ಮಾಡೆಲಿಂಗ್ ಏಜೆನ್ಸಿ ತಿರಸ್ಕರಿಸಿದ ಈ ಮಗು ಈಗ ಸೂಪರ್ ಸ್ಟಾರ್ !
ಮಾಂಟ್ರಿಯಲ್(ಕೆನಡಾ),ಅ.28: ಕಳೆದ ಬೇಸಿಗೆಯಲ್ಲಿ ಜಾರ್ಜಿಯಾದ ಮಾಡೆಲಿಂಗ್ ಏಜೆನ್ಸಿಯೊಂದು 15 ತಿಂಗಳ ಮಗು ಆ್ಯಷರ್ ಭಿನ್ನ ಸಾಮರ್ಥ್ಯದ್ದೆಂಬ ಏಕೈಕ ಕಾರಣದಿಂದ ಜಾಹೀರಾತು ಅಭಿಯಾನದಿಂದ ಅದನ್ನು ತಿರಸ್ಕರಿಸಿತ್ತು. ಸಿದ್ಧ ಉಡುಪುಗಳ ತಯಾರಿಕಾ ಸಂಸ್ಥೆ ಒಷ್‌ಕೋಷ್ ಬಿಗೋಷ್‌ಗಾಗಿ ಜಾಹೀರಾತು ಸೃಷ್ಟಿಸಲು ಮುದ್ದುಮಕ್ಕಳ ಅಗತ್ಯವಿದ್ದು, ಅಂತಹ ಮಕ್ಕಳನ್ನು ಹುಡುಕುವ ಹೊಣೆಯನ್ನು ಈ ಏಜೆನ್ಸಿಗೆ ವಹಿಸಲಾಗಿತ್ತು. ತನ್ನ ಮಗುವನ್ನು ಈ ಏಜೆನ್ಸಿ ತಿರಸ್ಕರಿಸಿದ ಬಳಿಕ ತಾಯಿ ಮೇಗನ್ ನ್ಯಾಷ್ ಎದೆಗುಂದಲಿಲ್ಲ. ಆಕೆ ಆ್ಯಷರ್‌ನ ಅತ್ಯುತ್ತಮ ಭಂಗಿಯ ಕೆಲವು ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಳು. ಆ ಚಿತ್ರಗಳು ನೆಟ್ಟಿಗರ ಮೇಲೆ ಎಷ್ಟೊಂದು ಪ್ರಭಾವ ಬೀರಿವೆಯೆಂದರೆ ಆ್ಯಷರ್ ಈಗ ಆನ್‌ಲೈನ್‌ನಲ್ಲಿ ಸೂಪರ್‌ಸ್ಟಾರ್ ಆಗಿಬಿಟ್ಟಿದ್ದಾನೆ. ಒಷ್‌ಕೋಷ್ ಬಿಗೋಷ್ ಕೂಡ ಇದರಿಂದ ಪ್ರಭಾವಿತಗೊಂಡು ಮಾಡೆಲಿಂಗ್ ಏಜೆನ್ಸಿಯನ್ನು ಬಿಟ್ಟು ನೇರವಾಗಿ ಮೇಗನ್‌ಳನ್ನೇ ಮುಂದಿನ ವಾರ ತನ್ನೊಂದಿಗೆ ನೇರ ಮಾತುಕತೆಗೆ ಆಹ್ವಾನಿಸಿದೆ. ಕೊನೆಗೂ ವಿಜಯದ ನಗು ಮೇಗನ್‌ದಾಗಿದೆ.
ಮೇಗನ್ ತನ್ನ ಮಗನ ಚಿತ್ರಗಳನ್ನು ಏಜೆನ್ಸಿಗೆ ಕಳುಹಿಸಿದ್ದಾಗ ಅದರ ಮಾಲಿಕ ಆಕೆಗೆ ಕರೆ ಮಾಡಿ ಆ್ಯಷರ್ ಭಿನ್ನ ಸಾಮರ್ಥ್ಯದ ಮಗುವಾಗಿರುವುದರಿಂದ ತಾನು ಅವುಗಳನ್ನು ಒಷ್‌ಕೋಷ್ ಬಿಗೋಷ್‌ಗೆ ಕಳುಹಿಸಿಲ್ಲ ಎಂದು ತಿಳಿಸಿದ್ದ. ಭಿನ್ನ ಸಾಮರ್ಥ್ಯದ ಮಕ್ಕಳು ಬೇಡ ಎಂದು ಬಿಗೋಷ್ ತಿಳಿಸಿದೆಯೇ ಎಂದು ಪ್ರಶ್ನಿಸಿದಾಗ ಆತ ಉತ್ತರಿಸಲು ನಿರಾಕರಿಸಿದ್ದ. ಭಿನ್ನ ಸಾಮರ್ಥ್ಯ ಅಥವಾ ಡೌನ್ಸ್ ಸಿಂಡ್ರೋಮ್ ಹೊಂದಿರುವ ಮಗು ಜಾಹೀರಾತಿಗೆ ಯೋಗ್ಯವಲ್ಲ ಎಂದು ಏಜೆನ್ಸಿಯೇ ನಿರ್ಧರಿಸಿತ್ತು.
