×
Ad

ಭಾರತದಲ್ಲಿ ಮೆಸ್ಸಿಗೆ ವಿಪರೀತ ಬೇಡಿಕೆ!

Update: 2016-10-26 10:00 IST

ಹೊಸದಿಲ್ಲಿ, ಅ.26: ಪ್ರತಿಯೊಬ್ಬರೂ ಮೆಸ್ಸಿ ಪಟಾಕಿ ಕೇಳುತ್ತಾರೆ. ಅಷ್ಟಕ್ಕೂ ಈ ಮೆಸ್ಸಿ ಯಾರು? ಎಂದು ಮುಗ್ದವಾಗಿ ಕೇಳುತ್ತಾರೆ ಸರ್ದಾರ್ ಬಜಾರ್‌ನ ಪಟಾಕಿ ಅಂಗಡಿ ವ್ಯಾಪಾರಿ ಮಾಂಗ್ಟು.

ಹೌದು, ಈಬಾರಿಯ ದೀಪಾವಳಿಗೆ ಪಟಾಕಿ ಮಾರುಕಟ್ಟೆಯಲ್ಲಿ ಅರ್ಜೆಂಟೀನದ ಫುಟ್ಬಾಲ್ ತಂಡದ ಸೂಪರ್ ಸ್ಟಾರ್ ಮೆಸ್ಸಿಯದ್ದೇ ಕಾರುಬಾರು. ಈ ತನಕ ಪಟಾಕಿ ಪೊಟ್ಟಣದ ಕವರ್‌ನಲ್ಲಿ ಬಾಲಿವುಡ್ ನಟ-ನಟಿಯರಾದ ಕರೀನಾ ಕಪೂರ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರ ಚಿತ್ರವಿರುತ್ತಿತ್ತು. ಆದರೆ, ಈ ಬಾರಿ ಮೆಸ್ಸಿ ಚಿತ್ರವನ್ನು ಪಟಾಕಿ ಪೊಟ್ಟಣದ ಕವರ್‌ನಲ್ಲಿ ಅಚ್ಚು ಹಾಕಲಾಗಿದೆ.

ತಮಿಳುನಾಡಿನ ಶಿವಕಾಶಿಯಲ್ಲಿರುವ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸಾಮಾನ್ಯವಾಗಿ ಪಟಾಕಿ ಪೊಟ್ಟಣದ ಕವರ್‌ನಲ್ಲಿ ದಕ್ಷಿಣ ಭಾರತ ಹಾಗೂ ಬಾಲಿವುಡ್‌ನ ಚಿರ ಪರಿಚಿತ ನಟ-ನಟಿಯರ ಚಿತ್ರವನ್ನು ಮುದ್ರಿಸಲಾಗುತ್ತಿತ್ತು. ಈ ಬಾರಿ ಮೆಸ್ಸಿ ಚಿತ್ರವನ್ನು ಹಾಕಲಾಗಿದೆ. ನನಗಂತೂ ಮೆಸ್ಸಿ ಯಾರೆಂದು ಗೊತ್ತಿಲ್ಲ. ನಾವು ನಾಳೆಯಿಂದ ಇಂಗ್ಲೀಷ್ ಚಾನಲ್‌ನ್ನು ನೋಡಬೇಕಾಗುತ್ತದೆ ಎಂದು ಪಟಾಕಿ ವ್ಯಾಪಾರಿಯೊಬ್ಬರು ಹೇಳುತ್ತಾರೆ.

ಫುಟ್ಬಾಲ್ ಸ್ಟಾರ್ ಮೆಸ್ಸಿ ಪಟಾಕಿ ವ್ಯಾಪಾರಿಗೆ ಹೆಚ್ಚು ಪರಿಚಯವಿಲ್ಲ. ಆದರೆ, ಪಟಾಕಿ ಖರೀದಿದಾರರಿಗೆ ಮೆಸ್ಸಿ ಯಾರೆಂದು ಚೆನ್ನಾಗಿ ಗೊತ್ತಿದೆ.

  ಬಾಲಿವುಡ್ ನಟಿಯರಾದ ಕರೀನಾ, ಪ್ರಿಯಾಂಕಾ ಬದಲಿಗೆ ಮೆಸ್ಸಿ ಚಿತ್ರವನ್ನು ಪಟಾಕಿ ಪೊಟ್ಟಣದ ಕವರ್‌ನಲ್ಲಿ ಪ್ರಿಂಟ್ ಮಾಡಿರುವುದು ಸ್ವಾಗತಾರ್ಹ ಹೆಜ್ಜೆ. ನನ್ನ ಮಗ ಮೆಸ್ಸಿಯ ದೊಡ್ಡ ಅಭಿಮಾನಿ. ಮಗನಿಗೆ ಖುಷಿ ಪಡಿಸಲು ಮೆಸ್ಸಿ ಚಿತ್ರವಿರುವ ಪಟಾಕಿಯನ್ನು ಹೆಚ್ಚು ಖರೀದಿ ಮಾಡಿರುವೆ ಎಂದು ಕರೊಲ್ ಬಾಘ್ ನಿವಾಸಿ ಮಹೇಶ್ ಶರ್ಮ ಹೇಳುತ್ತಾರೆ.

ಮೆಸ್ಸಿ ಚಿತ್ರವಿರುವ ಪಟಾಕಿಯನ್ನು ಗ್ರಾಹಕರು ಕೇಳುತ್ತಿದ್ದರು. ನನಗೆ ಅವರು ಯಾರೆಂದು ಗೊತ್ತಿಲ್ಲ. ನೀವೇ ಹೋಗಿ ಹುಡುಕಿ ತೆಗೆದುಕೊಳ್ಳಿ ಎಂದು ಗ್ರಾಹಕರಿಗೆ ಹೇಳಿದ್ದೆ. ಕೆಲವು ಮಕ್ಕಳಂತೂ ನಿಮಗೆ ಮೆಸ್ಸಿ ಯಾರೆಂದು ಗೊತ್ತಿಲ್ಲವೇ ಎಂದು ನನ್ನನ್ನೇ ಕೇಳಲಾರಂಭಿಸಿವೆ ಎಂದು ಇನ್ನೋರ್ವ ಪಟಾಕಿ ವ್ಯಾಪಾರಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News