ಚಾಂಪಿಯನ್ಸ್ ಟ್ರೋಫಿ ಹಾಕಿ: ಮಲೇಷ್ಯಾವನ್ನು ಮಣಿಸಿದ ಭಾರತ
ಕ್ವಾಂಟ್ವಾನ್, ಅ.26: ನಾಲ್ಕನೆ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿದ್ದ ಮಲೇಷ್ಯಾ ತಂಡವನ್ನು 2-1 ಗೋಲುಗಳ ಅಂತರದಿಂದ ರೋಚಕವಾಗಿ ಮಣಿಸಿದ ಭಾರತ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ.
ಇಲ್ಲಿ ಬುಧವಾರ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತದ ಪರ ರೂಪಿಂದರ್ ಪಾಲ್ ಸಿಂಗ್ ಪೆನಾಲ್ಟಿ ಕಾರ್ನರ್‌ನಲ್ಲಿ ಅವಳಿ ಗೋಲು(12ನೆ, 58ನೆ ನಿಮಿಷ) ಬಾರಿಸಿದರು. ಭರ್ಜರಿ ಫಾರ್ಮ್‌ನಲ್ಲಿರುವ ರೂಪಿಂದರ್ ಟೂರ್ನಿಯಲ್ಲಿ ಒಟ್ಟು 10 ಗೋಲುಗಳನ್ನು ಬಾರಿಸಿದ್ದಾರೆ. ಮಲೇಷ್ಯಾದ ಪರ ರಝೀ ರಹೀಮ್(18ನೆ ನಿ.) ಏಕೈಕ ಗೋಲು ಬಾರಿಸಿದ್ದಾರೆ.
12ನೆ ನಿಮಿಷದಲ್ಲಿ ರೂಪಿಂದರ್ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು. 18ನೆ ನಿಮಿಷದಲ್ಲಿ ಗೋಲು ಬಾರಿಸಿದ ರಹೀಮ್ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು. 58ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ರೂಪಿಂದರ್ ಭಾರತಕ್ಕೆ ರೋಚಕ ಗೆಲುವು ತಂದರು.
ಭಾರತ ಐದು ಪಂದ್ಯಗಳಲ್ಲಿ 13 ಅಂಕ ಗಳಿಸಿದೆ. ಮಲೇಷ್ಯಾ ಇನ್ನೊಂದು ಪಂದ್ಯ ಆಡಲು ಬಾಕಿಯಿದೆ.