ಕೆಎಸ್ಸಾರ್ಟಿಸಿ ಬಸ್-ಟಿಪ್ಪರ್ ಮುಖಾಮುಖಿ ಢಿಕ್ಕಿ; ಚಾಲಕರಿಬ್ಬರು ಗಂಭೀರ

Update: 2016-11-01 14:45 GMT

ಬಂಟ್ವಾಳ, ನ. 1: ಕೆಎಸ್ಸಾರ್ಟಿಸಿ ಬಸ್ ಮತ್ತು ಟಿಪ್ಪರ್ ಲಾರಿ ಮುಖಾಮುಖಿ ಢಿಕ್ಕಿಯಾದ ಘಟನೆ ಬಂಟ್ವಾಳ ಸಮೀಪದ ಮಣಿಹಳ್ಳ ಎಂಬಲ್ಲಿ ಮಂಗಳವಾರ ಸಂಜೆ ಸಂವಿಸಿದ್ದು ಎರಡು ವಾಹನಗಳ ಚಾಲಕರು ಸೇರಿದಂತೆ ಒಟ್ಟು ಹತ್ತು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ, ಸಣ್ಣ ಪುಟ್ಟ ಗಾಯಗೊಂಡ ಗಾಯಾಳುಗಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮಂಗಳೂರು ಕಡೆಯಿಂದ ಧರ್ಮಸ್ಥಳದತ್ತ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹಾಗೂ ಎದುರು ಕಡೆಯಿಂದ ಬರುತ್ತಿದ್ದ ಟಿಪ್ಪರ್ ಮುಖಾಮುಖಿಯಾಗಿ ಢಿಕ್ಕಿ ಹೊಡೆದಿದೆ. ಪರಿಣಾಮ ಎರಡೂ ವಾಹನಗಳ ಚಾಲಕರು ಅಪ್ಪಚ್ಚಿಯಾಗಿ ವಾಹನದೊಳಗೆ ಸಿಲುಕಿದರೆ ಬಸ್‌ನಲ್ಲಿದ್ದ ಓರ್ವ ವೃದ್ಧೆ, ಮಗು ಸಹಿತ ಸುಮಾರು ಎಂಟು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ ವೃದ್ಧೆ ಹಾಗೂ ಮಗು ಗಂಬೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ವೇಳೆ ಬಿರುಸಾದ ಮಳೆ ಸುರಿಯುತ್ತಿದ್ದರಿಂದ ಗಾಯಾಳುಗಳ ರಕ್ಷಣಾ ಕಾರ್ಯಕ್ಕೆ ಸ್ವಲ್ಪ ಮಟ್ಟಿನ ಅಡ್ಡಿಯಾಯಿತು.

ಸುದ್ದಿ ತಿಳಿದ ಬಂಟ್ವಾಳ ಉಪ ವಿಬಾಗದ ಡಿವೈಎಸ್ಪಿ ರವೀಶ್ ಅವರು ಸ್ಥಳಕ್ಕೆ ಧಾವಿಸಿದ್ದು ಡಿವೈಎಸ್ಪಿಯವರ ವಾಹನ ಚಾಲಕ ಸತ್ಯಪ್ರಕಾಶ್ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಎರಡೂ ವಾಹನಗಳಲ್ಲಿ ಸಿಲುಕಿದ್ದ ಚಾಲಕರಿಬ್ಬರನ್ನು ಹರಸಾಹಸ ಪಟ್ಟು ಹೊರ ತೆಗೆಯುವಲ್ಲಿ ಯಶಸ್ವಿಯಾದರು. ಬಳಿಕ ಚಾಲಕರಿಬ್ಬರ ಸಹಿತ ಗಾಯಾಳುಗಳನ್ನು ಡಿವೈಎಸ್ಪಿ ರವೀಶ್ ಅವರ ವಾಹನದಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದರು.

ಸುರಿಯುವ ಮಳೆಯನ್ನು ಲೆಕ್ಕಿಸದೆ ವಾಹನದಲ್ಲಿ ಸಿಲುಕಿ ಒದ್ದಾಡುತ್ತಿದ್ದ ಚಾಲಕರಿಬ್ಬರನ್ನು ರಕ್ಷಿಸಿದ ಡಿವೈಎಸ್ಪಿ ಅವರ ವಾಹನ ಚಾಲಕ ಸತ್ಯಪ್ರಕಾಶ್ ಅವರ ಕಾರ್ಯಾಚರಣೆ ಸಾರ್ವತ್ರಿಕ ಶ್ಲಾಘನೆಗೆ ಒಳಗಾಗಿದೆ. ಡಿವೈಎಸ್ಪಿ ರವೀಶ್ ಕೂಡಾ ಚಾಲಕ ಸತ್ಯಪ್ರಕಾಶ್ ಅವರ ಮಾನವೀಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಗಾಯಾಳುಗಳ ಹೆಸರು ವಿಳಾಸ ಲಲ್ಯವಾಗಿಲ್ಲವೆಂದು ಬಂಟ್ವಾಳ ಟ್ರಾಫಿಕ್ ಠಾಣೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News