ನೀರಿನ ಬಿಕ್ಕಟ್ಟು ಪರಿಹಾರಕ್ಕೆ ಜಲ ಸಾಕ್ಷರತೆ ಅಗತ್ಯ: ನಾಗೇಶ್ ಹೆಗಡೆ

Update: 2016-10-27 15:33 GMT

ಮಣಿಪಾಲ, ಅ.27: ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಜನರನ್ನು ಜಲ ಸಾಕ್ಷರರನ್ನಾಗಿ ಮಾಡಬೇಕು. ಅದೇ ರೀತಿ ನೀರಿನ ಮಹತ್ವದ ಬಗ್ಗೆ ಅರಿವು, ನೀರಿನ ಮಿತ ಬಳಕೆ ಹಾಗೂ ಪರಸ್ಪರ ಸಹಕಾರ ನೀರಿನ ಹಂಚಿಕೆಯಿಂದ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹಿರಿಯ ಪತ್ರಕರ್ತ, ಅಂಕಣಕಾರ ಹಾಗೂ ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಅಭಿಪ್ರಾಯ ಪಟ್ಟಿದ್ದಾರೆ.

ಮಣಿಪಾಲ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದ ವತಿಯಿಂದ ಗುರುವಾರ ಮಣಿಪಾಲದ ಹಳೆ ಟ್ಯಾಪ್ಮಿ ಕಟ್ಟಡದ ಹಾಲ್‌ನಲ್ಲಿ ‘ನೀರಿನ ಬಿಕ್ಕಟ್ಟು, ಕಾವೇರಿ, ಮಹದಾಯಿ, ಇತ್ಯಾದಿ: ಪರಿಹಾರ ಹೇಗೆ’ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಕಾವೇರಿ ನೀರಿನ ಪೂರೈಕೆಗೆ ತಿಂಗಳಿಗೆ 35ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಲಾಗುತ್ತಿದೆ. ಜಗತ್ತಿನ ನಾಲ್ಕೈದು ರಾಷ್ಟ್ರಗಳ ಶೇ.65ರಷ್ಟು ಜನರಿಗೆ ಹಿಮಾಲಯ ನೀರು ಉಣಿಸುತ್ತಿದೆ. ಹಿಮಾಲಯ ಕರಗಿದರೆ ನೀರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ನಾವು ಅನ್ಯಗ್ರಹ, ನಕ್ಷತ್ರಗಳ ಕಡೆ ಪ್ರಯಾಣ ಬೆಳೆಸಿದ್ದೇವೆ. ಆದರೆ ಭೂಮಿಯನ್ನು ಮರೆತಿದ್ದೇವೆ. ಆದುದರಿಂದ ಆ ಬಗ್ಗೆ ಪುನರ್‌ಚಿಂತನೆ ಆಗಬೇಕು. ಭೂಮಿಯ ಬಗ್ಗೆ ಮರು ಶಿಕ್ಷಣ ನೀಡಬೇಕು ಎಂದು ಅವರು ತಿಳಿಸಿದರು.

ಒಂದು ಕಡೆ ವಿಶ್ವದ ಜನಸಂಖ್ಯೆ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿಯೂ ನೀರಿನ ಕೊರತೆ ಎದುರಾಗುತ್ತಿದ್ದು, ಮುಂದಿನ 20ವರ್ಷಗಳಲ್ಲಿ ಅಂದರೆ 2040ರಲ್ಲಿ ನೀರಿನ ಕೊರತೆ ಮತ್ತಷ್ಟು ಉಲ್ಬಣವಾಗಲಿದೆ ಎಂದು ಅವರು ಆತಂಕ ವ್ಯಕ್ತ ಪಡಿಸಿದರು.

ಅಂತರ್ ಜಿಲ್ಲೆ, ರಾಜ್ಯ ಅಥವಾ ದೇಶಗಳ ನಡುವಿನ ನೀರಿನ ಬಿಕ್ಕಟ್ಟುಗಳನ್ನು ಪರಸ್ಪರ ಸಹಕಾರದಿಂದ ಬಗೆಹರಿಸಿಕೊಳ್ಳಬೇಕಾಗಿರುವುದು ಇಂದಿನ ಅಗತ್ಯ ವಾಗಿದೆ. ಸಂಘರ್ಷಗಳಿಂದ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಜೋರ್ಡಾನ್, ಇಸ್ರೇಲ್, ಪ್ಯಾಲೇಸ್ತೀನ್ ನಡುವೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ನದಿ ನೀರನ್ನು ಮಾತ್ರ ಅವರೆಲ್ಲ ಪರಸ್ಪರ ಸಹಕಾರದಿಂದ ಹಂಚಿಕೊಳ್ಳುತ್ತಿದ್ದಾರೆ ಎಂದರು.

