ದ್ವೇಷ ಆಮದು ಮಾಡಿಕೊಳ್ಳಲು ಹೊರಟಿದೆ ಅಬುಧಾಬಿ ಕರ್ನಾಟಕ ಸಂಘ !

Update: 2016-10-25 06:41 GMT

ಅಬುಧಾಬಿ ಕರ್ನಾಟಕ ಸಂಘ ಯುಎಇ ಕನ್ನಡಿಗರ ಪಾಲಿನ ಅತ್ಯಂತ ಪ್ರಮುಖ ಕನ್ನಡ ಸಂಸ್ಥೆ. ಈ ಸಂಸ್ಥೆಗೆ ಅದರದ್ದೇ ಆದ ಇತಿಹಾಸ , ಮಹತ್ವ ಇದೆ. ಕಳೆದ ಮೂರ್ನಾಲ್ಕು ದಶಕಗಳಲ್ಲಿ ಯುಎಇ ಕನ್ನಡಿಗರ ಪಾಲಿನ ಅಧಿಕೃತ ಕನ್ನಡ ಸಂಘವಾಗಿ ಈ ಸಂಸ್ಥೆ ಬೆಳೆದಿದೆ. ಎಲ್ಲ ಧರ್ಮ , ವರ್ಗಗಳ ಜನರು ಇದನ್ನು ತಮ್ಮದೇ ಸಂಸ್ಥೆ ಎಂಬ ಪ್ರೀತಿ, ಅಕ್ಕರೆಯಿಂದ ನೋಡುತ್ತಾರೆ, ಇದರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಖ್ಯಾತ ಅನಿವಾಸಿ ಭಾರತೀಯ ಉದ್ಯಮಿಗಳು ಇದರ ನೇತೃತ್ವ ವಹಿಸಿ ಇದನ್ನು ಕಟ್ಟಿ ಬೆಳೆಸಲು ಸಾಕಷ್ಟು ಸಮಯ, ಹಣ ವಿನಿಯೋಗಿಸಿದ್ದಾರೆ. ಅದೆಲ್ಲದರ ಫಲವಾಗಿ ಇಂದು ಈ ಸಂಸ್ಥೆ ಅರಬ್ ನಾಡಿನ ಅತ್ಯಂತ ಪ್ರಸಿದ್ಧ ಕನ್ನಡ ಸಂಘವಾಗಿ ಬೆಳೆದು ನಿಂತಿದೆ. ಈ ಬೆಳವಣಿಗೆಯಲ್ಲಿ ಪ್ರತಿಯೊಂದು ಧರ್ಮ, ಜಾತಿ, ವರ್ಗಗಳ ಜನರ ಪರಿಶ್ರಮವಿದೆ ಎಂಬುದು ನಿಸ್ಸಂಶಯ. ಅರ್ಹವಾಗಿಯೇ ಅಬುಧಾಬಿ ಕರ್ನಾಟಕ ಸಂಘ ಪ್ರತಿಷ್ಠಿತ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರವಾಗಿದೆ. 

ಈ ಸಂಸ್ಥೆ ಪ್ರತಿವರ್ಷ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಈ ಬಾರಿ ನವೆಂಬರ್ ೪ ರಂದು ಈ ಸಂಸ್ಥೆಯ ವತಿಯಿಂದ  ಅಬುಧಾಬಿಯ ಇಂಡಿಯನ್ ಸೋಷಿಯಲ್ ಅಂಡ್ ಕಲ್ಚರಲ್ ಸೆಂಟರ್ ನಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ ಎಲ್ಲ ಬಣ್ಣ ಮಸಿ ನುಂಗಿತು ಎಂಬಂತೆ ಈ ಬಾರಿ ಈ ಕಾರ್ಯಕ್ರಮದ ಮುಖ್ಯ ಅತಿಥಿ ಚಕ್ರವರ್ತಿ ಸೂಲಿಬೆಲೆ ! 

ಸಾಲದ್ದಕ್ಕೆ ಈತನನ್ನು ' ನ್ಯಾಷನಲಿಸ್ಟ್ ಥಿಂಕರ್ ', ' ಗ್ರೇಟ್ ಒರೇಟರ್ ' ಎಂದು ಬಣ್ಣಿಸಲಾಗಿದೆ. ಸಂಘಟಕರ ಪ್ರಕಾರ ಈತ ನೀಡುವುದು ' ಸ್ಪೂರ್ತಿದಾಯಕ ಪ್ರವಚನದ ನುಡಿ ಮುತ್ತುಗಳು' ! 

