×
Ad

ಇವರು ಅಮೆರಿಕನ್ನಡಿಗರು...

Update: 2016-10-31 23:19 IST

ರಾಷ್ಟ್ರಕವಿ ಕುವೆಂಪು ಅವರ ಸ್ಫೂರ್ತಿದಾಯಕ ರಚನೆ...

"ಎಲ್ಲಾದರು ಇರು, ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು..."
ಈವೊಂದು ಸಾಲುಗಳು "ನ್ಯೂಯಾರ್ಕ್ ಕನ್ನಡ ಕೂಟ"ಕ್ಕೆ ಹೇಳಿ ಮಾಡಿಸಿದಂತಿದೆ.

ನ್ಯೂಯಾರ್ಕ್ ಜಗತ್ತಿನ ಅತಿದೊಡ್ಡ ನಗರದಲ್ಲೊಂದು. ಅಮೆರಿಕದ ಪ್ರಮುಖ ಕೇಂದ್ರ. ವಿಶ್ವಸಂಸ್ಥೆಯ ಮೂಲಸ್ಥಾನ. ಪ್ರಪಂಚದ ರಾಜಕೀಯ ವ್ಯವಸ್ಥೆಯಲ್ಲಿ ಪ್ರಭಾವ ಬೀರಬಲ್ಲ ನಗರಿ. ವಿಶ್ವದ ಸಾಂಸ್ಕೃತಿಕ ರಾಜಧಾನಿ. ಇಂತಹ ನ್ಯೂಯಾರ್ಕ್ ನಲ್ಲಿ ತಲೆ ಎತ್ತಿ ನಿಂತಿರುವ "ನ್ಯೂಯಾರ್ಕ್ ಕನ್ನಡ ಕೂಟ"ದ (ಕೆ.ಕೆ.ಎನ್.ವೈ.) ಸಾಧನೆಗೆ ಮೆಚ್ಚಬೇಕು.

ಭಾರತದಿಂದ ವಿದೇಶದತ್ತ ಪ್ರಯಾಣ ಬೆಳೆಸಿ ಅಲ್ಲಿ ನೆಲೆಸಿರುವವರನ್ನು ನಾವು ಅನಿವಾಸಿ ಭಾರತೀಯರೆನ್ನುತ್ತೇವೆ. ಜೀವನದ ಜಂಜಾಟಕ್ಕೆ ಕೆಲಸ ಹುಡುಕುತ್ತಾ ವಿದೇಶದತ್ತ ತೆರಳಿದವರಿಗೆ ಅಲ್ಲಿನ ತುರ್ತು ಕೆಲಸದ ಮಧ್ಯೆ ಊರಿನ ಸಂಸ್ಕೃತಿ, ಆಚಾರ-ವಿಚಾರ ಬಿಡಿ ತಾಯ್ನೆಲವನ್ನೇ ನೆನಪಿಸಿಕೊಳ್ಳಲು ಪುರುಸೊತ್ತು ಇರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ತಾಯ್ನಾಡಿನ ವಿಶೇಷವಾಗಿ ಕನ್ನಡದ ಕಂಪನ್ನು ವಿಶ್ವದ ಹಿರಿಯಣ್ಣ ಅಮೆರಿಕದಂತಹ ರಾಷ್ಟ್ರದಲ್ಲಿ ಪಸರಿಸುತ್ತಾರಲ್ಲಾ... ಅಂತಹವರಿಗೆ ಭೇಷ್ ಅನ್ನಲೇಬೇಕು.

