×
Ad

ಐರೋಮ್ ಶರ್ಮಿಳಾ ಪಕ್ಷ ಚಾಲನೆಗೇಕೆ ಐತಿಹಾಸಿಕ ಮಹತ್ವ?

Update: 2016-10-29 00:05 IST

ಐರೋಮ್ ಶರ್ಮಿಳಾ ಅಕ್ಟೋಬರ್ 18ರಂದು ಚುನಾವಣಾ ರಾಜಕೀಯಕ್ಕೆ ಧುಮುಕಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧದ ಪ್ರಕರಣಗಳಿಂದ ಭದ್ರತಾ ಪಡೆಯನ್ನು ರಕ್ಷಿಸುವ ಕಾನೂನು ವಿರುದ್ಧ ಹದಿನಾರು ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹ ನಡೆಸಿದ ಉಕ್ಕಿನ ಮಹಿಳೆ, ಇಂಫಾಲ ಪ್ರೆಸ್‌ಕ್ಲಬ್‌ನಲ್ಲಿ ‘ಪೀಪಲ್ಸ್ ರಿಸರ್ಜೆನ್ಸ್ ಆ್ಯಂಡ್ ಜಸ್ಟೀಸ್ ಅಲೈನ್ಸ್’ ಎಂಬ ನೂತನ ಪಕ್ಷದ ಉದಯವನ್ನು ಘೋಷಿಸಿದ್ದಾರೆ.
ಕಾಂಗ್ರೆಸ್ ಪ್ರಾಬಲ್ಯದ ಹಾಗೂ ಬಿಜೆಪಿ ರೂಪುಗೊಳ್ಳುತ್ತಿರುವ ಹಂತದಲ್ಲಿರುವ ರಾಜ್ಯದಲ್ಲಿ, ರಾಜ್ಯದ ಹಿತಾಸಕ್ತಿಗೆ ಆದ್ಯತೆ ನೀಡುವ ಮತ್ತು ಹೈಕಮಾಂಡ್ ಆದೇಶದ ವ್ಯವಸ್ಥೆ ಇಲ್ಲದ ಮಣಿಪುರ ಕೇಂದ್ರಿತ ಪಕ್ಷಕ್ಕೆ ಅವಕಾಶ ಖಂಡಿತವಾಗಿಯೂ ಇದೆ. ಈ ವಿಚಾರದಲ್ಲಿ ಪೀಪಲ್ಸ್ ರಿಸರ್ಜೆನ್ಸ್ ಆ್ಯಂಡ್ ಜಸ್ಟೀಸ್ ಅಲೈನ್ಸ್ ಗಮನ ಕೇಂದ್ರೀಕರಿಸಿದೆ.
‘‘ಮಣಿಪುರ ಬುಡಕಟ್ಟಿನ ಜನರಿಗೆ ತಮ್ಮ ಸ್ವಂತ ವ್ಯವಹಾರಗಳನ್ನು ನಿಭಾಯಿಸುವ ಹಕ್ಕು ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆಯೇ? ಯಾವುದೇ ಹಂತದಲ್ಲಿ ಸೋನಿಯಾಗಾಂಧಿ ಈ ಬಗ್ಗೆ ಚಕಾರ ಎತ್ತಿದ್ದಾರೆಯೇ? ಖಂಡಿತಾ ಇಲ್ಲ’’ ಇದು ಪಕ್ಷದ ಸಂಚಾಲಕ ಎರೆಂಡ್ರೊ ಲಿಚೋಂಬಾಮ್ ಅವರ ಸ್ಪಷ್ಟ ನುಡಿ.
