×
Ad

‘ಎಲ್ಲರನ್ನೂ ತೊಲಗಿಸಿ ಬಿಡಿ’

Update: 2016-11-03 22:47 IST

ಭೋಪಾಲ್, ಆ.3: ಶಂಕಿತ ಎಂಟು ಸಿಮಿ ಕಾರ್ಯಕರ್ತರನ್ನು ಮಧ್ಯಪ್ರದೇಶ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆಗೈದ ಘಟನೆಯು ಇದೀಗ ಹೊಸ ತಿರುವನ್ನು ಪಡೆದುಕೊಂಡಿದೆ. ಸೋಮವಾರ ಬೆಳಗ್ಗೆ ಭೋಪಾಲ್ ಸೆಂಟ್ರಲ್ ಜೈಲಿನಿಂದ ಪರಾರಿಯಾದ ಈ ಕೈದಿಗಳನ್ನು ಬಂಧಿಸುವ ಬದಲು ಅವರನ್ನು ಹತ್ಯೆಗೈಯವುದೇ ಪೊಲೀಸರ ಮುಖ್ಯ ಗುರಿಯಾಗಿತ್ತು ಎಂದು ಮಧ್ಯಪ್ರದೇಶದ ಪೊಲೀಸ್ ಕಂಟ್ರೋಲ್ ರೂಂನಿಂದ ಲಭ್ಯವಾಗಿರುವ ಆಡಿಯೋ ತುಣುಕುಗಳಿಂದ ಬಹಿರಂಗವಾಗಿದೆ. ಎಂಟು ಮಂದಿ ಕೈದಿಗಳನ್ನು ಬೆನ್ನಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿರುವ ತನ್ನ ಸಹದ್ಯೋಗಿಗಳಿಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಸಬ್ ಕೋ ನಿಪ್ಟಾ ದೋ’ (ಎಲ್ಲರನ್ನೂ ತೊಲಗಿಸಿ ಬಿಡಿ) ಎಂದು ಆದೇಶಿಸುವ ವೈರ್‌ಲೆಸ್ ರೇಡಿಯೋ ಸಂಭಾಷಣೆಗಳು ಮಾಧ್ಯಮಗಳಿಗೆ ಲಭ್ಯವಾಗಿವೆ.

ಈ ‘ಎನ್‌ಕೌಂಟರ್’ ಸುಮಾರು ಒಂದು ತಾಸಿನೊಳಗೆ ಕೊನೆಗೊಂಡಿತೆಂಬ ಮಧ್ಯಪ್ರದೇಶ ಪೊಲೀಸರ ಹೇಳಿಕೆಯನ್ನು ಈ ಆಡಿಯೋ ತುಣುಕುಗಳು ಸಂಪೂರ್ಣವಾಗಿ ವ್ಯತಿರಿಕ್ತವಾಗಿವೆ. ಒಂದು ವೇಳೆ ಎನ್‌ಕೌಂಟರ್‌ನಲ್ಲಿ ಯಾರಾದರೂ ಆರೋಪಿಗಳು ಬದುಕುಳಿದಿದ್ದಲ್ಲಿ ಅವರ ಚಿಕಿತ್ಸೆಯ ವೆಚ್ಚವನ್ನು ಅಧಿಕಾರಿಗಳೇ ಭರಿಸಬೇಕೆಂದಿದ್ದರೂ, ಪೊಲೀಸ್ ಅಧಿಕಾರಿಗಳು ಎನ್‌ಕೌಂಟರ್ ನಡೆದ ಸ್ಥಳಕ್ಕೆ ಆ್ಯಂಬುಲೆನ್ಸ್‌ಗಳನ್ನು ಕಳುಹಿಸುವುದನ್ನು ವಿರೋಧಿಸಿರುವುದು ಕೂಡಾ ಈ ಸಂಭಾಷಣೆಗಳಿಂದ ತಿಳಿದುಬರುತ್ತದೆ.