ಇದಕ್ಕಿಂತ ವಿರೋಧಾಭಾಸ ಇನ್ನೇನಿದೆ ?  ಈ ಸೂಲಿಬೆಲೆಗೂ ನ್ಯಾಷನಲಿಸ್ಟ್ ಥಿಂಕಿಂಗ್ ಗೂ ಏನು ಸಂಬಂಧ ? ಸಂಘ ಪರಿವಾರದ ಮನುಷ್ಯ ವಿರೋಧಿ ನೀತಿಗಳನ್ನು ಹೇಳುವುದು ಅಬುಧಾಬಿ ಕರ್ನಾಟಕ ಸಂಘಕ್ಕೆ ಯಾವತ್ತಿನಿಂದ  ' ಸ್ಪೂರ್ತಿದಾಯಕ ಪ್ರವಚನದ ನುಡಿ ಮುತ್ತುಗಳು' ಆಗಿದ್ದು ? ದಲಿತರನ್ನು, ಹಿಂದುಳಿದ ವರ್ಗಗಳನ್ನು ಮನುಷ್ಯರೆಂದೇ  ಪರಿಗಣಿಸದ , ಅವರು ಬಂದಲ್ಲಿ ಸ್ವಚ್ಛ ಅಭಿಯಾನ ಕೈಗೊಳ್ಳುವ ಈ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಬೇಕು. ಅಂತಹ ವ್ಯಕ್ತಿಯನ್ನು  ' ನ್ಯಾಷನಲಿಸ್ಟ್ ಥಿಂಕರ್ ' ಎಂದು ಹೇಳುವ ಬೌದ್ಧಿಕ ದಿವಾಳಿತನ ಅಬುಧಾಬಿ ಕರ್ನಾಟಕ ಸಂಘಕ್ಕೆ ಹೇಗೆ ಬಂತು ? ಇದರ ಹಿಂದಿರುವವರು ಯಾರು ? 

ಸೂಲಿಬೆಲೆಗೂ ದೇಶಪ್ರೇಮಕ್ಕೂ ಸಂಬಂಧವಿಲ್ಲ. ಈತನಿಗೂ ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ. ಈತನಿಗೆ ಬಿಡಿಸಲಾಗದ ನಂಟಿರುವುದು ಸಂಘ ಪರಿವಾರದ ಜೊತೆ ಮಾತ್ರ. ಹಾಗಾದರೆ ಅಬುಧಾಬಿ ಕರ್ನಾಟಕ ಸಂಘಕ್ಕೆ ಈಗ ಸಂಘ ಪರಿವಾರವನ್ನು ಮೆಚ್ಚಿಸುವ ತುರ್ತು ಬಂದಿದೆಯೇ ? 

ಕರ್ನಾಟಕದಿಂದ ಯಾವುದೇ ಪಕ್ಷದ ಜನಪ್ರತಿನಿಧಿಯನ್ನು , ಯಾವುದೇ ಧರ್ಮದ ಧಾರ್ಮಿಕ ನಾಯಕರನ್ನು ( ಆರೆಸ್ಸೆಸ್ ನಾಯಕರಲ್ಲ ), ಚಿಂತಕರನ್ನು , ಸಾಂಸ್ಕೃತಿಕ ಸಾಧಕರನ್ನು, ಸಾಹಿತಿಗಳನ್ನು, ಸಮಾಜ ಸೇವಕರನ್ನು ಆಹ್ವಾನಿಸುವ ಅವಕಾಶ ಅಬುಧಾಬಿ ಕರ್ನಾಟಕ ಸಂಘಕ್ಕೆ ಇತ್ತು. ಆದರೆ ಎಲ್ಲ ಬಿಟ್ಟು ಈ ಮಾನವೀಯತೆ ವಿರೋಧಿ ಸೂಲಿಬೆಲೆಯನ್ನು ಅಲ್ಲಿಗೆ ಆಹ್ವಾನಿಸಿ ಹುಳಿ ಹಿಂಡುವ ಕೆಲಸಕ್ಕೆ ಯಾಕೆ ಅಬುಧಾಬಿ ಕರ್ನಾಟಕ ಸಂಘ ಕೈ ಹಾಕುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. 

