ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ದಾಖಲೆ ನೀಡಿ: ಸಚಿವ ರೈ ಸವಾಲು

Update: 2016-11-01 09:28 GMT

ಮಂಗಳೂರು, ನ.1: ದ.ಕ. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು ಭಾಗಿಯಾಗಿರುವ ಆರೋಪವನ್ನು ಅಲ್ಲಗಳೆದಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಯಾರಾದರೂ ಅಂತಹ ಕೃತ್ಯದಲ್ಲಿ ತೊಡಗಿದ್ದಲ್ಲಿ ದಾಖಲೆ ಒದಗಿಸಿ ಎಂದು ಸವಾಲೆಸೆದಿದ್ದಾರೆ.

ಲೇಡಿಗೋಶನ್ ಆಸ್ಪತ್ರೆಯಲ್ಲಿ ‘ಮಮತೆಯ ತೊಟ್ಟಿಲು’ ಯೋಜನೆಗೆ ಚಾಲನೆ ನೀಡಿದ ಸಂದರ್ಭ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.

ಮರಳುಗಾರಿಕೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳವರೂ ತೊಡಗಿದ್ದಾರೆ. ಅನಧಿಕೃತವಾಗಿ ಮರಳುಗಾರಿಕೆಯಲ್ಲಿ ತೊಡಗಿಕೊಂಡಿರುವವರ ಬಗ್ಗೆ ಅಧಿಕೃತ ಮಾಹಿತಿ ನೀಡದೆ ಆರೋಪ ಮಾಡುವುದು ಸರಿಯಲ್ಲ. ನನಗೆ ಯಾವುದೇ ರೀತಿಯ ವ್ಯಾಪಾರ ಇಲ್ಲ ಎಂದು ಹೇಳಿದ ಅವರು, ‘ರಾಜ ವ್ಯಾಪಾರಿ ಆದರೆ, ಪ್ರಜೆಗಳು ಭಿಕಾರಿ ಆಗುತ್ತಾರೆ’ ಎಂದು ಮಾರ್ಮಿಕವಾಗಿ ನುಡಿದರು.

ತಮ್ಮ ಪಕ್ಷದ ಕೆಲ ಕಾರ್ಯಕರ್ತರು ಕಾನೂನು ಪ್ರಕಾರ ಅದೆಷ್ಟೋ ವರ್ಷಗಳ ಹಿಂದಿನಿಂದ ಮರಳುಗಾರಿಕೆ ನಡೆಸುತ್ತಿದ್ದಾರೆ. ಈಗಿನ ಜಿಲ್ಲಾಧಿಕಾರಿ ಹೊಸಬರು ಹಾಗೂ ಮುಕ್ತ ಮನಸ್ಸಿನವರು. ಪ್ರಸಕ್ತ ಸಿಆರ್‌ಝೆಡೇತರ ವ್ಯಾಪ್ತಿಯಲ್ಲಿನ ಮರಳುಗಾರಿಕೆಗೆ ಇರುವ ಸಮಸ್ಯೆಯನ್ನು ಹಾಗೂ ಅಕ್ರಮ ಮರಳುಗಾರಿಕೆ ವಿರುದ್ಧ ಸೂಕ್ತವಾಗಿ ಅವರು ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಸಚಿವ ರೈ ಹೇಳಿದರು.

ಸಿಆರ್‌ಝೆಡೇತರ ಪ್ರದೇಶದಲ್ಲಿ ಮರಳುಗಾರಿಕೆಗೆ ಸೂಕ್ತ ನೀತಿ ಇಲ್ಲದಿರುವ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ. ಬೆಂಗಳೂರಿನಲ್ಲಿ ನವೆಂಬರ್ 3ರಂದು ಈ ಬಗ್ಗೆ ಸಭೆಯನ್ನು ಕರೆಯಲಾಗಿದೆ. ಇದರಿಂದ ಅಕ್ರಮ ಮರಳುಗಾರಿಕೆ ಸಮಸ್ಯೆ ಬಗೆಹರಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News