಬರಡಾಗುವುದು,’’ ಎಂದಿದ್ದಾರೆ.

ಆದರೆ ತ್ರಿವಳಿ ತಲಾಕ್ ಬಗ್ಗೆ ಮಾತನಾಡುವ ಮುನ್ನ ಅವರು ಈ ಕೆಳಕಂಡ ನಾಲ್ಕು ಪ್ರಕರಣಗಳ ಬಗ್ಗೆತಿಳಿದುಕೊಳ್ಳುವುದು ಅಗತ್ಯವಾಗಿದೆ.

1. ಝಕಿಯಾ ಜಾಫ್ರಿ

2002 ರ ಗುಜರಾತ್ ಹಿಂಸಾಚಾರದ ಸಂದರ್ಭ ಅಹ್ಮದಾಬಾದ್ ನಗರದ ಗುಲ್ಬರ್ಗ್ ಸೊಸೈಟಿಯಲ್ಲಿ 68 ಜನರೊಂದಿಗೆ ಹತ್ಯೆಗೀಡಾದ ಎಹ್ಸಾನ್ ಜಾಫ್ರಿ ಅವರ ಪತ್ನಿಯೇ ಝಕಿಯಾ. ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ ಗುಲ್ಬರ್ಗ್ ಸೊಸೈಟಿಯ ಹೊರಗೆ ದೊಡ್ಡ ಗುಂಪೊಂದು ಸೇರಿದಾಗ ಎಹ್ಸಾನ್ ಅವರು ಮೋದಿಗೆ ಕರೆ ಮಾಡಿ ಸಹಾಯ ಯಾಚಿಸಿದ್ದರು. ಆದರೆ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಜಾಫ್ರಿಯವರನ್ನು ನಿಂದಿಸಿ ಅವರೇಕೆ ಇನ್ನೂ ಹತ್ಯೆಗೀಡಾಗಿಲ್ಲ ಎಂದು ಅವರಿಗೆ ಹೇಳಿದ್ದರೆನ್ನಲಾಗಿದೆ. ಸ್ಪಷ್ಟವಾಗಿ ಆ ಮುಸ್ಲಿಂ ಮಹಿಳೆ ವಿಧವೆಯಾಗುವುದನ್ನು ಮೋದಿಗೆ ತಪ್ಪಿಸಲಾಗಿಲ್ಲ.

2. ನರೋಡಾ ಪಟಿಯಾ ಸಂತ್ರಸ್ತರು

ನರೋಡಾ ಪಟಿಯಾ ಸಂತ್ರಸ್ತ ಮಹಿಳೆಯರ ಕಥೆಯಂತೂ ಇನ್ನಷ್ಟು ಭಯಾನಕ. ಈ ಕೆಳಗಿನ ಎರಡು ಪ್ರತ್ಯಕ್ಷದರ್ಶಿ ವಿವರಗಳನ್ನು ಓದಿ.

‘‘ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದ ನನ್ನ ನಾದಿನಿ ಕೌಸರ್ ಬಾನೋಗೆ ಅವರು ಮಾಡಿದ್ದು ಭಯಾನಕ. ಅವರು ಆಕೆಯ ಹೊಟ್ಡೆಯನ್ನು ಸೀಳಿ ಕತ್ತಿಯೊಂದರ ಸಹಾಯದಿಂದ ಭ್ರೂಣವನ್ನು ಹೊರತೆಗೆದು ಅದನ್ನು ಉರಿಯುತ್ತಿರುವ ಬೆಂಕಿಗೆ ಎಸೆದರು. ನಂತರ ಅವರು ಆಕೆಯನ್ನೂ ಸುಟ್ಟು ಕೊಂದರು,’’ ಎಂದು ಸಾಯಿರಾ ಬಾನು ಹೇಳುತ್ತಾರೆ (ಈ ಹೇಳಿಕೆಯನ್ನು ಮಾರ್ಚ್ 27, 2002ರಲ್ಲಿ ಶಾಹ್-ಇ- ಆಲಂ ಶಿಬಿರದಲ್ಲಿ ದಾಖಲಿಸಿಕೊಳ್ಳಲಾಗಿತ್ತು.)

‘‘ನಮ್ಮನ್ನು ಗಂಗೋತ್ರಿ ಸೊಸೈಟಿಯಿಂದ ಬಲವಂತವಾಗಿ ಹೊರಕಳುಹಿಸಿದ ನಂತರ ಗುಂಪೊಂದು ಉರಿಯುತ್ತಿರುವ ಟಯರುಗಳೊಂದಿಗೆ ನಮ್ಮನ್ನು ಬೆನ್ನಟ್ಟಿದ್ದವು. ಆಗ ಅವರು ಬಹಳಷ್ಟು ಹುಡುಗಿಯರ ಮೇಲೆ ಅತ್ಯಾಚಾರ ನಡೆಸಿದರು. ಸುಮಾರು 8-10 ಮಂದಿ ನಮ್ಮೆದುರೇ ಅತ್ಯಾಚಾರಕ್ಕೀಡಾಗಿದ್ದನ್ನು ನೋಡಿದೆವು. 16 ವರ್ಷದ ಮೆಹರುನ್ನೀಸಾಳನ್ನು ವಿವಸ್ತ್ರಗೊಳಿಸುವುದನ್ನು ನಾವು ನೋಡಿದ್ದೆವು. ಅವರೆಲ್ಲಾ ತಾವು ಕೂಡ ವಿವಸ್ತ್ರರಾಗಿ ಮಹಿಳೆಯರನ್ನು ಆಹ್ವಾನಿಸುತ್ತಿದ್ದರು. ಆದರೆ ಈಗ ಯಾವುದೇ ಪುರಾವೆಯಿಲ್ಲ,’’ ಕುಲ್ಸುಂ ಬೀಬಿ ಎಂಬವರು ಮಾರ್ಚ್ 27, 2002ರಂದು ಶಾಹ್ -ಇ- ಆಲಂ ಶಿಬಿರದಲ್ಲಿಈ ಹೇಳಿಕೆ ನೀಡಿದ್ದರು.

ಈ ಮುಸ್ಲಿಂ ಮಹಿಳೆಯರ ಮೇಲಿನ ಈ ಭೀಭತ್ಸ ದೌರ್ಜನ್ಯಗಳು ಮೋದಿ ಮುಖ್ಯಮಂತ್ರಿ ಯಾಗಿದ್ದಾಗಲೇ ನಡೆದಿದ್ದವು. ಆಗ ಮುಸ್ಲಿಂ ಮಹಿಳೆಯರ ಬಗೆಗಿನ ಅವರ ಕಾಳಜಿ ಎಲ್ಲಿತ್ತು ?

3. ಮೇವತ್ ಗ್ಯಾಂಗ್ ರೇಪ್ ಸಂತ್ರಸ್ತರು

ಆಗಸ್ಟ್ 24 ರಂದು ಹರ್ಯಾಣದ ಮೇವತ್ ನಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರ ಮೇಲೆ ಅವರು ಗೋಮಾಂಸ ತಿಂದ ತಪ್ಪಿಗೆ ಗೋ ರಕ್ಷಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದರೆಂದು ಆರೋಪಿಸಲಾಗಿತ್ತು. ಈ ಪ್ರಕರಣದ ಸಂತ್ರಸ್ತರಲ್ಲಿ ಒಬ್ಬಳ ವಯಸ್ಸು 16 ಆಗಿದ್ದರೆ, ಇನ್ನೊಬ್ಬಳು 21 ವಯಸ್ಸಿನವಳು ಹಾಗೂ ಒಂದು ವರ್ಷದ ಮಗುವಿನ ತಾಯಿ. ಮಹಿಳೆಯರ ಚಿಕ್ಕಪ್ಪ, ಚಿಕ್ಕಮ್ಮನನ್ನು ಇದೇ ಮಂದಿ ಕೊಂದಿದ್ದರು. ಆರೋಪಿಗಳಲ್ಲೊಬ್ಬ ತಾನೊಬ್ಬ ಸ್ವಯಂಸೇವಕನೆಂದು ಹೇಳಿಕೊಂಡಿದ್ದಾನೆಂಬ ಬಗ್ಗೆ ಮಾಹಿತಿಯಿದೆ.

ಬಿಜೆಪಿ ಆಡಳಿತವಿರುವ ಹರ್ಯಾಣದಲ್ಲಿ ಈ ಎರಡೂ ಪ್ರಕರಣಗಳು ನಡೆದಿದ್ದವು. ಆದರೆ ಈ ಘಟನೆ ನಡೆದ ಸಂದರ್ಭ ರಾಜ್ಯ ಸರಕಾರ ಮೇವತ್ ನಲ್ಲಿ ಗೋಮಾಂಸ ಪತ್ತೆಗಾಗಿ ಬಿರಿಯಾನಿ ಸ್ಯಾಂಪಲ್ಲುಗಳನ್ನು ಪತ್ತೆ ಹಚ್ಚುವ ಕಾರ್ಯಗಳಲ್ಲಿ ವ್ಯಸ್ತವಾಗಿತ್ತು.

4. ಇನ್ಶಾ ಮಲಿಕ್ 

ಕಾಶ್ಮೀರದ ಶೋಪಿಯನ್ ಪಟ್ಟಣದ 14 ವರ್ಷದ ಶಾಲಾ ಬಾಲಕಿ ಇನ್ಶಾ ಮೂರು ತಿಂಗಳುಗಳ ಹಿಂದೆ ಸುರಕ್ಷಾ ಪಡೆಗಳು ಉಪಯೋಗಿಸಿದ್ದ ಪೆಲೆಟ್ ಗನ್ನುಗಳಿಂದ ಕಣ್ಣುಗಳಿಗೆ ಹಾನಿಯಾಗಿ ಕುರುಡಿಯಾಗಿದ್ದಾಳೆ. ಆಕೆಯೇನು ಪ್ರತಿಭಟಿಸುತ್ತಿರಲಿಲ್ಲ ಯಾ ಕಲ್ಲೆಸೆತದಲ್ಲಿ ತೊಡಗಿ ಕೊಂಡಿರಲಿಲ್ಲ. ಮೇಲಾಗಿ ಅವಳು ದೇಶಕ್ಕೆ ಯಾವುದೇ ರೀತಿಯಲ್ಲಿ ಬೆದರಿಕೆಯೊಡ್ಡಿರಲಿಲ್ಲ. ವರದಿಯೊಂದರ ಪ್ರಕಾರ ಪೆಲೆಟ್ ಗನ್ ದಾಳಿಯಿಂದಾಗಿ ಆಕೆಯ ಮುಖ ಹಾಗೂ ಕುತ್ತಿಗೆ ವೈರ್ ಮೆಶ್ ನಂತೆ ಕಾಣುತ್ತಿದೆ.

ಇಲ್ಲಿಯ ತನಕ ಇನ್ಶಾ ಹಾಗೂ ಆಕೆಯಂತೆ ತಮ್ಮದಲ್ಲದ ತಪ್ಪಿಗೆ ತಮ್ಮ ಕಣ್ಣು ಕಳೆದುಕೊಂಡ ನೂರಾರು ಕಾಶ್ಮೀರಿಗಳ ಬಗ್ಗೆ ಪ್ರಧಾನಿ ಮೋದಿ ಏನನ್ನೂ ಹೇಳಿಲ್ಲ.

ಕೃಪೆ: catchnews.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News