ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ ಭಂಡಾರಿ ರಾಜೀನಾಮೆ

Update: 2016-11-01 14:06 GMT

ಉಡುಪಿ, ನ.1: ಹಿರಿಯ ನ್ಯಾಯವಾದಿ, ರಾಜ್ಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಶ್ಯಾಮಲಾ ಭಂಡಾರಿ ರಾಜ್ಯ ಮಹಿಳಾ ಆಯೋಗದ ತನ್ನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸರ ಅಧಿಕಾರಾವಧಿ ಇನ್ನೂ 8 ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಸಕಾರಣವಿಲ್ಲದೆ ಏಕಾಏಕಿ ಅವರ ರಾಜೀನಾಮೆ ಪಡೆದಿರುವುದನ್ನು ಪ್ರತಿಭಟಿಸಿ, ಮನನೊಂದು ತಾನು ತನ್ನ ಆಯೋಗದ ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಶ್ಯಾಮಲಾ ಭಂಡಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಗಟ್ಟುವುದು, ಅವರಿಗೆ ರಕ್ಷಣೆ ಒದಗಿಸುವುದು, ಸಮಾನತೆ ಕಲ್ಪಿಸುವುದು ಮತ್ತು ಅವರು ಗೌರವಯುತವಾಗಿ ಬದುಕುವ ಸನ್ನಿವೇಶ ನಿರ್ಮಿಸುವುದು ಮಹಿಳಾ ಆಯೋಗದ ಕಾರ್ಯ ವಾಗಿದೆ. ಆದರೆ ಮಹಿಳಾ ಆಯೋಗದೊಳಗಿನ ಪ್ರಸಕ್ತ ಸನ್ನಿವೇಶ ನೋವು ತಂದಿದೆ ಎಂದು ಅವರು ಹೇಳಿದ್ದಾರೆ.

ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಕಗೊಂಡ ಎರಡು ವರ್ಷ ಗಳಿಂದ ಸಕ್ರಿಯವಾಗಿ ಆಯೋಗದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನಾನು ಅದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಕೂಡ ಆಯೋಗದ ಸದಸ್ಯರಾದವರು ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂಬ ನಿಯಮಕ್ಕೆ ಅನುಗುಣವಾಗಿ ಸಕ್ರೀಯ ರಾಜಕಾರಣದಿಂದ ದೂರ ಉಳಿದಿದ್ದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News