ದೂರು ನೀಡಲು ಠಾಣೆಗೆ ಹೋದವರನ್ನೇ ನಾಯಿ ಕಚ್ಚಿತು !
ಪಾಲ, ಅ. 28: ಪೊಲೀಸ್ ಠಾಣೆಗೆ ಹೋದರೂ ನಾಯಿ ಕಚ್ಚುತ್ತದೆ ಎಂದಾದರೆ ಏನು ಮಾಡುವುದು?. ನಾಯಿಗಳಿಗಾಗಿ ನಗರಸಭೆ ಪಾರ್ಕ್‌ನ್ನೇ ಕಟ್ಟಿಸಿರುವ ಪಾಲದಲ್ಲಿ ದೂರು ಕೊಡಲು ಪೊಲೀಸ್ ಠಾಣೆಗೆ ಹೋದ ಸಜಿ(44) ಎಂಬವರನ್ನು ಗುರುವಾರ ಸಂಜೆ ಬೀದಿ ನಾಯಿಕಚ್ಚಿದೆ. ಸಜಿಯ ಗೆಳೆಯ ಬೈಜು ಎಂಬವರ ಆಟೊ ಕಳೆದವಾರ ಮಗುಚಿಬಿದ್ದಿತ್ತು. ಇದಕ್ಕೆ ಸಂಬಂಧಿಸಿ ದೂರು ನೀಡಲು ಬೈಜುರ ಜೊತೆ ಸಜಿ ಪೊಲೀಸ್ ಠಾಣೆಗೆ ಹೋಗಿದ್ದರು. ಕ್ಯಾಂಟೀನ್ ಪರಿಸರದಲ್ಲಿ ಅಲೆದಾಡುತ್ತಿದ್ದ ಬೀದಿನಾಯಿಯೊಂದು ಹಿಂಬದಿಯಿಂದ ಹಠಾತ್ ದಾಳಿ ಮಾಡಿ ಸಜಿಯನ್ನು ಕಚ್ಚಿದೆ. ಕೂಡಲೆ ಅವರನ್ನು ಪಾಲ ಜನರಲ್ ಆಸ್ಪತ್ರೆಗೂ ಅಲ್ಲಿಂದ ಕೋಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೂ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೇರಳ ರಾಜ್ಯದಲ್ಲೇ ಮಾದರಿಯೋಗ್ಯವಾದ ಬೀದಿನಾಯಿಗಳಿಗಾಗಿ ಪಾಲ ನಗರಸಭೆ ಸಂರಕ್ಷಣ ಕೇಂದ್ರವೊಂದನ್ನು ನಿರ್ಮಿಸಿತ್ತು. ಇತ್ತೀಚೆಗೆ ಡಾಗ್ ಪಾರ್ಕ್‌ನ ವ್ಯವಸ್ಥೆ ಸರಿಯಾಗಿಲ್ಲ. ಅಲ್ಲಿ ಅರುವತ್ತು ನಾಯಿಗಳನ್ನು ಸಾಕುವ ವ್ಯವಸ್ಥೆ ಇದೆ. ಏಳು ಲಕ್ಷ ರೂಪಾಯಿ ಖರ್ಚುಮಾಡಿ ಡಾಗ್ ಪಾರ್ಕ್ ನಿರ್ಮಾಣವಾಗಿದೆ ಎಂದು ವರದಿತಿಳಿಸಿದೆ.