ಪ್ರಶ್ನಿಸುವುದು ಒಳ್ಳೆಯ ಸಂಸ್ಕೃತಿಯಲ್ಲ ಎಂದ ಗೃಹ ರಾಜ್ಯ ಸಚಿವ !

Update: 2016-11-02 06:07 GMT

ಭೋಪಾಲ್, ನ.2: ಭೋಪಾಲ್ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡ ಕೆಲವೇ ಗಂಟೆಗಳಲ್ಲಿ ಎಂಟು ಮಂದಿ ಸಿಮಿ ಕಾರ್ಯಕರ್ತರ ಹತ್ಯೆಯ ಘಟನೆಯ ಸಂಬಂಧದ ಪೊಲೀಸ್ ಕಾರ್ಯಾಚರಣೆಯನ್ನು ಪ್ರಶ್ನಿಸುತ್ತಿರುವವರನ್ನು ತರಾಟೆಗೆ ತೆಗೆದುಕೊಂಡಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿಗೆ ನಗದು ಬಹುಮಾನವನ್ನು ಘೋಷಿಸಿದ್ದಾರೆ.

ರಾಜ್ಯದ ಸ್ಥಾಪನಾ ದಿನದ ಸಂದರ್ಭ ಮಂಗಳವಾರ ಭಾಷಣ ನೀಡುತ್ತಿದ್ದ ಅವರು, ‘‘ಪೊಲೀಸರು ಸರಿಯಾದ ಕ್ರಮ ಕೈಗೊಂಡಿದ್ದಾರೆಯೇ ಅಥವಾ ಅವರು ತಪ್ಪು ಮಾಡಿದ್ದಾರೆಯೇ ಎಂಬುದನ್ನು ಇಡೀ ಜಗತ್ತು ತಿಳಿಯಲಿ’’ ಎಂದು ಅವರು ಹೇಳಿದರು. ‘‘ಪ್ರಕರಣಗಳ ಶೀಘ್ರ ವಿಚಾರಣೆ ನಡೆಯುವಂತೆ ನಾವು ನೋಡಿಕೊಳ್ಳಬೇಕು. ಎಷ್ಟು ಸಮಯ ಅವರನ್ನೆಲ್ಲಾ ಜೈಲಿನಲ್ಲಿಡಬಹುದು. ಕೆಲವರು ಜೈಲಿನಲ್ಲೂ ಚಿಕನ್ ಬಿರಿಯಾನಿ ತಿನ್ನುತ್ತಾರೆ. ಹೆಚ್ಚು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವ ಅಗತ್ಯವಿದೆ’’ ಎಂದವರು ಹೇಳಿದರು.

ಜೈಲಿನಿಂದ ತಪ್ಪಿಸಿಕೊಂಡಿದ್ದವರು ಸ್ಫೋಟ ಪ್ರಕರಣಗಳು, ಬ್ಯಾಂಕ್ ದರೋಡೆ ಹಾಗೂ ಎಟಿಎಸ್ ಕಾನ್ ಸ್ಟೇಬಲ್ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದವರು. ಅವರು ರಾಜ್ಯಕ್ಕೆ ಹಾಗೂ ದೇಶಕ್ಕೆ ಅಪಾಯಕಾರಿಯಾಗಿದ್ದರು ಎಂದರು. ‘‘ಅವರು ತಪ್ಪಿಸಿಕೊಂಡಿದ್ದರೇ ಅಥವಾ ಅವರನ್ನು ತಪ್ಪಿಸಿಕೊಂಡು ಹೋಗಲು ಬಿಡಲಾಯಿತೇ ಎಂದು ಕೆಲ ರಾಜಕಾರಣಿಗಳು ಹೇಳಿಕೆ ನೀಡುವ ಮೂಲಕ ಈ ಕಾರ್ಯಾಚರಣೆಯಲ್ಲಿ ಪ್ರಾಣ ತ್ಯಾಗ ಮಾಡಿದ ಮುಖ್ಯ ಪೇದೆ ರಮಾಶಂಕರ್ ಯಾದವ್ ಅವರಿಗೆ ಅನ್ಯಾಯ ಮಾಡಿದ್ದಾರೆ'' ಎಂದರು.

ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ಸಿಬ್ಬಂದಿಗೆ 2 ಲಕ್ಷ ರೂ. ನಗದು ಬಹುಮಾನ ಘೋಷಿಸಿದ ಅವರು, ಆರೋಪಿಗಳನ್ನು ಹುಡುಕಲು ಸಹಕರಿಸಿದವರಿಗೆ 1 ಲಕ್ಷ ರೂ. ನಗದು ಬಹುಮಾನ ಘೋಷಿಸಿದರು. ಸಿಮಿ ಕಾರ್ಯಕರ್ತರ ಹತ್ಯೆಯ ಬಗ್ಗೆ ವಿಪಕ್ಷಗಳು ಅನಗತ್ಯ ರಾಜಕೀಯ ನಡೆಸುತ್ತಿವೆಯೆಂದೂ ಅವರು ಆರೋಪಿಸಿದರು.

ಅತ್ತ ದಿಲ್ಲಿಯಲ್ಲಿ ಕೇಂದ್ರ ಗೃಹ ರಾಜ್ಯ ಸಚಿವ ಕಿರೆನ್  ರಿಜಿಜು ಕೂಡ ಈ ವಿಷಯದ ಬಗ್ಗೆ ಮಾತನಾಡುತ್ತಾ, ಪೊಲೀಸರ ಹಾಗೂ ಭದ್ರತಾ ಪಡೆಗಳ ಕ್ರಮಗಳ ಬಗ್ಗೆ ಸಂಶಯ ವ್ಯಕ್ತಪಡಿಸುವ ಅಭ್ಯಾಸವನ್ನು ಬಿಟ್ಟು ಬಿಡಬೇಕೆಂದು ಹೇಳಿದರು. ‘‘ಇದು ಉತ್ತಮ ಸಂಸ್ಕೃತಿಯಲ್ಲ. ಆದರೆ ಭಾರತದಲ್ಲಿ ಇತ್ತೀಚೆಗೆ ಜನರು ಅನಗತ್ಯ ಸಂಶಯಗಳು ಹಾಗೂ ಪ್ರಶ್ನೆಗಳನ್ನೆತ್ತುತ್ತಿದ್ದಾರೆ. ನಿಜ ಸಂಗತಿ ಹೊರ ಬರುತ್ತದೆ. ಆದರೆ ಯಾವುದೇ ಪತ್ರಿಕೆಯಲ್ಲಿ ಸುದ್ದಿ ಬಂದಿದೆಯೆಂದ ಮಾತ್ರಕ್ಕೆ ಎಚ್ಚರಿಕೆಯ ಕರೆಗಂಟೆ ಬಾರಿಸುವಂತಿಲ್ಲ,’’ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News