ಜಾಹೀರಾತಿನಲ್ಲಿ ಮಗು ಕಾಣಿಸಿಕೊಳ್ಳಲು ಅಗತ್ಯ ಮಾನದಂಡಗಳನ್ನೆಲ್ಲ ಆ್ಯಷರ್ ಹೊಂದಿದ್ದ,ಅಲ್ಲದೇ ನಿತ್ಯ ಒಷ್‌ಕೋಷ್ ಬಿಗೋಷ್‌ನ ಉಡುಪುಗಳನ್ನೇ ಧರಿಸುತ್ತಿದ್ದ.
ಏಜನ್ಸಿಯ ತಿರಸ್ಕಾರದ ಬಳಿಕ ತನ್ನ ಮಗ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲೇಬೆಕು ಎಂಬ ಹಟಕ್ಕೆ ಬಿದ್ದಿದ್ದ ಮೇಗನ್ ಎಂಥಹವರ ಮನಸ್ಸನ್ನೂ ದ್ರವಿಸುವ ಮಗನ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುತ್ತಲೇ ಇದ್ದಳು. ಈ ಚಿತ್ರಗಳಿಗೆ ದೀಪಕ್ಕೆ ಪತಂಗಗಳು ಮುತ್ತುವಂತೆ ಲೈಕ್‌ಗಳು ಬರುತ್ತಲೇ ಇದ್ದವು ಮತ್ತು ಶೇರ್ ಆಗುತ್ತಲೇ ಇದ್ದವು. ತೀರ ಇತ್ತೀಚಿಗೆ ಬಿಗೋಷ್‌ನ ಗಮನವನ್ನು ಸೆಳೆಯಲು ಮೇಗನ್ ಮಗನ ಮೂರು ಅತ್ಯುತ್ತಮ ಭಂಗಿಗಳ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಳು.‘‘ನಾವು ನಮ್ಮ ಹೋರಾಟವನ್ನು ಬಿಟ್ಟು ಕೊಡುವುದಿಲ್ಲ. ಈ ಚೆಂದದ ಹುಡುಗ ಯಾವುದು ಸೌಂದರ್ಯದ ಮುಖವನ್ನು ಬದಲಿಸುತ್ತಿದೆ ಎನ್ನುವುದನ್ನು ಜಗತ್ತಿಗೆ ತೋರಿಸಲು ಸಜ್ಜಾಗಿದ್ದಾನೆ ’’ ಎಂಬ ಅಡಿಬರಹವನ್ನು ಈ ಚಿತ್ರಗಳು ಹೊಂದಿದ್ದವು. ಮೇಗನ್ ಕಥೆ ಕಿಡ್ಸ್ ವಿಥ್ ಡೌನ್ ಸಿಂಡ್ರೋಮ್ ಪೇಜಿನಲ್ಲಿ ಅ.11ರಂದು ಮರುಪೋಸ್ಟ್ ಆಗಿದ್ದು, ಆಗಿನಿಂದ ಈ ಚಿತ್ರಗಳು ವೈರಲ್ ಆಗಿವೆ ಮತ್ತು 1,25,000ಕ್ಕೂ ಹೆಚ್ಚು ಬಾರಿ ಶೇರ್ ಆಗಿವೆ. ತನ್ಮೂಲಕ ಆ್ಯಷರ್ ಸಾಮಾಜಿಕ ಮಾಧ್ಯಮಗಳಲ್ಲಿ ‘ಸ್ಟಾರ್’ ಆಗಿದ್ದಾನೆ.
ಇದು ಬಿಗೋಷ್‌ನ ಗಮನವನ್ನೂ ಸೆಳೆದಿದೆ. ಮುಂದಿನ ವಾರ ಆ್ಯಷರ್ ಮತ್ತು ಆತನ ಕುಟುಂಬದ ಭೇಟಿಯನ್ನು ನಾವು ಎದುರು ನೋಡುತ್ತಿದ್ದೇವೆ. ನಮ್ಮ ಮಾರ್ಕೆಟಿಂಗ್‌ನಲ್ಲಿ ವಿಶೇಷ ಸಾಮರ್ಥ್ಯದ ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಕ್ರಮಗಳ ಬಗ್ಗೆಯೂ ಯೋಚಿಸುತ್ತಿದ್ದೇವೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.