‘‘ಮಣಿಪುರಿಗಳು ತಮ್ಮ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳುವ ಅಗತ್ಯವಿದೆ. ಹೊರಗಿನವರು ನಮ್ಮ ಸಮಸ್ಯೆಗಳ ಬಗ್ಗೆ ಮಧ್ಯಸ್ಥಿಕೆ ವಹಿಸಿದಾಗ ನಮ್ಮ ಸಮಸ್ಯೆ ಮತ್ತಷ್ಟು ಸಂಕೀರ್ಣವಾಗುತ್ತದೆ. ದಲ್ಲಾಳಿಗಳನ್ನು ಹೊರಗಟ್ಟಿ, ತಮ್ಮ ವ್ಯವಹಾರವನ್ನು ತಾವೇ ನಿಭಾಯಿಸಿಕೊಳ್ಳಲು ಮಣಿಪುರ ಜನತೆಗೆ ಇದು ಸುಸಂದರ್ಭ’’
ಮಣಿಪುರ ವಿವಿಯಲ್ಲಿ ಉಪನ್ಯಾಸ ನೀಡಲು ನಾನು ಅಕ್ಟೋಬರ್ 15ರಂದು ಕೊಲ್ಕತ್ತಾದಿಂದ ಇಂಫಾಲಕ್ಕೆ ಹೋಗಿದ್ದೆ. ಇಂಫಾಲದ ಖಾಲಿ ಬೀದಿಗಳ ಬಳಿಯ ಅತಿಥಿಗೃಹಕ್ಕೆ ಹೊರಟಿದ್ದೆ. ಆಗ ಮಧ್ಯಾಹ್ನವಾಗಿದ್ದರೂ, ಬಹುತೇಕ ಅಂಗಡಿಗಳು ಮುಚ್ಚಿದ್ದವು. ಏಕೆ ಎಂದು ಕುತೂಹಲದಿಂದ ಕೇಳಿದಾಗ, ಇಂದು ಅಕ್ಟೋಬರ್ 15 ಎಂಬ ಉತ್ತರ ಬಂತು. ಅಂದರೆ ಏನು ವಿಶೇಷ? ಎಂಬ ಕುತೂಹಲ ಹೆಚ್ಚಿತು. ಈ ದಿನವನ್ನು ರಾಷ್ಟ್ರೀಯ ಕರಾಳ ದಿನವಾಗಿ ಆಚರಿಸಲಾಗುತ್ತಿದೆ. ಆದ್ದರಿಂದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟಿಸುವುದು ವಾಡಿಕೆ ಎನ್ನುವುದು ನನಗೆ ಆ ಬಳಿಕ ತಿಳಿದುಬಂತು.
ವಿವಾದಾತ್ಮಕ ವಿಲೀನ
1949ರ ಅಕ್ಟೋಬರ್ 15ರಂದು ವಿಚಿತ್ರ ಪರಿಸ್ಥಿತಿಯಲ್ಲಿ ಮಣಿಪುರವನ್ನು ಭಾರತದಲ್ಲಿ ವಿಲೀನಗೊಳಿಸಲಾಯಿತು. ಮಣಿಪುರದ ಹಲವು ಮಂದಿ ಈ ವಿಲೀನವನ್ನು ಕಾನೂನುಬಾಹಿರ ಎನ್ನುತ್ತಾರೆ. ಆದ್ದರಿಂದ ಐರೋಮ್ ಶರ್ಮಿಳಾ ಅವರ ಹೊಸ ಪಕ್ಷಕ್ಕೆ ಅಂಥ ಐತಿಹಾಸಿಕ ಮಹತ್ವವೇನು ಎಂದು ಸಮಸ್ತ ಭಾರತ ಬೆರಗುಗಣ್ಣಿನಿಂದ ನೋಡುತ್ತಿದೆ. ಏಕೆಂದರೆ 1950ರಲ್ಲಿ ಗಣರಾಜ್ಯ ಎಂದು ಘೋಷಿಸಿಕೊಂಡ ಭಾರತಕ್ಕೆ ಸ್ವಯಂಪ್ರೇರಿತವಾಗಿ ಮಣಿಪುರ ಸೇರ್ಪಡೆಗೊಂಡಿದೆ ಎಂಬ ನಂಬಿಕೆ ಬಹುತೇಕ ಮಂದಿಯಲ್ಲಿದೆ
ಆ ವೇಳೆಗೆ ಮಣಿಪುರಕ್ಕೆ ಸಂವಿಧಾನ ಇತ್ತು. ಚುನಾಯಿತ ಸರಕಾರವೂ ಇತ್ತು. ಆದರೆ ಅಂದು ಅದು ಭಾರತದ ಭಾಗವಾಗಿರಲಿಲ್ಲ. ಅದನ್ನು ಭಾರತ ಬಲಾತ್ಕಾರವಾಗಿ ವಶಕ್ಕೆ ಪಡೆದಿದ್ದು, ಇಂದಿಗೂ ಅದಕ್ಕೆ ಸಂವಿಧಾನವೂ ಇಲ್ಲ; ಅದು ಗಣರಾಜ್ಯವೂ ಅಲ್ಲ. ಮಣಿಪುರದ ಪ್ರತಿನಿಧಿಯೇ ಇಲ್ಲದ ಭಾರತ ಸರಕಾರ, ಚುನಾಯಿತರಲ್ಲದ ಮಣಿಪುರ ರಾಜನನ್ನು ಶಿಲ್ಲಾಂಗ್‌ನಲ್ಲಿ ಗೃಹಬಂಧನಕ್ಕೆ ತಳ್ಳಿ ಪ್ರಜಾಪ್ರಭುತ್ವವನ್ನು ಆ ರಾಜ್ಯದ ಮೇಲೆ ಹೇರಿತು. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಬಲವಂತವಾಗಿ ವಿಲೀನ ದಾಖಲೆಗಳಿಗೆ ಸಹಿ ಮಾಡಿಸಿಕೊಂಡಿತು. ಈ ಅಕ್ರಮವನ್ನು ಮಣಿಪುರದ ಚುನಾಯಿತ ಸರಕಾರ ಕಟುವಾಗಿ ವಿರೋಧಿಸಿತ್ತು.
