ಇಂಗ್ಲೆಂಡ್ ವಿರುದ್ಧ ಸರಣಿಯಿಂದ ರೋಹಿತ್ ಶರ್ಮ ಹೊರಕ್ಕೆ
ಹೊಸದಿಲ್ಲಿ, ನ.2: ಇತ್ತೀಚೆಗೆ ಕೊನೆಗೊಂಡ ನ್ಯೂಝಿಲೆಂಡ್ ವಿರುದ್ಧದ ಸರಣಿಯ ವೇಳೆ ಗಾಯಗೊಂಡಿದ್ದ ಭಾರತದ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ರೋಹಿತ್ ಕಾಲುನೋವಿನಿಂದ ಬಳಲುತ್ತಿದ್ದು ಸರ್ಜರಿಗೆ ಒಳಗಾಗುವ ಸಾಧ್ಯತೆಯಿದೆ. ರೋಹಿತ್ ಆರರಿಂದ ಎಂಟು ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.
ಇತ್ತೀಚೆಗೆ ನ್ಯೂಝಿಲೆಂಡ್ ವಿರುದ್ಧದ ಸರಣಿಯ ವೇಳೆ ಉತ್ತಮ ಸ್ಕೋರ್ ಗಳಿಸಿದ್ದ ರೋಹಿತ್ ಟೆಸ್ಟ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿ ಮಧ್ಯಮ ಕ್ರಮಾಂಕದಲ್ಲಿ ಖಾಯಂ ಸ್ಥಾನ ಪಡೆಯುವ ಅವಕಾಶವಿತ್ತು. ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ 3 ಪಂದ್ಯಗಳಲ್ಲಿ 3 ಅರ್ಧಶತಕಗಳ ಸಹಿತ ಒಟ್ಟು 238 ರನ್ ಕಲೆ ಹಾಕಿದ್ದರು.
2013ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಸ್ಮರಣೀಯ ಚೊಚ್ಚಲ ಪಂದ್ಯ ಆಡಿದ್ದ ರೋಹಿತ್ ಈ ವರೆಗೆ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಎರಡು ಶತಕ ಹಾಗೂ 7 ಅರ್ಧಶತಕಗಳ ಸಹಿತ ಒಟ್ಟು 1,184 ರನ್ ಗಳಿಸಿದ್ದರು.