×
Ad

2012ರ ಪ್ರದರ್ಶನ ಪುನರಾವರ್ತಿಸುವುದು ಕುಕ್ ಗುರಿ

Update: 2016-11-01 23:33 IST

ಢಾಕಾ, ನ.1: ಅಲೆಸ್ಟೈರ್ ಕುಕ್ ಇಂಗ್ಲೆಂಡ್‌ನ ಶ್ರೇಷ್ಠ ಕ್ರಿಕೆಟಿಗರ ಪೈಕಿ ಒಬ್ಬರು. ಅವರು ಗರಿಷ್ಠ ಪಂದ್ಯಗಳನ್ನು ಆಡಿದ್ದಾರೆ, ಗರಿಷ್ಠ ರನ್ ಗಳಿಸಿದ್ದಾರೆ, ಗರಿಷ್ಠ ಶತಕ ಹಾಗೂ ಅರ್ಧಶತಕ ಬಾರಿಸಿದ್ದಾರೆ. ಹೆಚ್ಚು ಕ್ಯಾಚ್‌ಗಳನ್ನು ಪಡೆದಿದ್ದಾರೆ. ನಾಯಕನಾಗಿ ತನ್ನ ತಂಡಕ್ಕೆ ಹೆಚ್ಚು ಗೆಲುವನ್ನು ತಂದುಕೊಟ್ಟಿದ್ದಾರೆ.

10 ವರ್ಷಗಳ ಹಿಂದೆ ನಾಗ್ಪುರದಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟ ಬಳಿಕ ಕುಕ್ ಸಾಧನೆಯ ಹಾದಿ ಅಮೋಘ. ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಕುಕ್ ಆ ಬಳಿಕ 28 ಶತಕಗಳನ್ನು ದಾಖಲಿಸಿದ್ದಾರೆ. ಕೆಲವು ಸಂದರ್ಭದಲ್ಲಿ ಕುಕ್‌ರನ್ನು ಕೈಬಿಡಬೇಕೆಂದು ಆಗ್ರಹ ಕೇಳಿಬಂದರೂ ಅವರು ಈ ತನಕ ಒಂದು ಬಾರಿ ಮಾತ್ರ ತಂಡದಿಂದ ಹೊರಗುಳಿದಿದ್ದರು. 2006ರಲ್ಲಿ ಹೊಟ್ಟೆನೋವಿನ ಕಾರಣದಿಂದ ಅವರು ಒಂದು ಪಂದ್ಯ ತಪ್ಪಿಸಿಕೊಂಡಿದ್ದರು.

 ಸತತ 133 ಟೆಸ್ಟ್ ಪಂದ್ಯಗಳನ್ನು ಆಡಿರುವ ಕುಕ್ ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಇದ್ದಾರೆ. ಅಲನ್ ಬಾರ್ಡರ್ ಸತತ 153 ಟೆಸ್ಟ್ ಪಂದ್ಯ ಆಡಿರುವ ಸಾಧನೆ ಮಾಡಿದ್ದಾರೆ. ಕುಕ್ ಇನ್ನೆರಡು ವರ್ಷಗಳಲ್ಲಿ ಬಾರ್ಡರ್ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.

ಕುಕ್ ಈ ತನಕ ಟೆಸ್ಟ್ ಕ್ರಿಕೆಟ್‌ನಲ್ಲಿ 10,668 ಟೆಸ್ಟ್ ರನ್ ಗಳಿಸಿದ್ದಾರೆ. ಆರಂಭಿಕ ಆಟಗಾರನಾಗಿ 10,061 ರನ್ ಗಳಿಸಿದ್ದಾರೆ. 2010ರ ಮಾರ್ಚ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ನಲ್ಲಿ ಹಂಗಾಮಿ ನಾಯಕರಾಗಿದ್ದ ಕುಕ್ ಶತಕ ಬಾರಿಸಿದ್ದರು. ಆ ವರ್ಷ 8 ಇನಿಂಗ್ಸ್‌ನಲ್ಲಿ ಕೇವಲ 108 ರನ್ ಗಳಿಸಿದ್ದರು.

