ಮೂರನೆ ಟೆಸ್ಟ್: ಪಾಕಿಸ್ತಾನಕ್ಕೆ ಅಲ್ಪ ಮುನ್ನಡೆ
ಶಾರ್ಜಾ, ನ.1: ವೆಸ್ಟ್‌ಇಂಡೀಸ್ ವಿರುದ್ಧ ಇಲ್ಲಿ ನಡೆಯುತ್ತಿರುವ ಮೂರನೆ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಅಲ್ಪ ಮುನ್ನಡೆ ಸಾಧಿಸಿದೆ.
ಮೂರನೆ ದಿನದಾಟವಾದ ಮಂಗಳವಾರ 4 ವಿಕೆಟ್ ನಷ್ಟಕ್ಕೆ 87 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ವೆಸ್ಟ್‌ಇಂಡೀಸ್ ವೇಗದ ಬೌಲರ್‌ಗಳಾದ ವಹಾಬ್ ರಿಯಾಝ್(5-88) ಹಾಗೂ ಮುಹಮ್ಮದ್ ಆಮಿರ್(3-71) ದಾಳಿಗೆ ಸಿಲುಕಿ 337 ರನ್‌ಗೆ ಆಲೌಟಾಯಿತು. ಆದರೆ, ಮೊದಲ ಇನಿಂಗ್ಸ್‌ನಲ್ಲಿ 56 ರನ್ ಮುನ್ನಡೆ ಪಡೆಯಲು ಯಶಸ್ವಿಯಾಯಿತು.
ವಿಂಡೀಸ್‌ನ ಪರ ಆರಂಭಿಕ ಆಟಗಾರ ಬ್ರಾತ್‌ವೈಟ್ ಅಜೇಯ 142 ರನ್(318 ಎಸೆತ, 11 ಬೌಂಡರಿ) ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆರ್‌ಎಲ್ ಚೇಸ್(50) ಹಾಗೂ ಡೌರಿಚ್(47) ಎರಡಂಕೆಯ ಸ್ಕೋರ್ ದಾಖಲಿಸಿದರು.
ಮೊದಲ ಇನಿಂಗ್ಸ್‌ನಲ್ಲಿ 281 ರನ್‌ಗೆ ಆಲೌಟಾಗಿದ್ದ ಪಾಕಿಸ್ತಾನ ಎರಡನೆ ಇನಿಂಗ್ಸ್ ಆರಂಭಿಸಿದ್ದು ದಿನದಾಟದಂತ್ಯಕ್ಕೆ 87 ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ. ಕೇವಲ 31 ರನ್ ಮುನ್ನಡೆಯಲ್ಲಿದೆ.
ಆರಂಭಿಕ ಬ್ಯಾಟ್ಸ್‌ಮನ್ ಅಝರ್ ಅಲಿ(ಔಟಾಗದೆ 45) ಹಾಗೂ ವಿಕೆಟ್‌ಕೀಪರ್ ಸರ್ಫರಾಝ್ ಅಹ್ಮದ್(19) ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಯಕ ಜೇಸನ್ ಹೋಲ್ಡರ್(3-10) ಪಾಕ್‌ಗೆ ಆರಂಭಿಕ ಆಘಾತ ನೀಡಿದ್ದಾರೆ.