ಒಂದು ವೇಳೆ ಇನ್ನೊಂದು ನಕಲಿ ಕಾರ್ಯಾಚರಣೆ ನಡೆಸಬೇಕಿದ್ದಲ್ಲಿ, ಎನ್‌ಕೌಂಟರ್ ನಡೆದ ಸ್ಥಳವನ್ನು ಯಾರೂ ಸಮೀಪಿಸದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತನ್ನ ಸಹದ್ಯೋಗಿಗಳಿಗೆ ಆದೇಶಿಸಿರುವುದು ಕೂಡಾ ಆಡಿಯೋ ತುಣುಕುಗಳಲ್ಲಿ ಬಹಿರಂಗವಾಗಿವೆ. ಈ ಆಡಿಯೋ ತುಣುಕಿನ ಒಂದು ಭಾಗದಲ್ಲಿ ಗಂಡು ಧ್ವನಿಯೊಂದು, ಪೊಲೀಸರು ಪರಾರಿಯಾದವರಲ್ಲಿ ಕನಿಷ್ಠ ಒಬ್ಬನನ್ನಾದರೂ ಜೀವದಿಂದಿರಿಸುವಂತೆ ಹೇಳುವುದು ಕೇಳುತ್ತದೆ. ಕುತೂಹಲಕರವೆಂದರೆ, ಪರಾರಿಯಾದ ಸಿಮಿ ಕೈದಿಗಳು ನಿರಾಯುಧರಾಗಿದ್ದರೆಂದು ಮಧ್ಯಪ್ರದೇಶದ ಭಯೋತ್ಪಾದನಾ ನಿಗ್ರಹದಳದ ವರಿಷ್ಠ ಹೇಳಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅಡಿಯೋ ಸಂಭಾಷಣೆಯಲ್ಲಿ ಪೊಲೀಸರು, ಶಂಕಿತ ಉಗ್ರರು ತಮ್ಮ ಮೇಲೆ ಗುಂಡೆಸೆಯುತ್ತಿದ್ದಾರೆಂದು ಹೇಳುವುದು ಕೇಳಿಬಂದಿದೆ. ಇದು ಉದ್ದೇಶಪೂರ್ವಕವಾಗಿ ದಾಖಲಿಸಿರುವ ಧ್ವನಿಮುದ್ರಿಕೆಗಳಾಗಿರಬಹುದು ಎಂದೂ ಶಂಕಿಸಲಾಗಿದೆ. ಈ ಎನ್‌ಕೌಂಟರ್‌ಗೆ ಸಂಬಂಧಿಸಿ ಮಾಧ್ಯಮಗಳಿಗೆ ಎರಡು ಆಡಿಯೋ ಕ್ಲಿಪ್‌ಗಳು ಲಭ್ಯವಾಗಿದೆ. ಅವುಗಳಲ್ಲಿ ಒಂದು ಧ್ವನಿಮುದ್ರಣವು 1 ನಿಮಿಷ 24 ಸೆಕೆಂಡ್‌ಗೆ ಕೊನೆಗೊಂಡರೆ, ಇನ್ನೊಂದು 9 ನಿಮಿಷ 22 ಸೆಕೆಂಡ್‌ಗಳಿಗೆ ಮುಕ್ತಾಯವಾಗಿದೆ.

ಆಂಗ್ಲ ದಿನಪತ್ರಿಕೆಯೊಂದಕ್ಕೆ ಈ ಅಡಿಯೋ ಸಂಭಾಷಣೆಗಳ ತುಣುಕುಗಳು ಲಭ್ಯವಾಗಿದ್ದು, ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ. ವ್ಯಕ್ತಿಯೊಬ್ಬ ನಗುವುದರೊಂದಿಗೆ ಸಂಭಾಷಣೆ ಪ್ರಾರಂಭಿಸುತ್ತಾನೆ- ‘‘ಅಲ್ಲಿ ಒಟ್ಟು 5 ಗುರಿಗಳಿವೆ. ಅವರೆಲ್ಲಾ ಒಟ್ಟಾಗಿ ಪಲಾಯನಗೈಯುತ್ತಿದ್ದಾರೆ’’ ಎಂದು ಆತ ಹೇಳುತ್ತಾನೆ.

