×
Ad

ಇಸ್ರೊ ಅಧಿಕಾರಿಯಿಂದ ಪಾಕ್ 'ಗೂಢಚಾರ' ನಿಗೆ ಮಾಹಿತಿ ಸೋರಿಕೆ ?

Update: 2016-10-29 08:55 IST

ಹೊಸದಿಲ್ಲಿ, ಅ.29: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧಿಕಾರಿಯೊಬ್ಬರಿಂದ "ಸೂಕ್ಷ್ಮ" ಮಾಹಿತಿಯನ್ನು ಪಡೆದಿದ್ದಾಗಿ, ಗೂಢಚರ್ಯ ಆರೋಪದಲ್ಲಿ ದೇಶ ತೊರೆಯಲು ಸೂಚನೆ ಪಡೆದಿರುವ ಪಾಕಿಸ್ತಾನದ ರಾಜತಾಂತ್ರಿಕ ಸಿಬ್ಬಂದಿ ಮೆಹಮೂದ್ ಅಖ್ತರ್, ವೀಡಿಯೊ ವಿಚಾರಣೆಯಲ್ಲಿ ಬಹಿರಂಗಪಡಿಸಿದ್ದಾರೆ.
ಹೈಕಮಿಷನ್ ಸಿಬ್ಬಂದಿಗೆ ಅವರನ್ನು ಹಸ್ತಾಂತರಿಸುವ ಮುನ್ನ ಅವರ ಹೇಳಿಕೆಗಳನ್ನು ವೀಡಿಯೊ ದಾಖಲೀಕರಿಸಿಕೊಳ್ಳಲಾಗಿದೆ. ಅವರ ಬಾತ್ಮೀದಾರರು ಹಾಗೂ ಮೂಲದ ಬಗ್ಗೆ ಕೇಳಿದಾಗ ಅಖ್ತರ್, ಪಾಕಿಸ್ತಾನ ಹೈಕಮಿಷನ್ ಕಚೇರಿಯಲ್ಲಿ ಉದ್ಯೋಗದಲ್ಲಿರುವ ಇತರ ಐಎಸ್‌ಐ ಏಜೆಂಟ್‌ಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಜತೆಗೆ ಸೂಕ್ಷ್ಮ ಮಾಹಿತಿಯನ್ನು ನೀಡಿದ ಇಸ್ರೋದ ಒಬ್ಬ ಅಧಿಕಾರಿಯ ಹೆಸರನ್ನೂ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ದಿಲ್ಲಿ ಪೊಲೀಸ್ ಪಡೆಯ ಅಪರಾಧ ವಿಭಾಗದ ಸಿಬ್ಬಂದಿ 45 ನಿಮಿಷಗಳ ಕಾಲ ಅಖ್ತರ್‌ನನ್ನು ವಿಚಾರಣೆಗೆ ಗುರಿಪಡಿಸಿದರು. ಅಖ್ತರ್ ಅವರ ಹೆಸರು ಮತ್ತು ವಿಳಾಸವನ್ನು ಇಬ್ಬರು ಪೊಲೀಸರು ದಾಖಲಿಸಿಕೊಳ್ಳುವಲ್ಲಿಂದ ವೀಡಿಯೊ ಆರಂಭವಾಗುತ್ತದೆ ಎಂದು ತಿಳಿದುಬಂದಿದೆ.
ಪೊಲೀಸರು ಹಿಂದಿಯಲ್ಲಿ ಪ್ರಶ್ನಿಸಲು ಆರಂಭಿಸಿದಾಗ, ಅಖ್ತರ್ ನಡುಗುತ್ತಿದ್ದುದು ವೀಡಿಯೊದಲ್ಲಿ ದಾಖಲಾಗಿದೆ. ಇಬ್ಬರು ಪೊಲೀಸರು ಎರಡೂ ಬದಿಯಲ್ಲಿ ಆತನನ್ನು ಹಿಡಿದುಕೊಂಡಿದ್ದರು. ಮತ್ತೊಬ್ಬ ಅಧಿಕಾರಿ, ಅಖ್ತರ್‌ಗೆ ನೀರು ನೀಡಲು ಮುಂದಾದರು. ಸ್ವಲ್ಪ ಸಮಯದ ಬಳಿಕ ಪೊಲೀಸರು ಅಖ್ತರ್ ಬಳಿಯಿಂದ ಹೋದ ದೃಶ್ಯ ದಾಖಲಾಗಿದೆ ಎಂದು ಖಚಿತವಾಗಿ ತಿಳಿದುಬಂದಿದೆ.
ಈಗಾಗಲೇ ಬಂಧಿತರಾಗಿರುವ ರಮ್ಜಾನ್ ಖಾನ್ ಹಾಗೂ ಸುಭಾಷ್ ಜಾಂಗೀರ್ ಅವರ ಹೆಸರಿನ ಜತೆಗೆ ಇತರ ಕೆಲ ಹೆಸರುಗಳನ್ನೂ ಬಹಿರಂಗಪಡಿಸಿದ್ದಾನೆ. ಪಾಕಿಸ್ತಾನ ಹೈಕಮಿಷನ್‌ನಲ್ಲಿರುವ ಐಎಸ್‌ಐ ಏಜೆಂಟರು ಎನ್ನಲಾದ ಎಂಟು ಅಧಿಕಾರಿಗಳ ಹೆಸರನ್ನೂ ಹೇಳಿದ್ದಾನೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News