ಮಂಗಳೂರು ವಿಮಾನ ನಿಲ್ದಾಣದಲ್ಲಿನ್ನು 24 ಗಂಟೆಯೂ ಹಾರಾಡಲಿದೆ ಬೃಹತ್ ರಾಷ್ಟ್ರಧ್ವಜ!

Update: 2016-10-28 06:05 GMT

ಮಂಗಳೂರು, ಅ.28: ಬಜ್ಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ದಿನದ 24 ಗಂಟೆಯೂ ಬೃಹತ್ ರಾಷ್ಟ್ರಧ್ವಜ ಹಾರಾಡಲಿದೆ. 100 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಬೃಹತ್ ರಾಷ್ಟ್ರ ಧ್ವಜಾರೋಹಣ ಇಂದು ಬೆಳಗ್ಗೆ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ನೂತನ ಧ್ವಜಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಸಂಸದ ನಳಿನ್‌ಕುಮಾರ್ ಕಟೀಲು, ವಿಮಾನ ನಿಲ್ದಾಣದ ನಿರ್ದೇಶಕ ಜಿ.ಟಿ.ರಾಧಾಕೃಷ್ಣ ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ಸಚಿವ ರೈ, ರಾಷ್ಟ್ರಧ್ವಜವು ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದವರ, ಪ್ರಾಣತ್ಯಾಗ ಮಾಡಿದವರ ಬಗ್ಗೆ ಹೆಮ್ಮೆ ಮೂಡಿಸುವ ಸಂಕೇತ. ದ.ಕ. ಜಿಲ್ಲೆಯಲ್ಲಿ ಅತೀ ದೊಡ್ಡ ರಾಷ್ಟ್ರಧ್ವಜ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನದ 24 ಗಂಟೆಯೂ ಹಾರಾಡುವುದು ಹೆಮ್ಮೆಯ ವಿಚಾರ ಎಂದರು.
ಜಿ.ಟಿ.ರಾಧಾಕೃಷ್ಣ ಮಾತನಾಡಿ, ಈ ಬೃಹತ್ ರಾಷ್ಟ್ರಧ್ವಜ ಹಾರಾಟಕ್ಕೆ 13 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಇದರ ಆರೋಹಣಕ್ಕೆ ಯಾಂತ್ರೀಕೃತ ಸೌಲಭ್ಯ ಕಲ್ಪಿಸಲಾಗಿದೆ. ಇದರ ಆರೋಹಣಕ್ಕೆ 3 ನಿಮಿಷಗಳ ಕಾಲಾವಕಾಶ ಅಗತ್ಯವಿದೆ ಎಂದರು.
ಪ್ರಯಾಣಿಕರ ಸಂತೃಪ್ತಿ ಸರ್ವೇಯ ಪ್ರಕಾರ ದೇಶದ 53 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 3ನೆ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನಕ್ಕೆ ಪಾತ್ರವಾಗಿದೆ ಎಂದರು.
2015-16ನೆ ಸಾಲಿನಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 16.73 ಲಕ್ಷ ಪ್ರಯಾಣಿಕರು ಬಳಸಿದ್ದಾರೆ. ಪ್ರಸಕ್ತ ವರ್ಷ ಈ ಸಂಖ್ಯೆ 20 ಲಕ್ಷ ದಾಟುವ ಸಾಧ್ಯತೆಯಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News