ಪಟಾಕಿ ದುರಂತ
Update: 2016-10-26 23:58 IST
ವಾರಾಣಸಿ, ಅ.26: ಇಲ್ಲಿ ನಡೆದ ಸ್ಪೋಟದಲ್ಲಿ ಐವರು ಮೃತಪಟ್ಟು ಆರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎಂದು ಸೀನಿಯರ್ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ನಿತಿನ್ ತಿವಾರಿ ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಆಮ್ನಾ ಮತ್ತು ಸರ್ಫ್ರಾಝ್ ಎಂಬ ಇಬ್ಬರನ್ನು ಗುರುತಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪಿತರ್‌ಕುಂಡ್ ಎಂಬಲ್ಲಿನ ಎರಡು ಮಹಡಿಯ ಕಟ್ಟಡದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮನೆಯ ಮೇಲಂತಸ್ತಿನ ಛಾವಣಿ ಹಾರಿ ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದ ಮನೆ ಮುಹಮ್ಮದ್ ಹನೀಫ್ ಎಂಬ ವ್ಯಕ್ತಿಗೆ ಸೇರಿದ್ದು ಭಗ್ನಾವಶೇಷಗಳ ನಡುವೆ ಇನ್ನೂ ಹಲವರು ಸಿಲುಕಿರುವ ಶಂಕೆಯಿದ್ದು ಅವರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದೆ.