×
Ad

ಜೆಎನ್‌ಯು ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ಶವವಾಗಿ ಪತ್ತೆ

Update: 2016-10-26 08:59 IST

ಹೊಸದಿಲ್ಲಿ,ಅ. 26: ಇಲ್ಲಿನ ಜವಾಹರಲಾಲ್ ನೆಹರೂ ವಿವಿ ಕ್ಯಾಂಪಸ್‌ನ ಹಾಸ್ಟೆಲ್ ಕೊಠಡಿಯಲ್ಲಿ ಪಿಎಚ್‌ಡಿ ವಿದ್ಯಾರ್ಥಿ ನಿಗೂಢವಾಗಿ ಸಾವಿಗೀಡಾಗಿರುವುದು ಮಂಗಳವಾರ ರಾತ್ರಿ ಬೆಳಕಿಗೆ ಬಂದಿದೆ. ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದೆ.

"ಕಳೆದ ಮೂರು ದಿನಗಳಿಂದ ವಿದ್ಯಾರ್ಥಿ, ಕೊಠಡಿಯ ಬೀಗ ಹಾಕಿಕೊಂಡಿದ್ದ. ಹಾಸ್ಟೆಲ್‌ನ ಇತರ ವಿದ್ಯಾರ್ಥಿಗಳು, ಕೊಠಡಿಯಿಂದ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ಗಮನಕ್ಕೆ ತಂದರು. ಈ ಬಗ್ಗೆ ಭದ್ರತಾ ಸಿಬ್ಬಂದಿ ಗಮನಕ್ಕೆ ತಂದರು. ಪೊಲೀಸರು ಬಳಿಕ ಕೊಠಡಿಯ ಬಾಗಿಲು ಒಡೆದು ನೋಡಿದಾಗ, ಕೊಳೆತ ಶವ ಪತ್ತೆಯಾಗಿದೆ" ಎಂದು ಪೊಲೀಸ್ ಮೂಲಗಳು ಹೇಳಿವೆ.

"ಮಣಿಪುರ ಮೂಲದ ಸಂಶೋಧನಾ ವಿದ್ಯಾರ್ಥಿ ಜೆ.ಆರ್.ಫಿಲೆಮೊನ್ ರಾಜಾ, ಜೆಎನ್‌ಯು ಬ್ರಹ್ಮಪುತ್ರ ಹಾಸ್ಟೆಲ್‌ನ 171ನೇ ಕೊಠಡಿಯಲ್ಲಿ ವಾಸವಿದ್ದ. ಪಶ್ಚಿಮ ಏಷ್ಯಾ ವಿಚಾರ ಬಗ್ಗೆ ಸಂಶೋಧನೆ ನಡೆಸುತ್ತಿದ್ದ. ಒಂದು ವರ್ಷದ ಹಿಂದೆ ವಿವಿ ಸೇರಿದ್ದ. ಪ್ರಾಥಮಿಕ ತನಿಖೆಯಿಂದ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಅದಾಗ್ಯೂ ದೇಹವನ್ನು ಅಟಾಪ್ಸಿಗಾಗಿ ಎಐಐಎಂಎಸ್‌ಗೆ ಕಳುಹಿಸಲಾಗಿದೆ. ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿರುವ ಅವರ ಕುಟಂಬಕ್ಕೆ ವಿಷಯ ತಿಳಿಸಲಾಗಿದೆ" ಎಂದು ಪೊಲೀಸರು ವಿವರಿಸಿದ್ದಾರೆ.

ದೇಹವನ್ನು ಗುರುತಿಸಲು ಸಾಧ್ಯವಾಗದಷ್ಟು ಅದು ಕೊಳೆತು ಹೋಗಿದೆ. ಯಾವುದೇ ಗಾಯದ ಗುರುತುಗಳು ದೇಹದ ಮೇಲಿಲ್ಲ. ಆದರೆ ಸಾವಿನ ಕಾರಣ ಅಟಾಪ್ಸಿ ಬಳಿಕವಷ್ಟೇ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News