ರಸ್ತೆಗಾಗಿ ಈ ಬಿಜೆಪಿ ಶಾಸಕ ಮಾಡಿದ್ದೇನು ನೋಡಿ
ಪಾಟ್ನಾ, ಅ.28: ಬಿಹಾರದ ಪಶ್ಚಿಮ ಚಂಪಾರಣ್ ಕ್ಷೇತ್ರದ ಬಿಜೆಪಿ ಶಾಸಕ ವಿನಯ್ ಬಿಹಾರಿ ತಮ್ಮ ವ್ಯಾಪ್ತಿಯಲ್ಲಿ ಬರುವ 44 ಕಿ.ಮೀ. ಉದ್ದದ ಮನುಆಪುಲ್ ನವಲಪುರ ಹಾಗೂ ಜೋಗಪತ್ತಿ ರಸ್ತೆಯನ್ನು ನಿರ್ಮಾಣ ಮಾಡಬೇಕೆಂದು ಕಳೆದ ಮೂರು ವರ್ಷಗಳಿಂದ ತಾವು ಮುಂದಿಟ್ಟಿರುವ ಬೇಡಿಕೆಗೆ ಸ್ಪಂದಿಸದ ಸರಕಾರ ಹಾಗೂ ಸಚಿವರ ಗಮನಸೆಳೆಯುವ ಸಲುವಾಗಿ ವಿನೂತನ ಕ್ರಮವೊಂದನ್ನು ಕೈಗೊಂಡಿದ್ದಾರೆ. ಅವರೀಗ ಕೇವಲ ಹಾಫ್ ಪ್ಯಾಂಟ್ ಹಾಗೂ ಬನಿಯನ್ ಮಾತ್ರ ಧರಿಸುತ್ತಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ತಾವು ಈ ಹಿಂದೆ ಬರೆದ ಪತ್ರಗಳು ಯಾವುದೇ ಫಲ ನೀಡದೇ ಇದ್ದಾಗ ಇದೀಗ ಅವರು ಗಡ್ಕರಿಗೆ ಬರೆದ ಇನ್ನೊಂದು ಪತ್ರದ ಜತೆಗೆ ಕುರ್ತಾವೊಂದನ್ನೂ ಕಳುಹಿಸಿ ಕೊಟ್ಟಿದ್ದಾರೆ. ‘‘ಈ ಕುರ್ತಾ ಬಿಜೆಪಿ ಶಾಸಕರದ್ದಲ್ಲ, ಬದಲಾಗಿ ಬಿಜೆಪಿಯ ಮಾನ ಸಮ್ಮಾನ ಹಾಗೂ ಪ್ರತಿಷ್ಠೆಯ ದ್ಯೋತಕವಾಗಿದೆ’’ ಎಂದು ಬರೆದಿದ್ದಾರಲ್ಲದೆರಸ್ತೆ ನಿರ್ಮಾಣವಾದ ನಂತರವಷ್ಟೇ ತಾವು ಕುರ್ತಾ ಧರಿಸುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.
ವಿನಯ್ ಬಿಹಾರಿಯವರು ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಾರ್ ಅವರಿಗೆ ಬರೆದ ಪತ್ರದೊಂದಿಗೆ ಪೈಜಾಮವೊಂದನ್ನೂ ಕಳುಹಿಸಿದ್ದಾರೆ. ಈ ಪೈಜಾಮ ಬಿಜೆಪಿ ಶಾಸಕರದ್ದಲ್ಲ, ಬದಲಾಗಿ ನಿತೀಶ್ ಕುಮಾರ್ ಆವರ ಸರಕಾರದ ಅಭಿವೃದ್ಧಿಯ ಸಂಕೇತವಾಗಿದೆಯೆಂದು ಬರೆದಿದ್ದಾರಲ್ಲದೆ ರಸ್ತೆ ನಿರ್ಮಾಣವಾದ ಬಳಿಕವಷ್ಟೇ ಕುರ್ತಾ-ಪೈಜಾಮ ಧರಿಸುವುದಾಗಿ ಹೇಳಿಕೊಂಡಿದ್ದಾರೆ.
ವಿನಯ್ ಬಿಹಾರಿ ಭೊಜಪುರಿ ಚಿತ್ರಗಳ ಖ್ಯಾತ ಸಂಗೀತಕಾರರಾಗಿದ್ದು, ಕಳೆದ ಸಾಲಿನ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದರೆ ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು. ಆಗಿನ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರನ್ನು ತಮ್ಮ ಮಂತ್ರಿಮಂಡಲದಲ್ಲಿ ಸೇರಿಸಿ ಸಂಸ್ಕೃತಿ ಸಚಿವರನ್ನಾಗಿಸಿದ್ದರು.
ಅವರ ಈ ವಿನೂತನ ಕ್ರಮ ಸಫಲವಾಗುವುದೇ ಎಂಬುದನ್ನು ಕಾದು ನೋಡಬೇಕು.