ಗಲ್ಫ್ ದೇಶಗಳು ಎಲ್ಲ ಭಾರತೀಯರ ಪಾಲಿನ ಸೌಹಾರ್ದದ ಬೀಡಾಗಿವೆ. ಅಲ್ಲಿ ಎಲ್ಲ ಧರ್ಮಗಳ, ಜಾತಿಗಳ ಜನರು ಒಂದಾಗಿ ದುಡಿದು , ಒಟ್ಟಿಗೆ ಬದುಕುತ್ತಿದ್ದಾರೆ. ದಿನವಿಡೀ ಅಲ್ಲಿನ ಬಿರು ಬಿಸಿಲಿನಲ್ಲಿ ದುಡಿದು ಸಂಜೆ ಒಂದೇ ರೂಮಿನಲ್ಲಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಒಟ್ಟಿಗೆ ಅಡುಗೆ ಮಾಡಿ, ಒಟ್ಟಿಗೆ ಕುಳಿತು ಊಟ ಮಾಡಿ, ಸೋದರರಂತೆ ಬದುಕುತ್ತಿದ್ದಾರೆ. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಜಾತಿ, ಧರ್ಮ ನೋಡದೆ ಸ್ಪಂದಿಸುತ್ತಿದ್ದಾರೆ. ಇಲ್ಲಿ ಸಂಘಪರಿವಾರ  ಬಿಟ್ಟಿರುವ ದ್ವೇಷ , ಅನುಮಾನಗಳ ಸೋಂಕು ಅಲ್ಲಿಗೆ ಇನ್ನೂ ತಲುಪಿಲ್ಲ. ಅಲ್ಲಿರುವ ಅನಿವಾಸಿ ಕನ್ನಡಿಗರಿಗೆ ದುಡಿಯುವುವುದು , ಊರಲ್ಲಿರುವ ಮನೆಯವರನ್ನು ಸುಖವಾಗಿಡುವುದು, ಮತ್ತು ತಾವು ಅಲ್ಲಿ ನೆಮ್ಮದಿಯಿಂದ ಇರುವುದು - ಇವೇ ಮುಖ್ಯವಾಗಿವೆ. 

ಈಗ ಅಬುಧಾಬಿ ಕರ್ನಾಟಕ ಸಂಘ ದುಡ್ಡು ಖರ್ಚು ಮಾಡಿ, ಆತಿಥ್ಯ ನೀಡಿ ಸಂಘ ಪರಿವಾರದ ದ್ವೇಷವನ್ನು ಯುಎಇ ಗೆ ಆಮದು ಮಾಡಿಕೊಳ್ಳಲು ಹೊರಟಿದೆ. ಇದರ ಹಿಂದೆ ಯಾರ ರಾಜಕೀಯವಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. 

ಈ ದ್ವೇಷದ ಆಮದನ್ನು ನಾವು ತಡೆಯಬೇಕಾಗಿದೆ. ಕನ್ನಡವನ್ನು , ಕರ್ನಾಟಕವನ್ನು, ಭಾರತವನ್ನು, ಸೌಹಾರ್ದವನ್ನು ಪ್ರೀತಿಸುವ ಪ್ರತಿಯೊಬ್ಬರೂ ಇದನ್ನು ವಿರೋಧಿಸಬೇಕಾಗಿದೆ.  ನಿಮ್ಮ ವಿರೋಧವನ್ನು ಸಂಘಟಕರಿಗೆ ತಲುಪಿಸಬೇಕಾಗಿದೆ. ಸಂಘಟಕರನ್ನು ಸಂಪರ್ಕಿಸಿ  ಸೂಲಿಬೆಲೆಗೆ ನೀಡಿರುವ ಆಮಂತ್ರಣವನ್ನು ಹಿಂಪಡೆಯುವಂತೆ ಆಗ್ರಹಿಸಬೇಕಾಗಿದೆ. ಈ ದ್ವೇಷ ಭಾಷಣಕಾರನಿಗೆ ಸಮಸ್ತ ಪ್ರಜ್ಞಾವಂತ  ಕನ್ನಡಿಗರ ವಿರೋಧ ಸ್ಪಷ್ಟವಾಗಿ ದಾಖಲಾಗಬೇಕಿದೆ. 

ಇದರೊಂದಿಗೆ ಕಾರ್ಯಕ್ರಮದ ಪೋಸ್ಟರ್ ಇದೆ. ಸಂಘಟಕರ ಫೋನ್ ನಂಬರ್ ಗಳಿವೆ. ದಯವಿಟ್ಟು ಸಂಪರ್ಕಿಸಿ , ಈ ಆಮಂತ್ರಣವನ್ನು ಕೈಬಿಡುವಂತೆ ಮನವಿ ಮಾಡಿ, ಆಗ್ರಹಿಸಿ. 

Writer - ಶಶಿಧರ್ ಮಂಡ್ಯ

contributor

Editor - ಶಶಿಧರ್ ಮಂಡ್ಯ

contributor

Similar News