 ಇದಕ್ಕೆ ಇನ್ನೊಂದು ಧ್ವನಿ ಹೀಗೆ ಉತ್ತರಿಸುತ್ತದೆ- ‘‘ಮೈಕ್ 12 ಹಾಗೂ ಸಿಗ್ಮಾ 113 ಮುನ್ನಡೆಯಿರಿ. ಪೀಚೆ ನಹಿ ಹಟ್ನಾ ಹೈ, ಜಿತ್‌ನಿ ಚಾರ್ಜಿ ಹೈ ಉನ್‌ಕೊ ಬತಾವೊ... ಅವರನ್ನು ಸುತ್ತುವರಿಯಿರಿ. ಇಡೀ ಕಾರ್ಯವನ್ನು ಪೂರ್ತಿಗೊಳಿಸಿ...’’

ಶೂಟೌಟ್‌ನಲ್ಲಿ ನಿರತರಾದ ಪೊಲೀಸರಿಗೆ, ಧ್ವನಿಯೊಂದು ‘ಸಬ್‌ಕೋ ನಿಪ್ಟಾ ದೋ’ (ಎಲ್ಲರನ್ನೂ ಕೊಲ್ಲಿ) ಎಂದು ಆದೇಶಿಸುವ ಧ್ವನಿಯೊಂದು ಅಡಿಯೋ ಕ್ಲಿಪ್‌ನಲ್ಲಿ ಕೇಳಿಬಂದಿದೆ. ಕಂಟ್ರೋಲ್ ರೂಂ ನಿರ್ವಾಹಕರೊಬ್ಬರು ಪೊಲೀಸ್ ತಂಡಗಳಿಗೆ ಹೀಗೆ ಹೇಳುತ್ತಾರೆ- ‘‘ಮೈಕ್ 1, ಸಾಹೇಬ್ ಬೋಲ್ ರಹೆ ಹೈ ನಿಪ್ಟಾ ದೊ (ಎಲ್ಲರನ್ನೂ ಕೊಲ್ಲಿ ಎಂದು ಸಾಹೇಬ್ ಹೇಳುತ್ತಿದ್ದಾರೆ)’’.

ಎಲ್ಲಾ ಎಂಟು ಮಂದಿಯನ್ನು ಹತ್ಯೆಗೈಯಬೇಕೆಂಬ ಆದೇಶವು ಉನ್ನತ ಮಟ್ಟದಿಂದ ಬಂದಿತ್ತೆಂಬುದನ್ನು ಈ ಸಂಭಾಷಣೆಯು ಸೂಚಿಸುತ್ತದೆ. ಈ ತುಣುಕಿನ ಕೊನೆಯಲ್ಲಿ, ಗಂಡು ಧ್ವನಿಯೊಂದು, ‘‘ಪೊಲೀಸ್ ಕಂಟ್ರೋಲ್‌ರೂಂನಲ್ಲಿದ್ದುಕೊಂಡೇ ಕೆಲಸ ಮಾಡುವ ಇಂತಹ ಹಿರಿಯ ಅಧಿಕಾರಿಗಳ ಕಾರ್ಯವನ್ನು ಪ್ರಶಂಸಿಸಲೇಬೇಕು’’ ಎಂದು ಹೇಳುತ್ತದೆ.

ಮುಂದೆ, ಸಂಭಾಷಣೆಯಲ್ಲಿ ತೊಡಗಿರುವ ಧ್ವನಿಯೊಂದು ಹೀಗೆ ಹೇಳುತ್ತದೆ- ‘‘ನಾವು ಮುಂದೆ ಹೋಗುತ್ತಾ ಇದ್ದೇವೆ. ನಾವು ಅವರನ್ನು ಸುತ್ತುವರಿದಿದ್ದೇವೆ (ೇರಾಬಂದಿ). ನಾವು ನಿಮ್ಮೆಡೆಗೆ ಬರುತ್ತಿದ್ದೇವೆ. ಆಜ್ ಹೀ ಗೇಮ್ ಕರ್‌ನಾ ಹೈ (ನಾವು ಇಂದೇ ಆಟ ಮುಗಿಸಬೇಕಾಗಿದೆ)’’.

