ಸೌದಿ ಪ್ರಜೆಗಳಲ್ಲಿ ಆಕ್ರೋಶ ತಂದ ಸಚಿವರು ಹೇಳಿದ ಕಟು ಸತ್ಯ

Update: 2016-10-26 06:36 GMT

ರಾಜಪ್ರಭುತ್ವದಲ್ಲಿರುವ ನಾಗರಿಕ ಅಧಿಕಾರಿಗಳು ದಿನಕ್ಕೆ ಒಂದು ಗಂಟೆಯಷ್ಟೇ ಕೆಲಸ ಮಾಡುತ್ತಾರೆ. ಇದೇ ಕಾರಣದಿಂದ ದೇಶ ದಿವಾಳಿಯಾಗುತ್ತಿದೆ ಎನ್ನುವ ಸಚಿವರ ಹೇಳಿಕೆಗಳ ಬಗ್ಗೆ ಸೌದಿ ಪ್ರಜೆಳು ಸಿಟ್ಟಿಗೆದ್ದಿದ್ದಾರೆ.

 ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವಂತೆ '8 ಒಕ್ಲಾಕ್ ವಿತ್ ದಾವೂದ್‌' ಕಾರ್ಯಕ್ರಮದಲ್ಲಿ ಸಚಿವರು ಚರ್ಚೆಯ ಸಂದರ್ಭದಲ್ಲಿ ಈ ಸತ್ಯವನ್ನು ಹೊರಗೆಡವಿದ್ದರು. ನಾಗರಿಕ ಸೇವೆಗಳ ಸಚಿವ ಖಾಲೆದ್ ಅಲ್ ಅರಜ್ ಅವರು ಸರಕಾರಿ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ದಿನಕ್ಕೆ ಒಂದು ಗಂಟೆಯಷ್ಟೇ ಕಳೆಯುತ್ತಾರೆ ಎಂದಿದ್ದಾರೆ. ಅದೇ ಟಿವಿ ಚರ್ಚೆ ಕಾರ್ಯಕ್ರಮದಲ್ಲಿ ಆರ್ಥಿಕ ಮತ್ತು ಯೋಜನಾ ಉಪಸಚಿವ ಮುಹಮ್ಮದ್ ಅಲ್ ತುವೈಜ್ರಿ ಅವರು ಬೇಗನೇ ಸುಧಾರಣಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಸರಕಾರಿ ಹಣಕಾಸು ದೊಡ್ಡ ಒತ್ತಡವನ್ನು ಎದುರಿಸಬೇಕಾಗಬಹುದು ಮತ್ತು ಮೂರು ವರ್ಷಗಳಲ್ಲಿ ದಿವಾಳಿಯಾಗುವುದು ಖಚಿತ ಎಂದಿದ್ದಾರೆ.

 "ತೈಲ ಬೆಲೆಗಳು ಹೀಗೇ ಕುಸಿಯುತ್ತಾ ಹೋದರೆ ಮತ್ತು ಸೌದಿ ಸರಕಾರವು ಆರ್ಥಿಕ ಮತ್ತು ಸುಧಾರಣಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ರಾಜಪ್ರಭುತ್ವ ದಿವಾಳಿ ಎದುರಿಸುವುದು ಖಚಿತ" ಎಂದು ಅವರು ಹೇಳಿದ್ದಾರೆ. ಆದರೆ ನಂತರ ತುವೈಜ್ರಿ ಅವರು ದಿವಾಳಿ ಎನ್ನುವ ಪದವನ್ನು ತಪ್ಪಾಗಿ ಬಳಸಿರುವುದಾಗಿ ಸಮಜಾಯಿಷಿ ನೀಡಿದ್ದಾರೆ. "ಅಂತಹ ಪದವನ್ನು ಬಳಸುವ ಮೂಲಕ ನಾನು ಭಾವನೆಯನ್ನು ಅತಿಯಾಗಿ ಪ್ರಕಟಿಸಿದ್ದೇನೆ" ಎಂದು ಅವರು ಹೇಳಿದ್ದಾರೆ. ಈ ಚರ್ಚಾ ಕಾರ್ಯಕ್ರಮದ ನಂತರ ಟ್ವಿಟರ್‌ನಲ್ಲಿ 'ಹವರ್ ವಿತ್ ಅಲರಾಜ್‌' ಮೊದಲಾದ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಿದ್ದವು. ಸೌದಿಯ ಒಬ್ಬರು ಇಂತಹ ಹೇಳಿಕೆ ಉದ್ಯೋಗಿಗಳ ವಿರುದ್ಧ ಎಸಗಿದ ಅಪರಾಧ ಎಂದಿದ್ದಾರೆ. "ಒಂದು ಗಂಟೆ ದಿನವೂ ಕೆಲಸ ಮಾಡುತ್ತಾರೆ ಎನ್ನುವುದು ವಸ್ತುಸ್ಥಿತಿಯನ್ನು ರಂಜನೀಯವಾಗಿ ಹೇಳಿರುವುದು ಮತ್ತು ಉದ್ಯೋಗಿಗಳಿಗೆ ಮಾಡಿದ ಅವಹೇಳನ" ಎಂದು ಹಿರಿಯ ಕಾನೂನು ಸಲಹೆಗಾರರೊಬ್ಬರು ಹೇಳಿದ್ದಾರೆ.

ಆದರೆ ಅವರೂ ಸರಕಾರಿ ಇಲಾಖೆಗಳಲ್ಲಿ ಉತ್ಪಾದನೆ ಅತೀ ಕಡಿಮೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಸೌದಿ ಮಾತೆಯೊಬ್ಬರು ತಮ್ಮ ಸದಾ ಕೆಲಸದಲ್ಲೇ ನಿರತರಾಗಿರುವ ನಾಲ್ಕು ಮಕ್ಕಳನ್ನು ಸಮರ್ಥಿಸಿಕೊಂಡಿದ್ದಾರೆ. "ಎಲ್ಲಾ ಸಾರ್ವಜನಿಕ ಕ್ಷೇತ್ರದ ಸಿಬ್ಬಂದಿ ಸೋಮಾರಿಗಳು ಎನ್ನುವುದು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡುವುದಾಗಿದೆ" ಎಂದು ಹೇಳಿದ್ದಾರೆ.

ಕೃಪೆ: khaleejtimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News