ಕಟೀಲು ಅರ್ಚಕರ ಮನೆಯಿಂದ ದರೋಡೆ: ಮತ್ತೆ ನಾಲ್ವರ ಬಂಧನ

Update: 2016-10-31 06:54 GMT

ಮಂಗಳೂರು, ಅ.31: ಕಟೀಲು ದೇವಳದ ಅರ್ಚಕ ವಾಸುದೇವ ಆಸ್ರಣ್ಣ ಅವರ ಮನೆಯಿಂದ ಲಕ್ಷಾಂತರ ರೂ. ವೌಲ್ಯದ ನಗ-ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ವರು ಪ್ರಮುಖ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಬಜ್ಪೆ ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.

ತನ್ನ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕಾರ್ಕಳ ಭಂಡಾರಿಬೆಟ್ಟು ಬೈಲು ಮನೆ ನಿವಾಸಿ ಭರತ್ ಶೆಟ್ಟಿ(30), ಮೆಲ್ಕಾರ್ ನಿವಾಸಿ ಮುಹಮ್ಮದ್ ಅಲಿ(35), ಹಳೆಯಂಗಡಿ ಪಾವಂಜೆ ನಿವಾಸಿ ಪುರುಷೋತ್ತಮ(44) ಮತ್ತು ಸೋಮೇಶ್ವರ ಸಂಕೊಲಿಗೆ ನಿವಾಸಿ ಹರೀಶ್ ಗಟ್ಟಿ(41) ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ದರೋಡೆಗೆ ಬಳಸಿದ ಪಿಸ್ತೂಲ್, ರಿವಾಲ್ವರ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದವರು ಹೇಳಿದರು. ಬಂಧಿತರಿಂದ 450 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಸುರೇಂದ್ರ ಭಟ್ ಎಂಬಾತ ಸೇರಿದಂತೆ ಏಳು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಅ.4ರಂದು ರಾತ್ರಿ ಈ ದರೋಡೆ ನಡೆದಿತ್ತು. ವಾಸುದೇವ ಆಸ್ರಣ್ಣರವರ ಮನೆಗೆ ನುಗಿದ್ದ ದರೋಡೆಕೋರರು ಮನೆಮಂದಿಯನ್ನು ಕಟ್ಟಿ ಹಾಕಿ 80 ಪವನ್ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದೀಗ ಪ್ರಕರಣವನ್ನು ಭೇದಿಸಿದ ಸಿಸಿಬಿ ಮತ್ತು ಬಜ್ಪೆ ಪೊಲೀಸ್ ತಂಡಕ್ಕೆ ತಲಾ 10 ಸಾವಿರ ರೂ. ಬಹುಮಾನವನ್ನು ಕಮಿಷನರ್ ಎಂ.ಚಂದ್ರಶೇಖರ್ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News