 2010-11ರಲ್ಲಿ ಆ್ಯಶಸ್ ಸರಣಿ ಆಡಲು ಇಂಗ್ಲೆಂಡ್ ತಂಡ ಆಸ್ಟ್ರೇಲಿಯಕ್ಕೆ ತೆರಳಿದ್ದಾಗ ಕುಕ್ 5 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 766 ರನ್ ಗಳಿಸಿದ್ದರು. ಇದರಲ್ಲಿ ಪರ್ತ್‌ನಲ್ಲಿ ಬಾರಿಸಿದ್ದ ಅಜೇಯ 235 ರನ್ ಕೂಡ ಸೇರಿದೆ. ಇಂಗ್ಲೆಂಡ್ ತಂಡ ಆಸ್ಟ್ರೇಲಿಯದಲ್ಲಿ 3-1 ಅಂತರದಿಂದ ಸರಣಿ ಜಯಿಸಲು ತಂಡದ ಇತರ ಆಟಗಾರರ ಕೊಡುಗೆಯಿದ್ದರೂ ಕುಕ್ ಆಂಗ್ಲರಿಗೆ ಆಸ್ಟ್ರೇಲಿಯ ನೆಲದಲ್ಲಿ 24 ವರ್ಷಗಳ ಬಳಿಕ ಆ್ಯಶಸ್ ಸರಣಿ ಗೆಲುವು ತಂದುಕೊಟ್ಟಿದ್ದರು.

2012ರಲ್ಲಿ ಆ್ಯಂಡ್ರೂ ಸ್ಟ್ರಾಸ್ ನಿವೃತ್ತಿಯಾದಾಗ ಕುಕ್ ಇಂಗ್ಲೆಂಡ್‌ನ ನಾಯಕನಾಗಿ ಆಯ್ಕೆಯಾಗಿದ್ದರು. ಕುಕ್ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ್ನು 55ನೆ ಬಾರಿ ನಾಯಕನಾಗಿ ಮುನ್ನಡೆಸಲಿದ್ದಾರೆ. ಈ ಮೂಲಕ ಗರಿಷ್ಠ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಮೈಕ್ ಅಥರ್ಟನ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಕುಕ್ ಏಷ್ಯಾಖಂಡದಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಕಳೆದ ಬಾರಿ ಇಂಗ್ಲೆಂಡ್ ತಂಡ ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾಗ 2-1 ರಿಂದ ಸರಣಿ ಗೆಲ್ಲುವಲ್ಲಿ ಕುಕ್ ಪ್ರಮುಖ ಕಾಣಿಕೆ ನೀಡಿದ್ದರು. ಆ ಗೆಲುವು ಕುಕ್ ನಾಯಕತ್ವದ ಕಿರೀಟಕ್ಕೆ ಹೊಸ ಗರಿಯಾಗಿತ್ತು. 2012ರಲ್ಲಿ ಅಹ್ಮದಾಬಾದ್‌ನಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 176 ರನ್ ಗಳಿಸಿದ್ದ ಕುಕ್ ಮುಂಬೈನಲ್ಲಿ ನಡೆದ 2ನೆ ಟೆಸ್ಟ್‌ನಲ್ಲಿ 122 ರನ್ ಹಾಗೂ ಕೋಲ್ಕತಾದಲ್ಲಿ ನಡೆದಿದ್ದ 3ನೆ ಟೆಸ್ಟ್‌ನಲ್ಲಿ 190 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಕಾಣಿಕೆ ನೀಡಿದ್ದರು. ಈ ಬಾರಿ ಕೂಡ ತನ್ನ ಹಿಂದಿನ ಪ್ರದರ್ಶನ ಪುನರಾವರ್ತಿಸುವ ವಿಶ್ವಾಸದಲ್ಲಿದ್ದಾರೆ.

ಕ್ರಿಸ್ಮಸ್ ದಿನದಂದು 32ನೆ ವಸಂತಕ್ಕೆ ಕಾಲಿಡಲಿರುವ ಕುಕ್ ಇನ್ನೂ ಐದು ವರ್ಷ ಟೆಸ್ಟ್ ಕ್ರಿಕೆಟ್ ಆಡಿದರೆ ಗರಿಷ್ಠ ಟೆಸ್ಟ್ ರನ್ ಗಳಿಸಿರುವ ಸಚಿನ್ ತೆಂಡುಲ್ಕರ್ ದಾಖಲೆ(15,921) ಮುರಿಯಬಲ್ಲರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News