ಪರಾರಿಯಾದ ಎಲ್ಲಾ ಕೈದಿಗಳನ್ನು ಪೊಲೀಸ್ ತಂಡಗಳು 1 ಕಿ.ಮೀ. ಪರಿಧಿಯೊಳಗೆ ಸುತ್ತುವರಿದಿವೆ ಯೆಂದು ಪೊಲೀಸ್ ಅಧಿಕಾರಿಗಳು ಹೇಳುತ್ತಿರುವುದು ಆಡಿಯೋ ತುಣುಕಿನಲ್ಲಿ ಕೇಳಿಬಂದಿದೆ.

ಸಂಭಾಷಣೆಯ ನಡುವೆ ಯಾರೋ ಒಬ್ಬರು ಹೀಗೆ ಪ್ರತಿಕ್ರಿಯಿಸುತ್ತಾರೆ. ‘‘ಖೇಲ್ ಕರ್‌ದಿಯಾ ಆಬ್ ರುಕ್ ಜಾವೊ (ಆಟ ಮುಗಿದಿದೆ. ಈಗ ನೀವು ನಿಲ್ಲಬಹುದು)’’. ಶೂಟೌಟ್ ನಡೆದ ಸ್ಥಳಕ್ಕೆ ಎಸ್ಪಿ ಕೂಡಾ ತೆರಳುತ್ತಿದ್ದಾರೆಂಬುದನ್ನು ಈ ಸಂಭಾಷಣೆಯು ಬಹಿರಂಗಪಡಿಸಿದೆ.

 ಇದಕ್ಕಿಂತಲೂ ಹೆಚ್ಚಾಗಿ, ಪರಾರಿಯಾದ ಎಂಟು ಮಂದಿಯಲ್ಲಿ ಐವರು ಪತ್ತೆಯಾದ ಕೂಡಲೇ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು ಹಾಗೂ ಉಳಿದ ಮೂವರು ವಿವಿಧ ದಿಕ್ಕುಗಳಿಗೆ ಪಲಾಯನ ಮಾಡುತ್ತಿದ್ದಾಗ ಅವರಿಗೂ ಗುಂಡಿಕ್ಕಲಾಯಿತೆಂಬುದಕ್ಕೆ ಈ ಆಡಿಯೋ ತುಣುಕುಗಳು ಸುಳಿವು ನೀಡುತ್ತವೆ.

ಈ ಆಡಿಯೋ ಕ್ಲಿಪ್‌ನ ಕೊನೆಯಲ್ಲಿ ಧ್ವನಿಯೊಂದು ತನ್ನ ಸಹದ್ಯೋಗಿಗಳನ್ನು ಅಭಿನಂದಿಸುವುದು ಕೇಳಿಬಂದಿದೆ. ‘‘ಬದಾಯಿ ಹೋ. ಎಲ್ಲ ಎಂಟು ಮಂದಿ ಸತ್ತಿದ್ದಾರೆ. ಅಪರಾಧ ದಳದ ಡಿಎಸ್ಪಿ ಅದನ್ನು ದೃಢಪಡಿಸಿದ್ದಾರೆ’’ ಎಂದು ಆ ಧ್ವನಿ ಹೇಳಿದೆ.

ಎಲ್ಲಾ ಐವರು ಶಂಕಿತರನ್ನು ಸುತ್ತುವರಿದು ಅವರನ್ನು ಗುಂಡಿಕ್ಕಿ ಕೊಂದಿರುವುದಾಗಿ ಪೊಲೀಸರು ಹೇಳಿದಾಗಲೂ ಅಧಿಕಾರಿಗಳು ಇದೇ ರೀತಿಯ ಪ್ರತಿಕ್ರಿಯೆ ನೀಡಿದ್ದರು. ‘‘ಶಾಭಾಷ್ ಕೋಯಿ ನಹಿ...’’ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದುದು ಆಡಿಯೋ ತುಣುಕಿನಲ್ಲಿ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News