×
Ad

ಟ್ರಂಪ್, ರಶ್ಯ ನಂಟಿನ ಮಾಹಿತಿ ಯಾಕೆ ಬಹಿರಂಗ ಮಾಡುವುದಿಲ್ಲ?

Update: 2016-11-02 21:23 IST

ನ್ಯೂಯಾರ್ಕ್, ನ. 2: ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ರಶ್ಯದ ನಡುವಿನ ನಂಟಿನ ಬಗ್ಗೆ ತನಗೆ ತಿಳಿದಿರುವುದನ್ನು ಎಫ್‌ಬಿಐ ಬಹಿರಂಗಪಡಿಸಬೇಕು ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರ ಉನ್ನತ ಸಹಾಯಕರೋರ್ವರು ಮಂಗಳವಾರ ಒತ್ತಾಯಿಸಿದ್ದಾರೆ


ಹಿಲರಿಯ ಇಮೇಲ್‌ಗಳ ಕುರಿತ ತನ್ನ ತನಿಖೆಯನ್ನು ಅನ್ಯಾಯವಾಗಿ ಬಹಿರಂಗಪಡಿಸಿರುವ ಎಫ್‌ಬಿಐ, ಟ್ರಂಪ್ ಕುರಿತಂತೆ ವೌನವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹಿಲರಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದಾಗ ಬಳಸಿದ್ದ ಖಾಸಗಿ ಸರ್ವರ್‌ಗೆ ಸಂಬಂಧಿಸಿರಬಹುದಾದ ಹೊಸ ಇಮೇಲ್‌ಗಳು ಪತ್ತೆಯಾಗಿವೆ ಎಂಬುದಾಗಿ ಎಫ್‌ಬಿಐ ನಿರ್ದೇಶಕ ಜೇಮ್ಸ್ ಕಾಮಿ ಶುಕ್ರವಾರ ಘೋಷಿಸಿದ್ದರು.


ನವೆಂಬರ್ 8ರಂದು ನಡೆಯಲಿರುವ ಚುನಾವಣೆಗೆ ವಾರ ಉಳಿದಿರುವಂತೆಯೇ, ಎಫ್‌ಬಿಐ ನಿರ್ದೇಶಕರ ಹೇಳಿಕೆಯಿಂದ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ಹಿಲರಿ ಪ್ರಚಾರ ಬಣ ಶ್ರಮಿಸುತ್ತಿದೆ.
ಇದರ ಪ್ರಯೋಜನವನ್ನು ಪಡೆದುಕೊಂಡಿರುವ ಟ್ರಂಪ್, ತನ್ನ ಎದುರಾಳಿಯ ವಿರುದ್ಧದ ಟೀಕೆಗಳನ್ನು ತೀವ್ರಗೊಳಿಸಿದ್ದಾರೆ. ಅದೂ ಅಲ್ಲದೆ, ಎಬಿಸಿ/ವಾಶಿಂಗ್ಟನ್ ಪೋಸ್ಟ್ ನಡೆಸಿದ ಸಮೀಕ್ಷೆಯಲ್ಲಿ ಕೊಂಚ ಮುನ್ನಡೆಯನ್ನೂ ಗಳಿಸಿದ್ದಾರೆ.


ಅಮೆರಿಕದ ಚುನಾವಣೆಯಲ್ಲಿ ರಶ್ಯದ ಪಾತ್ರ ಅಥವಾ ಟ್ರಂಪ್ ಮತ್ತು ಅವರ ಹಿರಿಯ ಸಹಾಯಕರು ಮತ್ತು ರಶ್ಯದ ನಡುವಿನ ನಂಟಿನ ಕುರಿತ ತನ್ನ ತನಿಖೆಯ ಬಗ್ಗೆ ಎಫ್‌ಬಿಐ ಯಾಕೆ ಮಾಹಿತಿ ಪ್ರಕಟಿಸಿಲ್ಲ ಎಂದು ಹಿಲರಿ ಪ್ರಚಾರದ ನಿರ್ವಾಹಕ ರಾಬಿ ಮೂಕ್ ಪ್ರಶ್ನಿಸಿದರು.


‘‘ಅಧ್ಯಕ್ಷೀಯ ಅಭ್ಯರ್ಥಿಗಳ ಕುರಿತ ತನಿಖೆಗಳ ಮಾಹಿತಿಯನ್ನು ಬಹಿರಂಗಪಡಿಸುವ ಕೆಲಸದಲ್ಲಿ ನೀವು ತೊಡಗಿರುವಿರಾದರೆ, ಡೊನಾಲ್ಡ್ ಟ್ರಂಪ್ ಬಗ್ಗೆ ನೀವು ಹೊಂದಿರುವ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸಿ. ರಶ್ಯನ್ನರೊಂದಿಗೆ ಅವರು ಹೊಂದಿರುವ ನಂಟಿನ ಕುರಿತ ಮಾಹಿತಿಯನ್ನು ಬಿಡುಗಡೆ ಮಾಡಿ’’ ಎಂದು ಮೂಕ್ ಸಿಎನ್‌ಎನ್ ಟಿವಿ ಚಾನೆಲ್‌ನಲ್ಲಿ ಸವಾಲು ಹಾಕಿದರು.

ಹಿಲರಿಯ ಮುನ್ನಡೆ ಪ್ರಮಾಣದಲ್ಲಿ ಇಳಿಕೆ
ಹಿಲರಿ ಕ್ಲಿಂಟನ್‌ರ ಖಾಸಗಿ ಇಮೇಲ್ ಸರ್ವರ್ ಕುರಿತ ತನಿಖಾ ಮಾಹಿತಿಯನ್ನು ಕಳೆದ ವಾರ ಎಫ್‌ಬಿಐ ಮುಖ್ಯಸ್ಥ ಕಾಮಿ ಬಹಿರಂಗಪಡಿಸಿದ ಬಳಿಕ, ಹಿಲರಿಯ ಮುನ್ನಡೆ ಕೊಂಚ ಕಡಿಮೆಯಾಗಿರುವುದನ್ನು ಚುನಾವಣಾ ಸಮೀಕ್ಷೆಗಳು ತೋರಿಸಿವೆ.
ರಾಯ್ಟರ್ಸ್/ಇಪ್ಸಾಸ್ ನಡೆಸಿದ ಸಮೀಕ್ಷೆಯಲ್ಲಿ ಹಿಲರಿ ತನ್ನ ಎದುರಾಳಿ ಟ್ರಂಪ್‌ಗಿಂತ 5 ಶೇಕಡದಷ್ಟು ಮುನ್ನಡೆ ಹೊಂದಿದ್ದಾರೆ.
ಸೋಮವಾರ ಬಿಡುಗಡೆಯಾದ ಸಮೀಕ್ಷೆಯ ಪ್ರಕಾರ, ಹಿಲರಿಯನ್ನು 44 ಶೇ. ಮತದಾರರು ಬೆಂಬಲಿಸಿದರೆ, ಟ್ರಂಪ್‌ರನ್ನು 39 ಶೇ. ಮತದಾರರು ಬೆಂಬಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News