ಪಾಕಿಸ್ತಾನಿ ದೂತವಾಸದ 6 ಅಧಿಕಾರಿಗಳು ಹಿಂದಕ್ಕೆ
ಹೊಸದಿಲ್ಲಿ, ನ.2: ಇಲ್ಲಿನ ಪಾಕಿಸ್ತಾನಿ ದೂತವಾಸದ ಸಿಬ್ಬಂದಿಯೊಬ್ಬ ಬೇಹುಗಾರಿಕೆಯ ಆರೋಪದಲ್ಲಿ ಹಿಡಿಯಲ್ಪಟ್ಟು ಆತನ ದೇಶಕ್ಕೆ ಹಿಂದೆ ಕಳುಹಿಸಲ್ಪಟ್ಟ ಬಳಿಕ ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಉದ್ವಿಗ್ನತೆಯ ನಡುವೆಯೇ ಇನ್ನೂ 6 ಮಂದಿ ಅಧಿಕಾರಿಗಳು ಇಂದು ಪಾಕಿಸ್ತಾನಕ್ಕೆ ಮರಳಿದ್ದಾರೆ.
ಭಾರತ ಬಿಟ್ಟು ತೆರಳಿರುವ ರಾಜತಂತ್ರಜ್ಷರ ಸಂಖ್ಯೆಯ ಕುರಿತು ಅಧಿಕೃತ ದೃಢಿಕರಣ ಬಂದಿಲ್ಲವಾದರೂ 6 ಮಂದಿ ಅಧಿಕಾರಿಗಳು ಪಾಕಿಸ್ತಾನಕ್ಕೆ ಮರಳಿದ್ದಾರೆ ಅಥವಾ ಮರಳುವ ಸನ್ನಾಹದಲ್ಲಿದ್ದಾರೆಂದು ಪಾಕಿಸ್ತಾನಿ ದೂತವಾಸದ ಮೂಲಗಳು ತಿಳಿಸಿವೆ.
ಈ ಕಳಂಕಿತ ವಾತಾವರಣದಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ಅಸಾಧ್ಯವಾದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತ ಸರಕಾರವು ತಮ್ಮ ರಾಜತಾಂತ್ರಿಕರನ್ನು ಬೆದರಿಸುತ್ತಿದೆ ಹಾಗೂ ಬ್ಲಾಕ್‌ಮೇಲ್ ಮಾಡುತ್ತಿದೆ. ಆದುದರಿಂದ ಈ ಪರಿಸ್ಥಿತಿಯಲ್ಲಿ ಈ ದೇಶದಲ್ಲಿ ನಿಂತು ಕೆಲಸ ಮಾಡುವುದು ತಮಗೆ ಅಸಾಧ್ಯವಾಗಿದೆಯೆಂದು ಅವು ಆರೋಪಿಸಿವೆ.
ವಾಣಿಜ್ಯ ಸಲಹೆಗಾರ ಸಯ್ಯದ್ ಫಾರೂಕ್ ಹಬೀಬ್, ಮುಖ್ಯ ಕಾರ್ಯದರ್ಶಿಗಳಾದ ಖದೀಂ ಹುಸೇನ್, ಮುದಸ್ಸಿರ್ ಚೀಮಾ ಹಾಗೂ ಶಾಹಿದ್ ಇಕ್ಬಾಲ್ ಪಾಕಿಸ್ತಾನಕ್ಕೆ ಹಿಂದಿರುಗಿದವರಲ್ಲಿ ಸೇರಿದ್ದಾರೆಂದು ಮೂಲಗಳು ತಿಳಿಸಿವೆ.