ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿ ಜಯಿಸಿದ ಪಾಕ್

Update: 2016-10-25 17:58 GMT

ಅಬುಧಾಬಿ, ಅ.25: ಟೆಸ್ಟ್ ವೃತ್ತಿಬದುಕಿನಲ್ಲಿ ಎರಡನೆ ಬಾರಿ 10 ವಿಕೆಟ್‌ಗಳ ಗೊಂಚಲು ಪಡೆದ ಲೆಗ್ ಸ್ಪಿನ್ನರ್ ಯಾಸಿರ್ ಷಾ ಅವರ ಅಮೋಘ ಪ್ರದರ್ಶನದ ನೆರವಿನಿಂದ ಪಾಕಿಸ್ತಾನ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೆ ಟೆಸ್ಟ್ ಪಂದ್ಯವನ್ನು 133 ರನ್‌ಗಳ ಅಂತರದಿಂದ ಗೆದ್ದುಕೊಂಡಿತು.

ಕೊನೆಯ ದಿನದಾಟವಾದ ಮಂಗಳವಾರ ಭರ್ಜರಿ ಜಯ ಸಾಧಿಸಿರುವ ಪಾಕಿಸ್ತಾನ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.

ವೆಸ್ಟ್‌ಇಂಡೀಸ್ 2ನೆ ಟೆಸ್ಟ್ ಪಂದ್ಯ ಗೆಲುವಿಗೆ 456 ರನ್ ಕಠಿಣ ಗುರಿ ಪಡೆದಿತ್ತು. ಆದರೆ, ಐದನೆ ದಿನದಾಟವಾದ ಮಂಗಳವಾರ ಲಂಚ್ ವಿರಾಮಕ್ಕೆ ಮೊದಲೇ 322 ರನ್‌ಗೆ ಆಲೌಟಾಯಿತು.

ಯಾಸಿರ್ ಷಾ ಎರಡನೆ ಇನಿಂಗ್ಸ್‌ನಲ್ಲಿ 124 ರನ್‌ಗೆ ಆರು ವಿಕೆಟ್‌ಗಳನ್ನು ಉರುಳಿಸಿ ಪಾಕ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಷಾ ಮೊದಲ ಇನಿಂಗ್ಸ್‌ನಲ್ಲಿ 86 ರನ್‌ಗೆ 4 ವಿಕೆಟ್‌ಗಳನ್ನು ಕಬಳಿಸಿ ವಿಂಡೀಸ್‌ನ್ನು 224 ರನ್‌ಗೆ ಆಲೌಟ್ ಮಾಡಲು ನೆರವಾಗಿದ್ದರು.

4 ವಿಕೆಟ್‌ಗಳ ನಷ್ಟಕ್ಕೆ 171 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವೆಸ್ಟ್‌ಇಂಡೀಸ್ ಲೆಗ್-ಸ್ಪಿನ್ನರ್ ಯಾಸಿರ್ ಷಾ ಅವರ ಹರಿತವಾದ ಬೌಲಿಂಗ್‌ಗೆ ತತ್ತರಿಸಿತು. ಷಾ ಭೋಜನ ವಿರಾಮಕ್ಕೆ ಮೊದಲೇ 3 ವಿಕೆಟ್‌ಗಳನ್ನು ಕಬಳಿಸಿದರು.

41 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಜೆರ್ಮೈನ್ ಬ್ಲಾಕ್‌ವುಡ್ 127 ಎಸೆತಗಳನ್ನು ಎದುರಿಸಿ 11 ಬೌಂಡರಿಗಳನ್ನು ಬಾರಿಸಿದರು. 95 ರನ್ ಗಳಿಸಿ ಏಕಾಂಗಿ ಹೋರಾಟ ನೀಡಿದರು.

8ನೆ ವಿಕೆಟ್‌ಗೆ 45 ರನ್ ಜೊತೆಯಾಟ ನಡೆಸಿದ ಹೋಪ್(41) ಹಾಗೂ ದೇವೇಂದ್ರ ಬಿಶೂ(26) ಪಾಕ್ ಗೆಲುವನ್ನು ವಿಳಂಬಗೊಳಿಸಿದರು.

ವೆಸ್ಟ್‌ಇಂಡೀಸ್ ದುಬೈನಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಡೆರೆನ್ ಬ್ರಾವೊ ಅವರ ಹೋರಾಟಕಾರಿ ಶತಕದ ಹೊರತಾಗಿಯೂ 56 ರನ್‌ಗಳಿಂದ ಸೋತಿತ್ತು. ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ರವಿವಾರ ಶಾರ್ಜಾದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ ಪ್ರಥಮ ಇನಿಂಗ್ಸ್: 452

ಪಾಕಿಸ್ತಾನ ಎರಡನೆ ಇನಿಂಗ್ಸ್: 227/2 ಡಿಕ್ಲೇರ್

ವೆಸ್ಟ್‌ಇಂಡೀಸ್ ಪ್ರಥಮ ಇನಿಂಗ್ಸ್: 224

ವೆಸ್ಟ್‌ಇಂಡೀಸ್ ದ್ವಿತೀಯ ಇನಿಂಗ್ಸ್: 322

(ಬ್ಲಾಕ್‌ವುಡ್ 95, ಬ್ರಾತ್‌ವೇಟ್ 67, ಹೋಪ್ 41, ಬಿಶೂ 26, ಯಾಸಿರ್ ಷಾ 6-124, ಬಾಬರ್ 2-51)

ಪಂದ್ಯಶ್ರೇಷ್ಠ: ಯಾಸಿರ್ ಷಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News