ಪೊಸಡಿ ಗುಂಪೆಯ ಬಾನಂಗಳದಲ್ಲಿ ಗಾಳಿಪಟಗಳ ಬಣ್ಣದ ಚಿತ್ತಾರ

Update: 2016-10-31 04:59 GMT

ಕಾಸರಗೋಡು, ಅ.31: ತುಳುವೆರೆ ಆಯನೊ ವತಿಯಿಂದ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನದ ಪೂರ್ವಭಾವಿಯಾಗಿ ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಪೊಸಡಿಗುಂಪೆ ಪ್ರವಾಸಿ ತಾಣದಲ್ಲಿ ನಡೆದ ಗಾಳಿಪಟ ಉತ್ಸವ ನಡೆಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದ ಈ ಉತ್ಸವದಲ್ಲಿ ಬಾನಿನೆತ್ತರಕ್ಕೆ ಹಾರಿದ ವಿವಿಧ ಆಕರ್ಷಕ ಗಾಳಿಪಟಗಳು ಬಣ್ಣಗಳ ಚಿತ್ತಾರ ಮೂಡಿಸಿದವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಮಂಗಳೂರಿನ ಗಾಳಿಪಟ ತಂಡ ಟೀಮ್ ಇಂಡಿಯಾ, ಹಾಗೂ ಕಲ್ಲಿಕೋಟೆಯ ಸ್ಕೈಟ್ ಇಂಡಿಯಾ ತಂಡಗಳು ಯಕ್ಷಗಾನ, ಕಥಕ್ಕಳಿ, ಗರುಡ ಮುಂತಾದ ವಿವಿಧ ನಮೂನೆಗಳ ಗಾಳಿಪಟ ಹಾರಾಟ ನಡೆಸಿ ಜನರ ಮೆಚ್ಚುಗೆಗೆ ಪಾತ್ರವಾದುವು. ಗಾಳಿಪಟ ಉತ್ಸವಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ತುಳುವೆರೆ ಆಯನೊ ವತಿಯಿಂದ ಡಿ.9 ರಿಂದ ಆರಂಭವಾಗಲಿರುವ ಮೂರು ದಿನಗಳ ಕಾರ್ಯಕ್ರಮಕ್ಕೆ ಶುಭ ಕೋರಿದರು. ಅತಿಥಿಯಾಗಿ ಭಾಗವಹಿಸಿದ್ದ ಕಾಸರಗೋಡು ಜಿಪಂ ಸದಸ್ಯೆ ಪುಷ್ಪಾ ಅಮೆಕ್ಕಳ ಮಾತನಾಡಿ, ತುಳು ಸಂಸ್ಕೃತಿಯ ತುಣುಕುಗಳಾದ ದೈವಾರಾಧನೆ, ಬಲಿಯೇಂದ್ರ ಪೂಜೆ ಮುಂತಾದ ಹಲವು ಆಚರಣೆಗಳು ಮುಂದಿನ ಜನಾಂಗಕ್ಕೆ ಪರಿಚಯಿಸಿ ಅದರ ಮಹತ್ವವನ್ನು ಸಾರುವ ಅಗತ್ಯತೆ ಇಂದಿದೆ, ತುಳುವೆರೆ ಆಯನೊದಂತಹ ಕಾರ್ಯಕ್ರಮಗಳು ಇದನ್ನು ಸಾಕ್ಷಾತ್ಕರಿಸಲು ಬಹಳ ಸಹಕಾರಿ. ಸಂಸ್ಕೃತಿಯ ನೆಲೆಗಟ್ಟನ್ನು ಈ ಮೂಲಕ ದೃಢಗೊಳಿಸಿ ಮುನ್ನಡಸುವ ಕಾರ್ಯ ಪ್ರಶಂಸನೀಯ ಎಂದರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಭಾರತಿ.ಜೆ ಶೆಟಿ, ಕಾಯದರ್ಶಿ ಅಮೀರ್ ಮಾತನಾಡಿದರು. ಕಯ್ಯೆರು ಚರ್ಚ್‌ನ ಧರ್ಮಗುರು ವಂ. ವಿಕ್ಟರ್ ಡಿಸೋಜ ಮಾತನಾಡಿ, ತನ್ನ ಮಾತೃಭಾಷೆ ಕೊಂಕಣಿಯಾದರೂ ತುಳು ಆಡುಭಾಷೆಯಾಗಿದು,್ದ ಈ ಭಾಷೆಯ ಮೇಲೆ ಅಪಾರ ಗೌರವ ಪ್ರೀತಿ ಇರುವುದಾಗಿ ತಿಳಿಸಿದರು. ತುಳುವೆರೆ ಆಯನೊ ಬದಿಯಡ್ಕ ಇದರ ಸಂಚಾಲಕ ರಾಜೇಶ್ ಆಳ್ವ ಮಾತನಾಡಿ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನದ ಕಾರ್ಯಕ್ರಮಗಳ ವಿವರಗಳನ್ನು ಮುಂದಿಟ್ಟರು.

ಇದೇ ಸಂದರ್ಭ ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರೊ. ಶ್ರೀನಾಥ್‌ರನ್ನು ಸನ್ಮಾನಿಸಲಾಯಿತು. ಮಂಗಳೂರಿನ ಗಾಳಿಪಟ ತಂಡ ಟೀಮ್ ಇಂಡಿಯಾ ಹಾಗೂ ಕಲ್ಲಿಕೋಟೆಯ ಕೈಟ್ ಇಂಡಿಯಾ ತಂಡಕ್ಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೆಸಿಬಿ ಎಂಜಿನಿಯರ್ ಕುಮಾರ್ ಸುಬ್ರಹ್ಮಣ್ಯ, ಪೈವಳಿಕೆ ಗ್ರಾಪಂ ಸದಸ್ಯ ಹರೀಶ್ ಬೊಟ್ಟಾರಿ, ರವಿಚಂದ್ರ ಉಪ್ಪಳ, ಎಂ.ಕೆ.ಅಮೀರ್, ಅಜಿತ್ ಎಂ.ಸಿ., ಚನಿಯ ಕೊಮ್ಮಂಗಳ, ರಾಮಚಂದ್ರ ಧರ್ಮತ್ತಡ್ಕ, ರಾಜೇಂದ್ರ ರೈ, ಪರಮೇಶ್ವರ ಪೈವಳಿಕೆ, ಸಚ್ಚಿದಾನಂದ ರೈ, ಮಾಹಿನ್ ಕೇಳೊಟ್ , ಮೊಗೇರ ಸೊಸೈಟಿಯ ಕೆ.ಕೆ.ಸ್ವಾಮಿಕೃಪಾ, ಅಬ್ದುಲ್ ಅಝೀಝ್, ಆಶಾಲತಾ. ಎಂ.ಕೆ., ಭಾಸ್ಕರ ಕುಂಬಳೆ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News