ಒಂದು ಚುನಾಯಿತ ಸರಕಾರ ಅಸ್ತಿತ್ವದಲ್ಲಿರುವಾಗ, ಸಾರ್ವಭೌಮತ್ವ ಸಂವಿಧಾನಾತ್ಮಕ ರಾಜನ ಅಧೀನದಲ್ಲಿ ಇರುವುದಿಲ್ಲ. ಬದಲಾಗಿ ಚುನಾಯಿತ ವಿಧಾನಸಭೆಯ ಬಳಿ ಈ ಅಧಿಕಾರ ಇರುತ್ತದೆ. ಉದಾಹರಣೆಗೆ ರಾಣಿ ಎಲಿಝಬೆತ್-2 ಅವರನ್ನು ಅಪಹರಿಸಿ, ಯುನೈಟೆಡ್ ಕಿಂಗ್ಡಮ್ ಅನ್ನು ರಷ್ಯಾಗೆ ಸೇರಿಸುವಂತೆ ಬಲವಂತವಾಗಿ ಸಹಿ ಮಾಡಿಸಿಕೊಂಡರೆ, ಅದು ಕಾನೂನುಬದ್ಧವಾಗುವುದಿಲ್ಲ. ಸಹಿ ಮಾಡುವ ಅಧಿಕಾರ ವಾಸ್ತವವಾಗಿ ಬ್ರಿಟಿಷ್ ಪಾರ್ಲಿಮೆಂಟ್‌ಗೇ ಇರುತ್ತದೆ.
ಇತಿಹಾಸದ ನೆನಪು
ವಿವಾದದ ಬಗ್ಗೆ ಇಂದಿಗೂ ಮಣಿಪುರ ತನ್ನದೇ ಆದ ನಿಲುವನ್ನು ಹೊಂದಿದೆ. ಉದಾಹರಣೆಗೆ ಮಣಿಪುರದ ಪ್ರಮುಖ ಟಿವಿ ಚಾನೆಲ್ ಎನಿಸಿದ ಐಎಸ್‌ಟಿವಿಯಲ್ಲಿ ಈ ಬಲವಂತದ ಸೇರ್ಪಡೆ ಬಗ್ಗೆ ಪ್ರೈಮ್‌ಟೈಂ ಚರ್ಚೆಗಳು ನಡೆದಿವೆ. ರಾಷ್ಟ್ರೀಯ ಕರಾಳ ದಿನದ ಬಳಿಕ, ನಾಗರಿಕ ಸಂಘಟನೆಯಾದ ‘ಕೋಯಿಲೇಷನ್ ಫಾರ್ ಇಂಡಿಜೀನಿಯಸ್ ರೈಟ್ಸ್ ಕ್ಯಾಂಪೇನ್’ ಸಂಘಟನೆ, ಅಕ್ಟೋಬರ್ 18ನ್ನು ಮಣಿಪುರ ರಾಷ್ಟ್ರೀಯ ದಿನವನ್ನಾಗಿ ಆಚರಿಸಿತು. ಅದು ಮೊಟ್ಟಮೊದಲ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ವಿಧಾನಸಭೆಯ ಮೊದಲ ಅಧಿವೇಶನ ನಡೆದ ದಿನ. ಈ ವಿಧಾನಸಭೆಯ ಸದಸ್ಯರಾಗಿದ್ದವರ ಕುಟುಂಬದವರನ್ನು ಸನ್ಮಾನಿಸಲಾಯಿತು. ಆದ್ದರಿಂದ ನೂತನ ಪಕ್ಷದ ಉದಯವನ್ನು ಘೋಷಿಸಲು ಹಾಗೂ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ ಎಂದು ಪ್ರಕಟಿಸಲು ಪೀಪಲ್ಸ್ ರಿಸರ್ಜೆನ್ಸ್ ಆ್ಯಂಡ್ ಜಸ್ಟೀಸ್ ಅಲೈನ್ಸ್ ಆ ದಿನವನ್ನು ಆಯ್ಕೆ ಮಾಡಿಕೊಂಡದ್ದು ಆಕಸ್ಮಿಕವಲ್ಲ.