1971 ರಲ್ಲಿ ವಾಸುದೇವ ಮೂರ್ತಿ ಮತ್ತು ಡಾ.ಭಾಗ್ಯಾ ಮೂರ್ತಿ ಅವರು ನ್ಯೂಯಾರ್ಕ್ ನ ಲೆಫ್ರಕ್ ಎಂಬಲ್ಲಿರುವ ತಮ್ಮ ಸಣ್ಣ ಅಪಾರ್ಟ್'ಮೆಂಟ್ ನಲ್ಲಿ ಆಯೋಜಿಸಿದ ಗಣೇಶ ಪೂಜೆಗೆ ಅಲ್ಲಿರುವ ಕೆಲ ಕನ್ನಡಿಗರನ್ನು ಆಹ್ವಾನಿಸುತ್ತಾರೆ. ಆ ಸಂದರ್ಭ ಅಲ್ಲಿ ಕನ್ನಡಿಗರ ಒಂದು ಸಂಘ ಬೇಕೆಂಬುದರ ಬಗ್ಗೆ ಚಿಂತನೆ ಮೊಳಕೆ ಒಡೆಯುತ್ತದೆ. ಡಾ. ಶ್ರೀದೇವಿ ಚಂದ್ರಶೇಖರ್ ಮತ್ತು ಡಾ. ಎಚ್.ಕೆ. ಚಂದ್ರಶೇಖರ್ ಅವರು ನ್ಯೂಯಾರ್ಕ್ ಕನ್ನಡಿಗರನ್ನು ಒಂದುಗೂಡಿಸುವ ಪರಿವರ್ತನೆಯ ಪ್ರಯತ್ನಕ್ಕೆ ಕೈ ಹಾಕುತ್ತಾರೆ. 1972 ರಲ್ಲಿ ಮಕರ ಸಂಕ್ರಾಂತಿಯಂದು "ನ್ಯೂಯಾರ್ಕ್ ಕನ್ನಡ ಕೂಟ" ಶುಭಾರಂಭವಾಗುತ್ತದೆ. ಡಾ. ಶ್ರೀದೇವಿ ಚಂದ್ರಶೇಖರ್ ಸ್ಥಾಪಕ ಅಧ್ಯಕ್ಷರಾಗಿಯೂ, ವಾಸುದೇವ ಮೂರ್ತಿ ಸ್ಥಾಪಕ ಕಾರ್ಯದರ್ಶಿಯಾಗಿಯೂ ನೇಮಕವಾಗುತ್ತಾರೆ. 1974 ರಲ್ಲಿ ಕನ್ನಡ ಕೂಟಕ್ಕೆ ಅಧಿಕೃತ ಮುದ್ರೆ ಸಿಗುತ್ತದೆ. ಅಂದಿನ ಪ್ರಾರಂಭದ ದಿನಗಳಲ್ಲಿ ಡಾ. ವಿಶ್ವನಾಥ್ ಬನದ್, ಸತ್ಯಾ ವಿಶ್ವನಾಥ್, ಡಾ.ಕೃಷ್ಣಮೂರ್ತಿ ವೆಂಕಟ್ರಮಣ್, ಗುರುರಾಜ್ ಮತ್ತು ಉಷಾ ಸಿರ್ಸಿ, ಡಾ.ಅನಸೂಯ ನಾಗರಾಜ್ ಮತ್ತು ಎ.ಆರ್.ನಾಗರಾಜ್, ನಳಿನಿ ಮತ್ತು ಗೋಪಾಲ್ ಕುಕ್ಕೆ, ಸಂಪತ್ ಕುಮಾರನ್, ವಿ.ಸುಬ್ರಹ್ಮಣ್ಯಂ, ನಾಗು ಶ್ರೀನಿವಾಸ್, ಭಾರತಿ ಮತ್ತು ಜಿ.ವಿ.ಚಂದ್ರಶೇಖರ್ ಮೊದಲಾದವರು ನ್ಯೂಯಾರ್ಕ್ ನೆಲದಲ್ಲಿ ಕನ್ನಡ ಕೂಟ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ನ್ಯೂಯಾರ್ಕ್'ನಲ್ಲಿ ನೆಲೆಸಿರುವ ಪ್ರತಿಯೊಬ್ಬ ಕನ್ನಡಿಗರ ಮನೆಯಲ್ಲಿ ಪ್ರತಿನಿತ್ಯ ಕನ್ನಡ ಮಾತನಾಡಬೇಕು, ಕನ್ನಡ ಸಂಸ್ಕೃತಿಯನ್ನು ಅಮೆರಿಕದ ಮಣ್ಣಲ್ಲಿ ಪಸರಿಸಬೇಕು ಎಂಬ ಉದ್ದೇಶ ನ್ಯೂಯಾರ್ಕ್ ಕನ್ನಡ ಕೂಟದ್ದು. ಕೂಟ ಪ್ರಾರಂಭವಾಗಿ ಬರೋಬ್ಬರಿ 44 ವರ್ಷಗಳು ಸಂದವು. ಕನ್ನಡ ರಾಜ್ಯೋತ್ಸವ, ಗಣೇಶ ಹಬ್ಬ, ಮಕ್ಕಳ ದಿನಾಚರಣೆ, ಕನ್ನಡಿಗರ ಪಿಕ್'ನಿಕ್ ನ್ನು ಕೂಟವು ಸುಸೂತ್ರವಾಗಿ ನಡೆಸಿಕೊಂಡು ಬಂದಿದೆ. ಹಲವಾರು ಪ್ರಸಿದ್ಧ ಕಲಾವಿದರು ಕೂಟದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅನಿವಾಸಿ ಕನ್ನಡಿಗರ ಮಕ್ಕಳಲ್ಲಿ ಕನ್ನಡದ ಸಂಸ್ಕೃತಿಯನ್ನು ಬಿಂಬಿಸುವ ಕಲೆಯನ್ನು ತರಬೇತುಗೊಳಿಸಲಾಗುತ್ತಿದೆ. ಕೂಟದ 40 ವರ್ಷದ ಸಂಭ್ರಮವನ್ನು ಅದ್ದೂರಿಯಾಗಿ ಮಾಡಲಾಗಿದೆ. ಕಳೆದ ವರ್ಷ ರಾಜ್ಯ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶಕ್ಕೆ ನ್ಯೂಯಾರ್ಕ್'ಗೆ ತೆರಳಿದ್ದಾಗ ಅವರನ್ನು ಸನ್ಮಾನಿಸಿದೆ. ಒಟ್ಟಿನಲ್ಲಿ ಕನ್ನಡ ಕೂಟವು ಕರ್ನಾಟಕದ ನಾಡು-ನುಡಿ, ಸಂಸ್ಕೃತಿಯನ್ನು ಅಮೆರಿಕದ ನೆಲದಲ್ಲಿ ನೆಟ್ಟು ಬೆಳೆಸಿ ಪೋಷಿಸುತ್ತಿದೆ. ಪ್ರಸ್ತುತ ಕನ್ನಡ ಕೂಟದ ಅಧ್ಯಕ್ಷರಾಗಿ ಶಿವಕುಮಾರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಕನ್ನಡಕೂಟದಲ್ಲಿ ನ್ಯೂಯಾರ್ಕ್, ನ್ಯೂಜೆರ್ಸಿಯ ಸುಮಾರು 600 ಕನ್ನಡಿಗ ಸದಸ್ಯರಿದ್ದಾರೆ. ಆಗಾಗ ಒಟ್ಟುಗೂಡಿ ಕನ್ನಡ ನೆಲ ಜಲದ ಬಗ್ಗೆ ಚರ್ಚಿಸುತ್ತಾರೆ. ಸಹಸ್ರಾರು ಮೈಲು ದೂರದ ನಾಡಲ್ಲಿರುವ ಕನ್ನಡಿಗರ ಕನ್ನಡ ಕೂಟದ ಈ ಸೇವೆ ನಿಜಕ್ಕೂ ಶ್ಲಾಘನೀಯ. ಅಮೆರಿಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ.

Writer - ರಶೀದ್ ವಿಟ್ಲ

contributor

Editor - ರಶೀದ್ ವಿಟ್ಲ

contributor

Similar News