ಇನ್ನು ಗೂಗಲ್ ಮೂಲಕವೇ ಪ್ರವಾಸಕ್ಕೆ ಹೋಗಿ

Update: 2016-10-29 07:53 GMT

ಹೊಸದಿಲ್ಲಿ, ಅ.29: ಗೂಗಲ್ ತನ್ನ ಹೊಸ ಟ್ರಾವೆಲ್ ಗೈಡ್ ಅಪ್ಲಿಕೇಶನ್ ‘ಗೂಗಲ್ ಟ್ರಿಪ್ಸ್’ ಬಿಡುಗಡೆ ಮಾಡಿದ್ದು ಇನ್ನು ಮುಂದೆ ಪ್ರವಾಸ ಪ್ರಿಯರಿಗೆ ತಮ್ಮ ಪ್ರವಾಸವನ್ನು ಮುಂಚಿತವಾಗಿ ಅವರ ಅನುಕೂಲಕ್ಕೆ ತಕ್ಕಂತೆ ಯೋಜಿಸುವುದು ಸುಲಭವಾಗುತ್ತದೆ. ಹೆಚ್ಚುವರಿ ಫೀಚರ್ಸ್ ಇರುವ ಹೊಸ ಆ್ಯಪ್‌ ಪ್ರವಾಸಿಗರಿಗೆ ಎಲ್ಲಾ ಅಗತ್ಯ ಮಾಹಿತಿಗಳು, ವಿವಿಧ ಸ್ಥಳಗಳ ಬಗ್ಗೆ ಸಲಹೆ ಸೂಚನೆಗಳನ್ನು, ಹೊಟೇಲ್, ವಿಮಾನಗಳ ದರ, ಇತರ ಶಿಫಾರಸುಗಳನ್ನು ಹಾಗೂ ಮಾಹಿತಿಗಳನ್ನು ನೀಡುತ್ತದೆ.
ರಜಾ ಕಾಲದಲ್ಲಿ ಪ್ರವಾಸ ಹೋಗ ಬಯಸುವವರು ಪ್ಲ್ಯಾನ್ ಎ ಟ್ರಿಪ್ ಫೀಚರ್ ಮುಖಾಂತರ ತಾವು ಪ್ರವಾಸ ಹೋಗಲಿಚ್ಛಿಸುವ ಸ್ಥಳಗಳಿಗೆ ಭೇಟಿ ನೀಡಲು ಮುಂದಿನ ಆರು ತಿಂಗಳುಗಳ ತನಕ ಎಷ್ಟು ವೆಚ್ಚ ತಗಲುವುದು ಹಾಗೂ ಅಲ್ಲಿರುವ ಹೊಟೇಲುಗಳ ದರಗಳ ಬಗ್ಗೆ ಕೆಲವೇ ಟ್ಯಾಪ್ ಗಳ ಮುಖಾಂತರ ಮಾಹಿತಿ ನೀಡುವುದು. ಈ ಆ್ಯಪ್ ಬಳಕೆದಾರರು ವಿಶ್ವದ ಯಾವುದೇ ದೇಶ ಯಾ ನಗರದ ಬಗ್ಗೆ ಮಾಹಿತಿ ಕಲೆ ಹಾಕಬಹುದು.
ಭಾರತ, ಜಪಾನ್ ಹಾಗೂ ಮಲೇಷಿಯಾದಲ್ಲಿನ ಬಳಕೆದಾರರು ಪ್ಲ್ಯಾನ್ ಎ ಟ್ರಿಪ್ ಫೀಚರ್ ಬಳಸಬಹುದಾಗಿದೆ. ಈ ಫೀಚರ್, ಪ್ರಯಾಣಿಕನೊಬ್ಬನ ಪ್ರವಾಸವನ್ನು ಸುಲಭಗೊಳಿಸುವುದಲ್ಲದೆ ಆತ ತನ್ನ ಕುಟುಂಬದೊಂದಿಗೆ ನಿಶ್ಚಿಂತೆಯಿಂದ ಪ್ರವಾಸ ಕೈಗೊಳ್ಳಬಹುದಾಗಿದೆ. ‘ಡೇ ಪ್ಲ್ಯಾನ್ಸ್’ ಎಂಬ ಫೀಚರ್‌ ಗೂಗಲ್ ಮ್ಯಾಪ್ಸ್ ಗಳಲ್ಲಿ ಹುಡುಕಿದ ಸ್ಥಳಗಳಿಗೆ ಹೋಗುವ ಬಗ್ಗೆಯೂ ಶಿಫಾರಸು ಮಾಡಬಹುದಾಗಿದೆ.
ಗೂಗಲ್ ಟ್ರಿಪ್ಸ್ ಪ್ರಸ್ತುತ ವಿಶ್ವದಾದ್ಯಂತ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದ್ದು, ಸ್ಮಾರ್ಟ್ ಫೋನ್ ಬಳಕೆದಾರರು ಅದನ್ನು ಆ್ಯಪ್ ಸ್ಟೋರ್ ನಿಂದ ಡೌನ್ ಲೋಡ್ ಮಾಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News