‘‘ಸರಿಯಾಗಿ 68 ವರ್ಷಗಳ ಹಿಂದೆ, ಅಂದರೆ 1948ರಲ್ಲಿ ಮಣಿಪುರ ದಲ್ಲಿ ಪ್ರಜಾಪ್ರಭುತ್ವ ಉದಯವಾಗಿತ್ತು’’ ಎಂದು ಪಕ್ಷದ ಸಂಚಾಲಕ ಲಿಚೋಂಬಾಮ್ ಹೇಳಿದರು. ಈ ಬಗೆಯ ಮೊಟ್ಟಮೊದಲ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಇತಿಹಾಸಕಾರರೂ ಇದನ್ನು ಪರಿಗಣಿಸುತ್ತಾರೆ. ‘‘ಭಾರತ 1950ರಲ್ಲಿ ಸಂವಿಧಾನ ಹೊಂದುವ ಮೊದಲೇ ಮಣಿಪುರಕ್ಕೆ ಸ್ವಂತ ಸಂವಿಧಾನ ಇತ್ತು. ಈ ಪ್ರಜಾಪ್ರಭುತ್ವದ ಚೇತನವನ್ನು ಮತ್ತೊಮ್ಮೆ ನಿರೂಪಿ ಸಲು 2016ರ ಅಕ್ಟೋಬರ್ 18ರಂದು ನಾವು ಪ್ರಾದೇಶಿಕ ಪಕ್ಷವನ್ನು ಘೋಷಿಸುತ್ತಿದ್ದೇವೆ’’
ಪೀಪಲ್ಸ್ ರಿಸರ್ಜನ್ಸ್ (ಜನರ ಪುನರುತ್ಥಾನ) ಹೆಸರೇ ಏಕೆ?
‘‘ಸುದೀರ್ಘ ಕಾಲದಿಂದಲೂ ನಮ್ಮ ಇತಿಹಾಸವನ್ನು ಅರ್ಥ ಮಾಡಿ ಕೊಳ್ಳುವ ಹಕ್ಕನ್ನು ನಮಗೆ ನಿರಾಕರಿಸುತ್ತಾ ಬರಲಾಗಿತ್ತು. ನಮ್ಮ ವೈಭವದ ಇತಿಹಾಸದ ಬಗ್ಗೆ ಹೆಮ್ಮೆಪಡುವ ಅವಕಾಶದಿಂದ ವಂಚಿತರಾಗಿಸಲಾಗಿತ್ತು. ಪ್ರಸ್ತುತ ಇರುವ ಕುರಿಸಮಾನ ನಾಯಕತ್ವ, ಜನರು ತಮ್ಮ ಇತಿಹಾಸವನ್ನು ಮರೆಯುವಂತೆ ಮಾಡಿತ್ತು ಹಾಗೂ ಉದಾಸೀನ ಮತ್ತು ಹತಾಶೆಯಿಂದ ನಾವು ವಿಮುಖರಾಗುವಂಥ ವಾತಾವರಣ ಸೃಷ್ಟಿಸಿತ್ತು. ಆದರೆ ನಮ್ಮ ವೈಭವದ ಇತಿಹಾಸದ ಬಗ್ಗೆ ತಿಳಿದಾಗ ಮಾತ್ರ ಇದನ್ನು ಮತ್ತಷ್ಟು ವೈಭವೋಪೇತವಾಗಿ ಮಾಡಲು ಸಾಧ್ಯ. ನಮ್ಮ ಐಡೆಂಟಿಟಿ ಪುನರುತ್ಥಾನವಾಗಬೇಕು. ಜನರಾಗಿ ನಾವು ಏನು ಎಂದು ಅರ್ಥ ಮಾಡಿಕೊಳ್ಳದೇ, ನಾವು ಏನು ಮಾಡುತ್ತಿದ್ದೇವೆ ಎನ್ನುವುದು