ಪ್ರಪ್ರಥಮ ಅಮೆರಿಕನ್ ಸಾಹಿತಿಗೆ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ

Update: 2016-10-26 04:03 GMT

ಲಂಡನ್, ಅ.26: ಅಮೆರಿಕದ ಖ್ಯಾತ ಸಾಹಿತಿ ಪಾಲ್ ಬೇಟ್ಟಿ ಅವರು ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಮೊಟ್ಟಮೊದಲ ಅಮೆರಿಕನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಬೇಟ್ಟಿ ಅವರ "ದ ಸೆಲ್ ಔಟ್" ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ.
"ಈ ಕಾದಂಬರಿಯು ಆಘಾತಕಾರಿ ಹಾಗೂ ಅನಿರೀಕ್ಷಿತವಾಗಿ ಹಾಸ್ಯಮಯ" ಎಂದು ತೀರ್ಪುಗಾರರು ಬಣ್ಣಿಸಿದ್ದಾರೆ. ಹುಟ್ಟೂರು ಲಾಸ್ ಏಂಜಲೀಸ್‌ನ ಚಿತ್ರಣವನ್ನು ಕಾದಂಬರಿಗಾರ ಇದರಲ್ಲಿ ಕಟ್ಟಿಕೊಟ್ಟಿದ್ದು, ಜನಾಂಗೀಯ ಸಮಾನತೆಯ ವಿಡಂಬನೆಗೆ ಕಾದಂಬರಿಯ ರೂಪ ನೀಡಿದ್ದಾರೆ ಎಂದು ತೀರ್ಪುಗಾರರು ಹೇಳಿದ್ದಾರೆ.
ರಾಜಕುಮಾರ ಚಾರ್ಲ್ಸ್ ಪತ್ನಿ ಕ್ಯಾಮಿಲ್ಲಾ ಅವರಿಂದ ಪ್ರಶಸ್ತಿ ಸ್ವೀಕರಿಸಿದ 54 ವರ್ಷದ ಈ ಲೇಖಕ, ಇಷ್ಟೊಂದು ಸುಧೀರ್ಘ ಹಾದಿಯನ್ನು ಹೇಗೆ ಕ್ರಮಿಸಿದೆ ಎಂದು ವಿವರಿಸಲು ಪದಗಳೇ ಸಿಗುತ್ತಿಲ್ಲ ಎಂದು ನುಡಿದರು. "ಲಾಸ್‌ ಏಂಜಲೀಸ್‌ ನಗರದ ಬಗ್ಗೆ ಒಲವನ್ನು ವ್ಯಕ್ತಪಡಿಸುತ್ತಲೇ ನಗರ ಹಾಗೂ ಜನತೆಯ ವಿಡಂಬನಾತ್ಮಕ ವಿವರವನ್ನು ನೀಡಿದ್ದಾರೆ. ಜನಾಂಗೀಯ ಸಂಬಂಧ, ಪರಿಹಾರ ಅಥವಾ ಪರಿಕಲ್ಪನೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಲೇಖಕ ಬಿಂಬಿಸಿದ್ದಾರೆ" ಎಂದು ತೀರ್ಪುಗಾರರು ಹೇಳಿದರು.
ಲಂಡನ್‌ನ ಐತಿಹಾಸಿಕ ಗಿಲ್ಡ್‌ಹಾಲ್ ಕಟ್ಟಡದಲ್ಲಿ, ಸೇರಿದ್ದ ಖ್ಯಾತ ಸಾಹಿತಿಗಳ ಸಮಾವೇಶದಲ್ಲಿ ಈ ಪ್ರಶಸ್ತಿ ಘೋಷಿಸಲಾಯಿತು. ಈ ಪ್ರಶಸ್ತಿ ವಿಜೇತ ಸಾಹಿತಿ 52,500 ಪೌಂಡ್ ಬಹುಮಾನ ಪಡೆಯುವರು. ಆದರೆ ಈ ಪ್ರಶಸ್ತಿ ಪಡೆದ ಕಾದಂಬರಿ ಮಾರಾಟದಿಂದ ದೊಡ್ಡ ಮೊತ್ತದ ಲಾಭ ಬರುತ್ತದೆ. ಈ ಪ್ರಶಸ್ತಿ 1969ರಲ್ಲಿ ಆರಂಭವಾಗಿದೆ. ಕಾಮನ್‌ವೆಲ್ತ್ ದೇಶದ ಸಾಹಿತಿಗಳಿಗಷ್ಟೇ ಸೀಮಿತವಾಗಿದ್ದ ಈ ಪ್ರಶಸ್ತಿಯನ್ನು 2013ರಲ್ಲಿ ಇತರ ದೇಶಗಳ ಸಾಹಿತಿಗಳಿಗೂ ಮುಕ್ತಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News