ಈ ಜಗತ್ತಿನಲ್ಲಿ ನೀರಿನ ಬಿಕ್ಕಟ್ಟು ಸೃಷ್ಠಿಯಾಗಲು ವಿವೇಕ ರಹಿತ ನೀರಿನ ಬಳಕೆ, ಅಸಮರ್ಪಕ ನಿರ್ವಹಣೆ ಹಾಗೂ ನೀರಿನ ಮಹತ್ವ ಅರಿಯದೆ ಇರುವುದೇ ಮುಖ್ಯ ಕಾರಣವಾಗಿದೆ. ಮೊದಲು ನಾವು ನೀರಿನ ಮಹತ್ವವನ್ನು ಅರಿತುಕೊಳ್ಳಬೇಕಾಗಿದೆ. ಪ್ರಾಥಮಿಕ ಶಿಕ್ಷಣದ ಪಠ್ಯದಲ್ಲಿ ನೀರಿನ ಮಹತ್ವ ತಿಳಿಸುವ ಪಾಠವೇ ಇಲ್ಲ. ಆದುದರಿಂದ ಮಕ್ಕಳಲ್ಲಿ ನೀರಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪಠ್ಯಗಳಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಬ್ಬು, ಭತ್ತ ಹಾಗೂ ಇತರ ವಾಣಿಜ್ಯ ಬೆಳೆಗಳಿಗೆ ನೀರು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಆದುದರಿಂದ ಅಂತಹ ಬೆಳೆಗಳನ್ನು ಕೈಬಿಟ್ಟು ಕಡಿಮೆ ಪ್ರಮಾಣದ ನೀರು ಬಳಸಿ ಬೆಳೆಯುವ ಬೆಳೆಗಳ ಬಗ್ಗೆ ಚಿಂತನೆ ನಡೆಸಬೇಕಾಗಿರುವುದು ಇಂದಿನ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.

ಎಲ್ಲೆಡೆ ನೀರಿಗೆ ಸಮಸ್ಯೆ ಎದುರಾದರೂ ಪೆಪ್ಸಿಯಂತಹ ಕಂಪೆನಿಗಳು ಯಾವುದೇ ಸಮಸ್ಯೆ ಇಲ್ಲದೆ ಪಾನೀಯ ಉತ್ಪಾದನೆ ಮಾಡುತ್ತಿವೆ. ಪ್ರತಿ ದಿನ ಲಕ್ಷಾಂತರ ಲೀಟರ್ ನೀರನ್ನು ಬಳಸುವ ಇಂತಹ ಕಂಪೆನಿಗಳನ್ನು ಸ್ಥಗಿತಗೊಳಿ ಸುವ ಬಗ್ಗೆ ಯಾರೂ ಕೂಡ ಚಿಂತನೆ ಮಾಡುತ್ತಿಲ್ಲ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರದ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ, ಪ್ರೊ.ಉನ್ನಿಕೃಷ್ಣನ್, ವಿನ್ಯಾಸ್ ಹೆಗಡೆ ಉಪಸ್ಥಿತರಿದ್ದರು. 

ಎತ್ತಿನಹೊಳೆ ಯೋಜನೆ ಅವೈಜ್ಞಾನಿಕ

ಎತ್ತಿನಹೊಳೆ ಯೋಜನೆಯು ಸಂಪೂರ್ಣ ಅವೈಜ್ಞಾನಿಕವಾದುದು. ಯೋಜನಾ ಪ್ರದೇಶದಲ್ಲಿ ಮಳೆ ಬೀಳುವ ಪ್ರಮಾಣ ಹಾಗೂ ಅಲ್ಲಿಂದ ನೀರು ಎತ್ತುವ ಕುರಿತು ಈವರೆಗೆ ಯಾವುದೇ ಸರಿಯಾದ ಅಧ್ಯಯನ ನಡೆದಿಲ್ಲ ಎಂದು ನಾಗೇಶ್ ಹೆಗಡೆ ತಿಳಿಸಿದರು.

ಕೋಲಾರದಲ್ಲಿ ಕೊಳವೆ ಬಾವಿ ಕೊರೆದು, ಕೃಷಿಗೆ ಮಿತಿಮೀರಿದ ನೀರು ಬಳಸಿ, ನದಿಯಿಂದ ಮರಳುಗಾರಿಕೆ ನಡೆಸಿದ ಪರಿಣಾಮ ಇಂದು ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದುದರಿಂದ ಚಿಕ್ಕಬಳ್ಳಾಪುರ ಹಾಗೂ ಕೋಲಾರದ ಜನತೆಗೆ ನೀರಿನ ಸೂಕ್ಷ್ಮ ಬಳಕೆಯ ಕುರಿತು ಪಾಠ ಹೇಳಿಕೊಡ ಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News