ಖಂಡಿತವಾಗಿಯೂ ನಮಗೆ ತಿಳಿಯುವುದಿಲ್ಲ. ನಮ್ಮ ಐಡೆಂಟಿಟಿ ನಮ್ಮ ಆತ್ಮವಿಶ್ವಾಸ. ನಮ್ಮ ಐಡೆಂಟಿಟಿ ನಮ್ಮ ಗೌರವ. ನಮ್ಮ ಐಡೆಂಟಿಟಿ ನಮ್ಮ ಸ್ವಾತಂತ್ರ್ಯ. ಮಣಿಪುರ ಈಗಲಾದರೂ ಎಚ್ಚೆತ್ತುಕೊಂಡು, ಇದು ಗೌರವ, ಸಮಗ್ರ ಹಾಗೂ ಹೆಮ್ಮೆಯ ಸಮಾಜ ಎನ್ನುವುದನ್ನು ಮರುಶೋಧಿಸಿಕೊಳ್ಳುವ ಅಗತ್ಯವಿದೆ’’
ಹಲವು ಪಕ್ಷಗಳಿಂದ ಕೂಡಿದ ಹಾಗೂ ಸಿನಿಕತೆಯ ಚುನಾವಣಾ ರಾಜಕೀಯ ಮನೆಮಾಡಿರುವ ಮಣಿಪುರದಲ್ಲಿ, ಐರೋಮ್ ಶರ್ಮಿಳಾ ಚಾನು ಅವರ ಲಾಂಛನದೊಂದಿಗೆ ಪೀಪಲ್ಸ್ ರಿಸರ್ಜೆನ್ಸ್ ಆ್ಯಂಡ್ ಜಸ್ಟೀಸ್ ಅಲೈನ್ಸ್ ಹೆಜ್ಜೆಗುರುತು ಮೂಡಿಸುತ್ತದೆಯೇ? ಮೊದಲ ಚುನಾವಣೆಯಲ್ಲೇ ತೆಲುಗುದೇಶಂ ಪಾರ್ಟಿ ಹಾಗೂ ಅಸ್ಸಾಂ ಗಣ ಪರಿಷತ್ ತೋರಿದ ಅಚ್ಚರಿಯ ಸಾಧನೆಯನ್ನು ಈ ಪಕ್ಷ ಕೂಡಾ ತೋರುತ್ತದೆ ಎಂಬ ನಿರೀಕ್ಷೆ ಖಂಡಿತಾ ಇಲ್ಲ. ಏಕೆಂದರೆ ಇತರ ಪಕ್ಷಗಳಂತೆ ವಿಸ್ತೃತವಾದ, ಉನ್ನತ ಮಟ್ಟದ ರಾಜಕೀಯ ಆಂದೋಲನವಲ್ಲ. ಆದರೆ ಅದು ಯಾವ ಭಾವನೆಯ ಆಧಾರದಲ್ಲಿ ಮುನ್ನಡೆಯುತ್ತದೆಯೋ ಅದು ಇಂಫಾಲ ಕಣಿವೆಯಲ್ಲಿ ಕಿಡಿ ಹೊತ್ತಿಸುವ ಎಲ್ಲ ಸೂಚನೆಗಳೂ ಇವೆ. ಮಣಿಪುರದ ಕೆಲವರಿಗಾದರೂ ಮಿಲನ್ ಕುಂದೆರಾ ಅವರ ಅವಿಸ್ಮರಣೀಯ ನುಡಿ ಬಗ್ಗೆ ಅರಿವು ಇದೆ. ‘ಅಧಿಕಾರದ ವಿರುದ್ಧದ ಮನುಷ್ಯನ ಹೋರಾಟ, ಮರೆವಿನ ವಿರುದ್ಧದ ನೆನಪಿನ ಹೋರಾಟದಂತೆ.’
 sroll.in

Writer - ಗಾರ್ಗ ಚಟರ್ಜಿ

contributor

Editor - ಗಾರ್ಗ ಚಟರ್ಜಿ

contributor

Similar News